ಬಿಲ್ಕಿಸ್ ಬಾನೊ ಪ್ರಕರಣ: 2 ವಾರಗಳಲ್ಲಿ ಪ್ರತಿಕ್ರಿಯೆ ನೀಡುವಂತೆ ಗುಜರಾತ್‌ಗೆ ಸುಪ್ರೀಂ ಸೂಚನೆ
ಬಿಲ್ಕಿಸ್ ಬಾನೊ ಪ್ರಕರಣದಲ್ಲಿ 11 ಅಪರಾಧಿಗಳ ಬಿಡುಗಡೆಯನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳಿಗೆ ಪ್ರತಿಕ್ರಿಯೆ ಸಲ್ಲಿಸಲು ಸುಪ್ರೀಂ ಕೋರ್ಟ್ ಶುಕ್ರವಾರ ಗುಜರಾತ್ ಸರ್ಕಾರಕ್ಕೆ ಎರಡು ವಾರಗಳ ಕಾಲಾವಕಾಶ ನೀಡಿದೆ. ತೃಣಮೂಲ ಕಾಂಗ್ರೆಸ್ ಸಂಸದ ಮಹುವಾ ಮೊಯಿತ್ರಾ ಅವರ ಮನವಿಯ ಮೇರೆಗೆ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದ್ದು, ನ್ಯಾಯಮೂರ್ತಿಗಳಾದ ಅಜಯ್ ರಸ್ತೋಗಿ ಮತ್ತು ಬಿವಿ ನಾಗರತ್ನ ಅವರ ಪೀಠವು ಪ್ರಕರಣದ ಆರೋಪಿಗಳ ಬಿಡುಗಡೆಗೆ ಎರಡು ವಾರಗಳಲ್ಲಿ ತಮ್ಮ ಪ್ರತಿಕ್ರಿಯೆಯನ್ನು ಸಲ್ಲಿಸುವಂತೆ ಕೇಳಿದೆ.
ಆಗಸ್ಟ್ 15 ರಂದು, ಗುಜರಾತ್ ಸರ್ಕಾರವು 2002ರ ಗುಜರಾತ್ ಗಲಭೆಯ ಬಿಲ್ಕಿಸ್ ಬಾನೊ ಅತ್ಯಾಚಾರದ ಜೀವಾವಧಿ ಶಿಕ್ಷೆ ವಿಧಿಸಿದ 11 ಅಪರಾಧಿಗಳನ್ನು ಅವಧಿಪೂರ್ವ ಬಿಡುಗಡೆ ಮಾಡಿತು. ಗುಜರಾತ್ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಕೋರ್ಟ್ ಮೊರೆ ಹೋಗಲಾಗಿದೆ.

ಬಿಲ್ಕಿಸ್ ಬಾನೊ ಪ್ರಕರಣ
2002ರಲ್ಲಿ ಗೋದ್ರಾ ರೈಲು ಅಗ್ನಿ ದುರಂತ ಘಟನೆಯಲ್ಲಿ 59 ಮಂದಿ ಕರಸೇವಕರು ಬಲಿಯಾಗಿದ್ದರು. ಇದು ಮುಸ್ಲಿಮರು ನಡೆಸಿದ ಕೃತ್ಯ ಎಂಬ ಶಂಕೆಯಿಂದ ಗುಜರಾತ್‌ನಾದ್ಯಂತ ವ್ಯಾಪಕವಾಗಿ ಕೋಮುದಳ್ಳುರಿ ಹೊತ್ತಿಕೊಂಡಿತು. ಈ ಸಂದರ್ಭದಲ್ಲಿ ಬಿಲ್ಕಿಸ್ ಬಾನೊ ತುಂಬು ಗರ್ಭಿಣಿಯಾಗಿರುತ್ತಾರೆ. ಒಂದು ಎಳೆಯ ಕೂಸೂ ಇರುತ್ತದೆ. ಈಕೆ ತನ್ನ ಮಗಳು ಹಾಗೂ ಇತರ 15 ಮಂದಿ ಜೊತೆ ಸುರಕ್ಷಿತ ಸ್ಥಳ ಸೇರಿಕೊಳ್ಳಲು ಊರು ತೊರೆದಿರುತ್ತಾರೆ. ಈ ವೇಳೆ, ತೋಟವೊಂದರಲ್ಲಿ ಈಕೆ ಹಾಗು ಇತರರು ಅಡಗಿಕೊಂಡಿರುತ್ತಾರೆ. ಆಗ ಅಲ್ಲಿಗೆ ಮಾರಕಾಸ್ತ್ರಗಳನ್ನು ಹೊಂದಿದ್ದ 20-30 ಮಂದಿಯ ಗುಂಪು ನುಗ್ಗುತ್ತದೆ. ಬಿಲ್ಕಿಸ್ ಬಾನೋ ಮತ್ತಿತರರ ಮೇಲೆ ಈ ಗುಂಪು ದಾಳಿ ಮಾಡುತ್ತದೆ. ಏಳು ಮಂದಿಯನ್ನು ಕೊಂದುಹಾಕುತ್ತದೆ. ಗರ್ಭಿಣಿಯಾಗಿದ್ದ ಬಿಲ್ಕಿಸ್ ಬಾನೊ ಮೇಲೆ ಈ ದುರುಳರು ಸಾಮೂಹಿಕ ಅತ್ಯಾಚಾರ ಎಸಗುತ್ತಾರೆ. ಈಕೆಯ ಜೊತೆಗೆ ಇದ್ದ ಏಳು ಮಂದಿ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತಾರೆ. ಬಿಲ್ಕಿಸ್ ಬಾನೊ ಅವರ ಮೂರು ವರ್ಷದ ಹೆಣ್ಮಗುವನ್ನು ದುರುಳರು ಬಂಡೆಗೆ ತಲೆ ಬಡಿದು ಘೋರ ರೀತಿಯಲ್ಲಿ ಕೊಲೆ ಮಾಡುತ್ತಾರೆ.

ಏಳು ಮಂದಿ ಹತ್ಯೆ
2002ರಲ್ಲಿ ಗುಜರಾತ್‌ನಲ್ಲಿ ಸಂಭವಿಸಿದ ಘೋರ ಘಟನೆಗಳಲ್ಲಿ ಬಿಲ್ಕಿಸ್ ಬಾನೊ ಅತ್ಯಾಚಾರ ಮತ್ತು ಏಳು ಮಂದಿ ಹತ್ಯೆ ಘಟನೆಯೂ ಒಂದು. ಈ ಘಟನೆಯ ಸಿಬಿಐ ತನಿಖೆಗೆ ಸುಪ್ರೀಂಕೋರ್ಟ್ ಆದೇಶಿಸುತ್ತದೆ. 2004ರಲ್ಲಿ ಎಲ್ಲಾ ಆರೋಪಿಗಳನ್ನು ಬಂಧಿಸಲಾಗುತ್ತದೆ. ಈ ಪ್ರಕರಣದಲ್ಲಿ ಇದ್ದ ಸಾಕ್ಷ್ಯಾಧಾರಗಳ ನಾಶ ಅಗಬಹುದು ಮತ್ತು ಸಾಕ್ಷಿಗಳ ಪ್ರಾಣಕ್ಕೆ ಕುತ್ತುಬರಬಹುದು ಎಂದು ಬಿಲ್ಕಿಸ್ ಬಾನೊ ಆತಂಕ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಅವರ ಕೋರಿಕೆ ಮೇರೆಗೆ ಸುಪ್ರೀಂಕೋರ್ಟ್ 2004 ಆಗಸ್ಟ್‌ನಲ್ಲಿ ಈ ಪ್ರಕರಣವನ್ನು ಮುಂಬೈಗೆ ವರ್ಗಾಯಿಸುತ್ತದೆ.

