ವಿಧಾನಸಭೆಯೊಳಗೆ ವಿಪಕ್ಷ ಶಾಸಕರ ವಿರುದ್ಧ ಸಿಎಂ ಜಗನ್ ಆವಾಜ್
ಅಮರಾವತಿ, ಜುಲೈ 12: ಆಂಧ್ರ ಪ್ರದೇಶ ರಾಜ್ಯ ಸಿನಿಕ ರಾಜಕೀಯಕ್ಕೆ ಹೆಸರಾದ ರಾಜ್ಯ, ದಶಕದ ಹಿಂದೆ ಅಲ್ಲಿ ಹಿಂಸಾ ರಾಜಕೀಯ ಬಹಳ ಸಾಮಾನ್ಯ ಎಂಬ ಪರಿಸ್ಥಿತಿಯೂ ಇತ್ತು, ಈಗ ಸ್ವಲ್ಪ ಬದಲಾವಣೆ ಆಗಿದೆಯಾದರೂ ರೌಡಿತನ, ಏರು ದನಿ, ಹೆದರಿಕೆ, ಬೆದರಿಕೆ ರಾಜಕೀಯಗಳು ಈಗಲೂ ನಡೆಯುತ್ತವೆ.
ಆಂಧ್ರ ಪ್ರದೇಶದ ಏರು ದನಿ ರಾಜಕೀಯಕ್ಕೆ ಉದಾಹರಣೆಯಾಗಿ ಹೊಸ ಘಟನೆಯೊಂದು ಸೇರ್ಪಡೆಯಾಗಿದೆ. ಸ್ವತಃ ಆಂಧ್ರ ಪ್ರದೇಶ ಸಿಎಂ ಜಗನ್ ಮೋಹನ್ ರೆಡ್ಡಿ ಅವರು ವಿಧಾನಸಭೆಯಲ್ಲಿಯೇ ವಿಪಕ್ಷಗಳ ವಿರುದ್ಧ ಬೆದರಿಕೆ ದನಿಯಲ್ಲಿ ಮಾತನಾಡಿದ್ದಾರೆ.
ಸರ್ಕಾರ ಮಾಡಿದ ರೈತ ಸಾಲಮನ್ನಾ ಬಗ್ಗೆ ಸಿಎಂ ಜಗನ್ ಅವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂದು ವಿಪಕ್ಷವಾದ ಟಿಡಿಪಿಯು ಹಕ್ಕುಚ್ಯುತಿ ಮಂಡಿಸಿತ್ತು, ಇದಕ್ಕೆ ಸಿಎಂ ಜಗನ್ ಅವರು ಉತ್ತರಿಸುತ್ತಿರುವ ವೇಳೆಯಲ್ಲಿ ಟಿಡಿಪಿಯ ಕೆಲವು ಶಾಸಕರು ಮಧ್ಯೆ ಮಾತನಾಡಿದರು, ಇದು ಜಗನ್ ಅವರನ್ನು ಕೆರಳಿಸಿತು.

ಒಮ್ಮೆಲೆ ಸಿಟ್ಟಿಗೆದ್ದ ಜಗನ್ ಮೋಹನ್ ರೆಡ್ಡಿ, ನಾವು 150 ಜನ ಇದ್ದೇವೆ ನೀವು 20 ಜನ ಸಹ ಇಲ್ಲ, ನಮ್ಮವರು ಒಮ್ಮೆ ಎದ್ದು ನಿಂತರೆ ನೀವ್ಯಾರು ಇಲ್ಲಿ ನಿಲ್ಲದಂತೆ ಓಡಿಹೋಗುತ್ತೀರಿ ಎಂದು ಸದನದಲ್ಲಿ ವಿಪಕ್ಷದ ಶಾಸಕರಿಗೆ ಆವಾಜ್ ಹೊಡೆದರು. ತಮ್ಮ ನಾಯಕ ಸಿಟ್ಟಿಗೆದ್ದದ್ದು ಕಂಡ ಕೂಡಲೇ ಆಡಳಿತ ಪಕ್ಷದ ಶಾಸಕರು ಎದ್ದು ನಿಂತು ವಿಪಕ್ಷಗಳ ವಿರುದ್ಧ ಜೋರು ದನಿಯಲ್ಲಿ ಕೂಗಲು ಪ್ರಾರಂಭಿಸಿದರು.
