ಗುಜರಾತ್ ವಿಧಾನಸಭೆ ಚುನಾವಣೆ: ಮತದಾರರನ್ನು ಓಲೈಸಲು ಕೇಜ್ರಿವಾಲ್ ಬಿಗ್ ಪ್ಲ್ಯಾನ್
ಅಹಮದಾಬಾದ್ ಸೆಪ್ಟೆಂಬರ್ 2: ಗುಜರಾತ್ ವಿಧಾನಸಭೆ ಚುನಾವಣೆಗೆ ಎಎಪಿ ಭರ್ಜರಿ ತಯಾರಿ ನಡೆಸಿದೆ. ಬಿಜೆಪಿ ಭದ್ರಕೋಟೆಯಾದ ಗುಜರಾತ್‌ನಲ್ಲಿ ವಿಧಾನಸಭೆ ಚುನಾವಣೆಗೆ ಗೆಲುವು ಸಾಧಿಸಲು ಆಮ್ ಆದ್ಮಿ ಪಕ್ಷ ತೊಡೆ ತಟ್ಟಿ ನಿಂತಿದೆ. ಜೊತೆಗೆ ಮತದಾರರನ್ನು ಸೆಳೆಯಲು ಹಲವಾರು ಚುನಾವಣಾ ಪೂರ್ವ ಯೋಜನೆಗಳನ್ನು ಘೋಷಣೆ ಮಾಡುತ್ತಿದೆ. ಇಂದು ಕೂಡ ಎಎಪಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಗುಜರಾತ್‌ಗೆ ಭೇಟಿ ನೀಡಿದ್ದು, ನಾಳೆ ಕೂಡ ಗುಜರಾತ್‌ನಲ್ಲಿ ಪ್ರಚಾರ ನಡೆಸಲಿದ್ದಾರೆ. ಎರಡು ದಿನದಲ್ಲಿ ಮತಬೇಟೆ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಜೊತೆಗೆ ಮತ್ತಷ್ಟು ಭರವಸೆಗಳನ್ನು ನೀಡುವ ಸಾಧ್ಯತೆ ಇದೆ
ಗುಜರಾತ್ ವಿಧಾನಸಭಾ ಚುನಾವಣೆಗೆ ಆಮ್ ಆದ್ಮಿ ಪಕ್ಷ ಪ್ರಚಾರವನ್ನು ಭರದಿಂದ ನಡೆಸಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಶುಕ್ರವಾರ ದೇವಭೂಮಿ ದ್ವಾರಕಾ ಜಿಲ್ಲೆಯಲ್ಲಿ ಮತದಾರರಿಗೆ ಮತ್ತೊಂದು ಭರವಸೆ ನೀಡಲಿದ್ದಾರೆ. ಶುಕ್ರವಾರದಿಂದ ಎರಡು ದಿನಗಳ ಗುಜರಾತ್ ಪ್ರವಾಸದ ವೇಳೆ, ಕೇಜ್ರಿವಾಲ್ ದ್ವಾರಕಾ ಪಟ್ಟಣದಲ್ಲಿ ಪ್ರಮುಖ ಚುನಾವಣಾ ಪೂರ್ವ ಭರವಸೆಗಳನ್ನು ನೀಡಲಿದ್ದಾರೆ.

ಗುಜರಾತ್‌ನಲ್ಲಿ ಎಎಪಿ ಭರ್ಜರಿ ಮತಬೇಟೆ
ದ್ವಾರಕಾ ಪಟ್ಟಣದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡುವ ಮೂಲಕ ಎಎಪಿ ನಾಯಕರು ತಮ್ಮ ಪ್ರವಾಸವನ್ನು ಪ್ರಾರಂಭಿಸಲಿದ್ದಾರೆ. ಬಳಿಕ ಅಲ್ಲಿನ ಪ್ರಸಿದ್ಧ ದ್ವಾರಕಾಧೀಶ ದೇವಸ್ಥಾನದಲ್ಲಿ ಸಂಜೆ ಪ್ರಾರ್ಥನೆ ಸಲ್ಲಿಸಲಿದ್ದಾರೆ. ಶನಿವಾರ ಸೌರಾಷ್ಟ್ರ ಪ್ರದೇಶದ ಸುರೇಂದ್ರನಗರ ಪಟ್ಟಣದಲ್ಲಿ ಗ್ರಾಮ ಸರಪಂಚರ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ನಂತರ ಇ ಗ್ರಾಮ್ ಕೇಂದ್ರಗಳಲ್ಲಿ ಕೆಲಸ ಮಾಡುವ ಗ್ರಾಮ ಕಂಪ್ಯೂಟರ್ ಉದ್ಯಮಿಗಳೊಂದಿಗೆ (ವಿಸಿಇ) ಟೌನ್ ಹಾಲ್ ಸಭೆಯಲ್ಲಿ ಭಾಗವಹಿಸುವರು. ಕಳೆದ ಕೆಲವು ತಿಂಗಳುಗಳಲ್ಲಿ ದೆಹಲಿ ಸಿಎಂ ಗುಜರಾತ್‌ಗೆ ಹಲವು ಬಾರಿ ಭೇಟಿ ನೀಡಿದ್ದಾರೆ. ಎಎಪಿ ನಾಯಕ ಇಲ್ಲಿಯವರೆಗೆ 300 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್, ರೂ 3,000 ನಿರುದ್ಯೋಗ ಭತ್ಯೆ, ಹತ್ತು ಲಕ್ಷ ಸರ್ಕಾರಿ ಉದ್ಯೋಗಗಳು, ಉಚಿತ ಮತ್ತು ಗುಣಮಟ್ಟದ ಆರೋಗ್ಯ ಸೇವೆ, ಸರ್ಕಾರಿ ಶಾಲೆಗಳಲ್ಲಿ ಉಚಿತ ಶಿಕ್ಷಣ ಮತ್ತು ಮಹಿಳೆಯರಿಗೆ ರೂ 1,000 ಭತ್ಯೆ ಸೇರಿದಂತೆ ಹಲವಾರು ಯೋಜನೆಗಳನ್ನು ಚುನಾವಣಾ ಪೂರ್ವ ಘೋಷಿಸಿದ್ದಾರೆ.

