ಮುಂಬೈ ಬಳಿಕ ಗುಜರಾತ್‌ನಲ್ಲಿ XE ರೂಪಾಂತರಿ ಕೋವಿಡ್ ವೈರಸ್ ಪತ್ತೆ
ಅಹ್ಮದಾಬಾದ್, ಏ. 9: ದೇಶ ಮತ್ತೊಂದು ಕೋವಿಡ್ ಅಲೆಗೆ ಸಜ್ಜಾಗಬೇಕಾದ ಸಂದರ್ಭ ಸನ್ನಿಹಿತವಾದಂತಿದೆ. ಓಮೈಕ್ರಾನ್ ದಾಂಗುಡಿ ಇಟ್ಟು ಹೋದ ಬಳಿಕ ಇದೀಗ ಅದರ ಉಪತಳಿ ಎಂದು ಪರಿಗಣಿಸಲಾಗಿರುವ ಎಕ್ಸ್‌ಇ ರೂಪಾಂತರಿ ವೈರಸ್ (Coronavirus varant XE) ಭಾರತದಲ್ಲಿ ಕಾಣಿಸಿಕೊಂಡಿದೆ. ಮೊನ್ನೆ ಮುಂಬೈನಲ್ಲಿ ಇದರ ಮೊದಲ ಪ್ರಕರಣ ಬೆಳಕಿಗೆ ಬಂದಿತ್ತು. ಇದೀಗ ಗುಜರಾತ್‌ನಲ್ಲೂ ಎಕ್ಸ್‌ಇ ರೂಪಾಂತರಿ ಕೊರೋನಾ ವೈರಸ್ ಪತ್ತೆಯಾಗಿದೆ. ಮಾರ್ಚ್ 13ರಂದು ಕೋವಿಡ್ ಪಾಸಿಟಿವ್ ಬಂದ ವ್ಯಕ್ತಿಯ ಸ್ಯಾಂಪಲ್ ಅನ್ನು ಜಿನೋಮ್ ಸೀಕ್ವೆನ್ಸಿಂಗ್ ಪರೀಕ್ಷೆಗೆ ಒಳಪಡಿಸಿದಾಗ ಎಕ್ಸ್‌ಇ ವೇರಿಯೆಂಟ್ ವೈರಸ್ ಇರುವುದು ದೃಢಪಟ್ಟಿದೆ ಎಂದು ಗುಜರಾತ್‌ನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಅಧಿಕೃವಾಗಿ ಹೇಳಿಕೆ ನೀಡಿದೆ.
ಎಕ್ಸ್‌ಇ ವೈರಸ್ ಹೊಂದಿರುವ ವ್ಯಕ್ತಿ ಮಾರ್ಚ್ 13ರಂದು ಪಾಸಿಟಿವ್ ಬಂದು, ಒಂದು ವಾರದಲ್ಲೇ ಚೇತರಿಸಿಕೊಂಡಿದ್ದರು. ಅವರಿಗೆ ಯಾವುದೇ ಪ್ರಾಣಾಪಾಯವಾಗಿಲ್ಲ ಎನ್ನಲಾಗಿದೆ. ಗುಜರಾತ್ ಸರಕಾರ ಇದೀಗ ಈ ವ್ಯಕ್ತಿಯ ಮಾದರಿಗಳನ್ನ ಮತ್ತೊಮ್ಮೆ ಪರೀಕ್ಷೆಗೆ ಕಳುಹಿಸಿ ಖಚಿತಪಡಿಸಿಕೊಳ್ಳಲು ನಿರ್ಧರಿಸಿದೆ.
ಮೊನ್ನೆಷ್ಟೇ ಮುಂಬೈನಲ್ಲಿ ಎಕ್ಸ್‌ಇ ರೂಪಾಂತರಿ ಕೋವಿಡ್ ವೈರಸ್ ದೃಢಪಟ್ಟಿದೆ ಎಂದು ಮಹಾರಾಷ್ಟ್ರ ಸರಕಾರ ಹೇಳಿತು. ಆದರೆ, ಕೇಂದ್ರ ಆರೋಗ್ಯ ಸಚಿವಾಲಯವು ಇದು ಎಕ್ಸ್‌ಇ ಅಲ್ಲ ಎಂದು ಹೇಳಿದೆ. ಆ ಗೊಂದಲ ಇನ್ನೂ ಹಾಗೆಯೇ ಇದೆ. ಸೌತ್ ಆಫ್ರಿಕಾದಿಂದ ಬಂದ ವ್ಯಕ್ತಿ ನೀಡಿದ ಸ್ಯಾಂಪಲ್‌ನಲ್ಲಿ ಎಕ್ಸ್‌ಇ ವೈರಸ್ ಪತ್ತೆಯಾಗಿತ್ತು. ಕೇಂದ್ರದ ಸಂಶೋಧನ ಸಂಸ್ಥೆಯೊಂದು ಮತ್ತೊಮ್ಮೆ ಈ ಸ್ಯಾಂಪಲ್ ಅನ್ನು ಪರೀಕ್ಷಿಸುತ್ತಿದೆ. ಪುಣೆಯ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ ಲ್ಯಾಬ್‌ನಿಂದ (Pune's National Institute of Virology Lab) ಅದರ ವರದಿ ಇನ್ನೂ ಬರಬೇಕಿದೆ.