ನಿಮಗೆ ಮಾನ ಇಲ್ಲ, ಮರ್ಯಾದೆ ಇಲ್ಲ, ಗೌರವ ಇಲ್ಲ, ನಿಮ್ಮ ನಾಯಕ ಚಂದ್ರಬಾಬು ನಾಯ್ಡು ಮಾತನಾಡುವಾಗ ನಾವೇನಾದರೂ ಮಾತನಾಡಿದೆವಾ? ಈಗ ಹೇಗೆ ಮಾತನಾಡುತ್ತಿದ್ದೀರಿ? ಸ್ವಲ್ಪವಾದರೂ ಬುದ್ಧಿ ಸಹ ಇಲ್ಲ ನಿಮಗೆ, ನಿಮಗೆ ವಿಧಾನಸಭೆ ನಿಯಮಗಳ ಬಗ್ಗೆಯಾದರೂ ಗೊತ್ತಾ? ಬುದ್ಧಿ ಇಲ್ಲದ ನೀವು ಹೇಗೆ ಶಾಸಕರಾದರಿ, ಸ್ವಲ್ಪವಾದರೂ ಬುದ್ಧಿ ಇರಬೇಕು ಎಂದು ಜೋರು ದನಿಯಲ್ಲಿ ಜಗನ್ ಕೂಗಾಡಿದರು.
ಮಾತು ಮುಂದುವರೆಸಿದ ಜಗನ್, ಸಭಾಧ್ಯಕ್ಷರ ಮುಖಾಂತರ ಸಹ ಮಾತನಾಡದೆ, ನೇರವಾಗಿ ನೀವು ಹೇಗೆ ಶಾಸಕರಾದಿರಿ, ನಿಮಗೆ ಸ್ವಲ್ಪವೂ ಬುದ್ಧಿ ಇಲ್ಲ, ಕೇವಲ ದೇಹ ಮಾತ್ರವೇ ಬೆಳೆದಿದೆ ಬುದ್ಧಿ ಬೆಳೆದಿಲ್ಲ ಎಂದು ಅಬ್ಬರಿಸಿದರು. ಚಂದ್ರಬಾಬು ನಾಯ್ಡು ಅವರ ಬಗ್ಗೆಯೂ ಮಾತನಾಡಿ, ನೀವು ಕಣ್ಣು ದೊಡ್ಡದು ಮಾಡಿ ನೋಡಿದ ಮಾತ್ರಕ್ಕೆ ಇಲ್ಲಿ ಯಾರೂ ಹೆದರುವುದಿಲ್ಲ ಎಂದರು.
ಶಾಸಕರೊಬ್ಬರ ಹೆಸರು ಹಿಡಿದು ಕರೆದ ಜಗನ್, ಅಚ್ಚ ನಾಯ್ಡು ಕೂತ್ಕೊ, ದೇಹ ದೊಡ್ಡದಾದರೆ ಪ್ರಯೋಜನವಿಲ್ಲ, ಬುದ್ಧಿ ಸಹ ಬೆಳೆಯಬೇಕು, ಕೂತ್ಕೋ (ಕುಳಿತುಕೋ) ಎಂದು ಭಾರಿ ಸಿಟ್ಟು ಮತ್ತು ತಿರಸ್ಕಾರ ಭಾವದಿಂದ ನಾಲ್ಕೈದು ಭಾರಿ ಅಂದರು. ಇದು ವಿಪಕ್ಷದ ಶಾಸಕರನ್ನು ಮತ್ತಷ್ಟು ಕೆರಳಿಸಿತು.












Click it and Unblock the Notifications