ಈವರೆಗೆ ಎರಡು ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ಕಳೆದ ತಿಂಗಳ ಆರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ತವರು ರಾಜ್ಯವಾದ, ಭಾರತೀಯ ಜನತಾ ಪಕ್ಷ (ಬಿಜೆಪಿ) ಆಡಳಿತದ ಗುಜರಾತ್‌ನಲ್ಲಿ ಚುನಾವಣೆಗೆ ಅಭ್ಯರ್ಥಿಗಳನ್ನು ಘೋಷಿಸಿದ ಮೊದಲ ಪಕ್ಷ ಎಎಪಿ ಆಗಿದೆ. ಆರಂಭದಲ್ಲಿ ಹತ್ತು ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಘೋಷಿಸಿದ ಆಮ್ ಆದ್ಮಿ ಪಕ್ಷ, ಎರಡನೇ ಪಟ್ಟಿಯಲ್ಲಿ ಒಂಬತ್ತು ಜನರ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಬಿಜೆಪಿ ಆಡಳಿತವಿರುವ ರಾಜ್ಯದಲ್ಲಿ ವರ್ಷಾಂತ್ಯಕ್ಕೆ ಚುನಾವಣೆ ನಡೆಯಲಿದೆ.

ಆಡಳಿತಾರೂಢ ಬಿಜೆಪಿಗೆ ನೇರ ಹಣಾಹಣಿ
ಗುಜರಾತ್‌ನಲ್ಲಿ ಒಟ್ಟು 182 ವಿಧಾನಸಭಾ ಸ್ಥಾನಗಳಿವೆ. ಈ ಪೈಕಿ 100ಕ್ಕೂ ಹೆಚ್ಚು ಸ್ಥಾನಗಳನ್ನು ಬಿಜೆಪಿ ವಶಪಡಿಸಿಕೊಂಡಿದೆ. ಉಳಿದ ಸ್ಥಾನಗಳು ಕಾಂಗ್ರೆಸ್, ಎನ್‌ಸಿಪಿ ಮತ್ತು ಸ್ವತಂತ್ರ ಅಭ್ಯರ್ಥಿಗಳು ಹೊಂದಿದ್ದಾರೆ. ಇದೀಗ ಮುಂಬರುವ ವಿಧಾನಸಭಾ ಚುನಾವಣೆಗೆ ತಯಾರಿ ನಡೆಸುತ್ತಿರುವ ಕೇಜ್ರಿವಾಲ್ ಅವರು ಗುಜರಾತ್‌ನ ಇತರ ಅಭಿವೃದ್ಧಿ ಹೊಂದಿದ ಪ್ರದೇಶಗಳಿಗಿಂತ ಕಡಿಮೆ ಅಭಿವೃದ್ಧಿ ಹೊಂದಿದ ಗುಜರಾತ್‌ನ ಸೌರಾಷ್ಟ್ರದತ್ತ ಗಮನ ಹರಿಸಬೇಕೆಂದು ಬಯಸಿದ್ದಾರೆ. ರಾಜ್ಯದ 182 ವಿಧಾನಸಭಾ ಸ್ಥಾನಗಳಲ್ಲಿ ಸುಮಾರು 50 ಸ್ಥಾನಗಳಲ್ಲಿ ಈ ಪ್ರದೇಶ ಆವರಿಸಿದೆ.
ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಇಲ್ಲಿ ಆಡಳಿತಾರೂಢ ಬಿಜೆಪಿಗೆ ನೇರ ಹಣಾಹಣಿ ನೀಡುವುದಾಗಿ ಕೇಜ್ರಿವಾಲ್ ಹೇಳಿದ್ದಾರೆ. ಅವರು ಗುಜರಾತಿಗೆ ಬಂದಾಗಲೆಲ್ಲಾ ಅವರ ಮಾತು ಕೇಳಲು ಜನಜಂಗುಳಿ ಸೇರುತ್ತಿದೆ. ಇದಲ್ಲದೇ ಕಾಂಗ್ರೆಸ್-ಬಿಜೆಪಿ ವಿರುದ್ಧ ಸಿಟ್ಟಿಗೆದ್ದ ನಾಯಕರು ಆಯಾ ಪಕ್ಷ ತೊರೆಯುತ್ತಿದ್ದಾರೆ. ಇದೇ ಕಾರಣಕ್ಕೆ ಕೇಜ್ರಿವಾಲ್ ಈಗ ಗುಜರಾತ್‌ಗೆ ಆದ್ಯತೆ ನೀಡಿದೆ.

