ಆಶಾ ಕಾರ್ಯಕರ್ತೆಯರಿಗೆ ಭರ್ಜರಿ ಉಡುಗೊರೆ ಕೊಟ್ಟ ಹೊಸ ಸಿಎಂ ಜಗನ್ ರೆಡ್ಡಿ
Recommended Video
ಅಮರಾವತಿ, ಜೂನ್ 03: ಆಂಧ್ರ ಪ್ರದೇಶ ಸಿಎಂ ಆಗಿ ಅಧಿಕಾರ ವಹಿಸಿಕೊಂಡಂದಿನಿಂದ ಸತತ ಹೊಸ ಯೋಜನೆಗಳನ್ನು ನೀಡುತ್ತಿರುವ ಜಗನ್ ಮೋಹನ್ ರೆಡ್ಡಿ ಇಂದು ರಾಜ್ಯದ ಆಶಾ ಕಾರ್ಯಕರ್ತೆಯರಿಗೆ ಭರ್ಜರಿ ಗಿಫ್ಟ್ ನೀಡಿದ್ದಾರೆ.
ಸರ್ಕಾರ ಆಶಾ ಕಾರ್ಯಕರ್ತೆಯರಿಗೆ ನೀಡುತ್ತಿದ್ದ ಗೌರವ ಧನವನ್ನು ಮೂರು ಸಾವಿರದಿಂದ ಒಂದೇ ಬಾರಿ 10,000 ರೂಪಾಯಿಗೆ ಏರಿಸಿದ್ದಾರೆ. ಲಕ್ಷಾಂತರ ಆಶಾ ಕಾರ್ಯಕರ್ತೆಯರು ಇದರಿಂದ ನೆಮ್ಮದಿಯ ಉಸಿರು ಬಿಡುವಂತಾಗಿದೆ.
ಪ್ರಮಾಣ ವಚನ ಸ್ವೀಕರಿಸಿದ ದಿನವೇ ಜಗನ್ ಮೋಹನ್ ರೆಡ್ಡಿ ಅವರ ವೃದ್ಧಾಪ್ಯ ವೇತನವನ್ನು ಹೆಚ್ಚು ಮಾಡಿದ್ದರು. ಅದಾದ ಕೆಲವೇ ದಿನಗಳಲ್ಲಿ ಈಗ ಅದಕ್ಕಿಂತಲೂ ದೊಡ್ಡ ನಿರ್ಣಯವನ್ನು ಕೈಗೊಂಡಿದ್ದು, ಕಷ್ಟಪಟ್ಟು ನೆಲಮಟ್ಟದಲ್ಲಿ ದುಡಿಯುವ ಆಶಾ ಕಾರ್ಯಕರ್ತೆಯರಿಗೆ ಸಲ್ಲಬೇಕಾದ ಗೌರವವನ್ನು ಸಲ್ಲಿಸಿದ್ದಾರೆ.

ಕರ್ನಾಟಕದಲ್ಲಿ ಕೇವಲ ಮೂರು ಸಾವಿರ ಕೊಡಲಾಗುತ್ತಿದೆ
ಕರ್ನಾಟಕದಲ್ಲಿ ಆಶಾ ಕಾರ್ಯಕರ್ತೆಯರ ಗೌರವ ಧನ ಮೂರು ಸಾವಿರಗಳಿದೆ. ಈ ಮೊದಲು ಅದು ಕೇವಲ ಒಂದೂವರೆ ಸಾವಿರವಷ್ಟೆ ಇತ್ತು, ಸಾಕಷ್ಟು ಪ್ರತಿಭಟನೆ ಬಳಿಕ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಮೂರು ಸಾವಿರ ರೂಪಾಯಿಗೆ ಏರಿಸಲಾಗಿತ್ತು.

ಬೇರೆ ರಾಜ್ಯಗಳಲ್ಲಿ ಹೆಚ್ಚು ಮಾಡುತ್ತಾರಾ?
ಜಗನ್ ಮೋಹನ್ ರೆಡ್ಡಿ ಅವರಿಂದ ಪ್ರೇರಿತರಾಗಿ ಕರ್ನಾಟಕ ಸೇರಿ ಇತರೆ ರಾಜ್ಯಗಳಲ್ಲಿಯೂ ಆಶಾ ಕಾರ್ಯಕರ್ತೆಯರ ಗೌರವ ಧನ ಹೆಚ್ಚಳ ಮಾಡುತ್ತಾರೆಯೇ ನೋಡಬೇಕಿದೆ. ಬಹುತೇಕ ಎಲ್ಲಾ ದೊಡ್ಡ ರಾಜ್ಯಗಳಲ್ಲಿ ಆಶಾ ಕಾರ್ಯಕರ್ತೆಯರು ಕಾರ್ಯ ನಿರ್ವಹಿಸುತ್ತಿದ್ದಾರೆ.

ಆರೋಗ್ಯ ಇಲಾಖೆಯ ಬೇರು ಆಶಾ ಕಾರ್ಯಕರ್ತೆಯರು
ವೈದ್ಯಕೀಯ ಮತ್ತು ಆರೋಗ್ಯ ಇಲಾಖೆಯ ಬೇರು ಆಶಾ ಕಾರ್ಯಕರ್ತೆಯರು ಎಂದೇ ಹೇಳಲಾಗುತ್ತದೆ. ಆಶಾ ಕಾರ್ಯಕರ್ತೆಯರು ನೆಲ ಮಟ್ಟದಲ್ಲಿ ಕೆಲಸ ಮಾಡಿ, ಸಮಾಜದ ಕಟ್ಟ ಕಡೆಯ ವ್ಯಕ್ತಿಯನ್ನೂ ಗುರುತಿಸಿ ಆತನಿಗೆ ವೈದ್ಯಕೀಯ ಸವಲತ್ತು ತಲುಪುವಂತೆ ಮಾಡುತ್ತಾರೆ.

ಹಲವು ಇಲಾಖೆಗಳು ಬಳಸಿಕೊಳ್ಳುತ್ತವೆ
ಇಷ್ಟೆ ಅಲ್ಲದೆ ಆಶಾ ಕಾರ್ಯಕರ್ತೆಯರನ್ನು ಬಹುತೇಕ ಇಲಾಖೆಗಳು ಸಂಘಟನೆಗೆಂದು, ಗ್ರಾಮೀಣ ಹಂತದಲ್ಲಿ ಮಾಹಿತಿ ಸಂಗ್ರಹಣೆಗೆಂದು, ಚುನಾವಣೆ ಸಮಯದಲ್ಲಿ, ಜನಗಣತಿ ಸಮಯದಲ್ಲಿ, ವೈದ್ಯಕೀಯ ಉದ್ದೇಶದ ಗಣತಿ ಸಂದರ್ಭದಲ್ಲಿ ಇನ್ನೂ ಹಲವು ಸಂದರ್ಭದಲ್ಲಿ ಬಳಸಿಕೊಳ್ಳುತ್ತವೆ ಆದರೆ ಅವರಿಗೆ ಸೂಕ್ತ ಸಂಬಳವನ್ನು ಮಾತ್ರ ನೀಡುತ್ತಿಲ್ಲ.












Click it and Unblock the Notifications