ಇದೇ ವೇಳೆ, ಓಮಿಕ್ರಾನ್ನ ಎಕ್ಸ್‌ಎಂ ತಳಿಯ ವೈರಸ್ ಗುಜರಾತ್ ಮತ್ತು ಮಹಾರಾಷ್ಟ್ರದಲ್ಲಿ ತಲಾ ಒಂದೊಂದು ಪ್ರಕರಣದಲ್ಲಿ ಪತ್ತೆಯಾಗಿದೆ.
ಎಕ್ಸ್‌ಇ ತಳಿ ಅಪಾಯಕಾರಿ:
ಕೋವಿಡ್ ವೈರಸ್‌ಗಳ ಪೈಕಿ ಅತ್ಯಂತ ಮಾರಕ ಎನಿಸಿದ್ದು ಡೆಲ್ಟಾ ರೂಪಾಂತರಿ. ಕೆಲ ತಿಂಗಳ ಹಿಂದಷ್ಟೇ ಪ್ರವಹಿಸಿದ ಓಮೈಕ್ರಾನ್ ಅತ್ಯಂತ ವೇಗವಾಗಿ ಹರಡುವ ವೈರಸ್ ಎನಿಸಿತು. ಆದರೆ, ಡೆಲ್ಟಾ ವೈರಸ್‌ನಷ್ಟು ಅಪಾಯವನ್ನು ಓಮಿಕ್ರಾನ್ ಸೃಷ್ಟಿಸಲಿಲ್ಲ.

ಓಮಿಕ್ರಾನ್ನ ಬಿಎ1 ಮತ್ತು ಬಿಎ2 ಎಂಬ ಎರಡು ಪ್ರಭೇದ ಇದೆ. ಇದರಲ್ಲಿ ಬಿಎ2 ಎಂಬುದು ಅತ್ಯಂತ ವೇಗವಾಗಿ ಹರಡುವ ಗುಣ ಹೊಂದಿತ್ತು. ಈಗ ಪತ್ತೆಯಾಗಿರುವ ಎಕ್ಸ್‌ಇ ರೂಪಾಂತರಿಯು ಬಿಎ1 ಮತ್ತು ಬಿಎ2 ಪ್ರಭೇದಗಳ ಮಿಶ್ರತಳಿ ಆಗಿದೆ. ಅಲ್ಲದೇ ಇದು ಬಿಎ2ಗಿಂತ ಹೆಚ್ಚು ವೇಗವಾಗಿ ಸೋಂಕು ಹರಡಿಸಬಲ್ಲುದು ಎಂಬುದು ವೈರಾಣು ತಜ್ಞರ ಅನಿಸಿಕೆ.
ಬ್ರಿಟನ್ ದೇಶದಲ್ಲಿ ಹೆಚ್ಚಿನ ಕೋವಿಡ್ ಪ್ರಕರಣಗಳಲ್ಲಿ ಎಕ್ಸ್‌ಇ ರೂಪಾಂತರಿ ವೈರಸ್ ಇದೆ. ಜನವರಿ19 ರಂದು ಇಲ್ಲಿ ಮೊದಲು ಎಕ್ಸ್‌ಇ ರೂಪಾಂತರಿ ವೈರಸ್ ಸೋಂಕು ಇರುವುದು ದೃಢಪಟ್ಟಿತ್ತು. ಪೂರ್ಣಪ್ರಮಾಣದ ಲಸಿಕೆ ಹಾಕಿಸಿಕೊಂಡವರಲ್ಲೂ ಇದರ ಸೋಂಕು ತಗುಲಿರುವುದು ತಿಳಿದುಬಂದಿದೆ.

ಮಹಾರಾಷ್ಟ್ರ ಮತ್ತ ಗುಜರಾತ್‌ನಲ್ಲಿ ಶಂಕೆ ಮೂಡಿಸಿರುವ ಎಕ್ಸ್‌ಇ ತಳಿ ವೈರಸ್ ಇರುವುದು ದೃಢಪಟ್ಟಲ್ಲಿ ಭಾರತದಲ್ಲಿ ಇದರ ಅಲೆ ಸೃಷ್ಟಿಯನ್ನು ತಡೆಯುವುದು ಕಷ್ಟ. ಒಂದೇ ಸಮಾಧಾನದ ವಿಚಾರ ಎಂದರೆ ಎಕ್ಸ್‌ಇ ತಳಿಯ ವೈರಸ್ ಓಮಿಕ್ರಾನ್ನ ಬಿಎ2 ತಳಿಗಿಂತ ಶೇ. 10ರಷ್ಟು ಹೆಚ್ಚು ವೇಗವಾಗಿ ಸೋಂಕು ಹರಡಿಸುವ ಗುಣ ಹೊಂದಿದ್ದರೂ ಹಾನಿ ಮಾಡುವ ಪ್ರಮಾಣ ಕಡಿಮೆ ಎನ್ನಲಾಗುತ್ತಿದೆ. ಅಂದರೆ ಇದು ಓಮಿಕ್ರಾನ್ಗಿಂತಲೂ ಕಡಿಮೆ ಅಪಾಯಕಾರಿ ಆಗಿರಬಹುದು ಎಂಬುದು ತಜ್ಞರ ಅಭಿಪ್ರಾಯ.
(ಒನ್ಇಂಡಿಯಾ ಸುದ್ದಿ)












Click it and Unblock the Notifications