ಮಹಿಳಾ ಮತದಾರರನ್ನು ಸೆಳೆಯಲು ಪ್ರಯತ್ನ
ಗುಜರಾತಿನ ಚುನಾವಣಾ ರಾಜಕೀಯದಲ್ಲಿ ಹೊಸ ಆಟಗಾರನಾಗಿದ್ದರೂ, ಆಮ್ ಆದ್ಮಿ ಪಕ್ಷವು (ಎಎಪಿ) ತನ್ನ ಸಂಘಟನೆಯನ್ನು ಗ್ರಾಮ ಮಟ್ಟದವರೆಗೂ ಬಲಪಡಿಸುವ ಮೂಲಕ ಮತ್ತು ಸ್ವಯಂಸೇವಕರನ್ನು ಸಜ್ಜುಗೊಳಿಸುವ ಮೂಲಕ ವಿಧಾನಸಭಾ ಚುನಾವಣೆಯಲ್ಲಿ ಪ್ರಬಲ ಬಿಜೆಪಿಯನ್ನು ಎದುರಿಸಲು ಹೊರಟಿದೆ. ಅರವಿಂದ್ ಕೇಜ್ರಿವಾಲ್ ನೇತೃತ್ವದ ಎಎಪಿ, ಗುಜರಾತ್‌ನ ವರ್ಷಾಂತ್ಯದ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸಲು ಗ್ರಾಮ ಸಮಿತಿಗಳ ಮೂಲಕ ತಳಮಟ್ಟದಲ್ಲಿ ತನ್ನ ಸಂಘಟನೆಯನ್ನು ಬಲಪಡಿಸುತ್ತಿದೆ ಎಂದು ಪಕ್ಷದ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.
ಆಮ್ ಆದ್ಮಿ ಪಕ್ಷ ದೆಹಲಿಯಲ್ಲಿ ತನ್ನ ಅಧಿಕಾರ ವಹಿಸಿಕೊಂಡ ನಂತರ ಬೇರೆ ರಾಜ್ಯಗಳಲ್ಲೂ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಈ ಪ್ರಯತ್ನದಲ್ಲಿ ಗುಜರಾತ್ ಕೂಡ ಹೊರತಾಗಿಲ್ಲ. ಗುಜರಾತ್‌ನಲ್ಲಿ ಇದೇ ವರ್ಷಾಂತ್ಯದಲ್ಲಿ ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಲು ಎಎಪಿ ಪ್ರಯತ್ನಿಸುತ್ತಿದೆ. ಇದಕ್ಕಾಗಿ ಪಕ್ಷವು ಗ್ರಾಮ ಮಟ್ಟದಲ್ಲಿ ಕಸರತ್ತು ನಡೆಸುತ್ತಿದೆ. ಪ್ರಮುಖವಾಗಿ ಆಪ್ ತನ್ನ ಮತದಾರರ ಪಟ್ಟಿಯಲ್ಲಿ ಗುಜರಾತ್ ಮಹಿಳಾ ಸಮುದಾಯಗಳತ್ತ (ಪನ್ನಾ ಪರಿವಾರ) ಗಮನ ಹರಿಸಿದೆ. ಗುಜರಾತ್ ಮಹಿಳಾ ಮತದಾರರನ್ನು ಸೆಳೆಯುವ ಮೂಲಕ ಮತದಾರರನ್ನು ಹೆಚ್ಚಿಸುವ ಪ್ರಯತ್ನ ನಡೆಯುತ್ತಿದೆ ಎಂದು ಎಎಪಿ ರಾಷ್ಟ್ರೀಯ ಜಂಟಿ ಪ್ರಧಾನ ಕಾರ್ಯದರ್ಶಿ ಇಸುದನ್ ಗಾಧ್ವಿ ಹೇಳಿದ್ದಾರೆ.












Click it and Unblock the Notifications