ಜೀವಾವಧಿ ಶಿಕ್ಷೆ
2008 ಜನವರಿ 21ರಂದು ವಿಶೇಷ ಸಿಬಿಐ ಕೋರ್ಟ್ ಈ ಪ್ರಕರಣದಲ್ಲಿ ಹನ್ನೆರಡು ಮಂದಿ ಆರೋಪಿಗಳನ್ನು ದೋಷಿಗಳೆಂದು ತೀರ್ಮಾನಿಸಿ ಜೀವಾವಧಿ ಶಿಕ್ಷೆ ವಿಧಿಸುತ್ತದೆ. ಗರ್ಭಿಣಿಯ ಮೆಲೆ ಅತ್ಯಾಚಾರ, ಕೊಲೆ ಮತ್ತು ಕಾನೂನುಬಾಹಿರವಾಗಿ ದೊಂಬಿ ಎಸಗಿದ್ದ ಆರೋಪಗಳು ಸಾಬೀತಾಗುತ್ತವೆ. ಅದೇ ವೇಳೆ, ಇತರ ಏಳು ಆರೋಪಿಗಳನ್ನು ಸಾಕ್ಷ್ಯಾಧಾರದ ಕೊರತೆಯಿಂದ ಖುಲಾಸೆಗೊಳಿಸಲಾಗುತ್ತದೆ. ಮತ್ತೊಬ್ಬ ಆರೋಪಿ ವಿಚಾರಣೆ ವೇಳೆ ಮೃತಪಟ್ಟಿರುತ್ತಾನೆ. 2019, ಏಪ್ರಿಲ್‌ನಲ್ಲಿ ಬಿಲ್ಕಿಸ್ ಬಾನೊಗೆ ಉದ್ಯೋಗ ಮತ್ತು ಒಂದು ಮನೆ ಹಾಗು 50 ಲಕ್ಷ ರೂ ಪರಿಹಾರ ಒದಗಿಸುವಂತೆ ಗುಜರಾತ್ ಸರಕಾರಕ್ಕೆ ಸುಪ್ರೀಂ ಕೋರ್ಟ್ ಅಪ್ಪಣೆ ಮಾಡುತ್ತದೆ.

ಅಪರಾಧಿಗಳನ್ನು ಬಿಡುಗಡೆ ಮಾಡಿದ್ದು ಯಾಕೆ?
ಹನ್ನೊಂದು ಅಪರಾಧಿಗಳಾದ ರಾಜುಭಾಯ್ ಸೋನಿ, ರಾಧೇಶ್ಯಾಮ್ ಶಾ, ಕೇಸರಭಾಯಿ ವೊಹಾನಿಯಾ, ಶೈಲೇಶ್ ಭಟ್, ಬಿಪಿನ್ ಚಂದ್ರ ಜೋಶಿ, ಬಾಕಾಭಾಯಿ ವೊಹಾನಿಯಾ, ರಮೇಶ್ ಚಂದನ, ಪ್ರದೀಪ್ ಮೋರ್ಧಿಯಾ, ಜಸವಂತ್‌ಭಾಯ್ ನಾಯ್, ಮಿತೇಶ್ ಭಟ್, ಗೋವಿಂದಭಾಯ್ ನಾಯ್ ಅವರು 15 ವರ್ಷದ ಜೀವಾವಧಿ ಶಿಕ್ಷೆಯ ಅವಧಿ ಪೂರ್ಣಗೊಳ್ಳುವ ಮುನ್ನವೇ ಬಿಡುಗಡೆಯಾಗಿದ್ದಾರೆ. ಈ 11 ಅಪರಾಧಿಗಳಲ್ಲಿ ಒಬ್ಬಾತ ಬಿಡುಗಡೆ ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಮನವಿ ಸಲ್ಲಿಸಿರುತ್ತಾನೆ. ಈ ಸಂಬಂಧ ಪಂಚಮಹಲ್ ಕಲೆಕ್ಟರ್ ಸುಜಲ್ ಮಾಯತ್ರ ನೇತೃತ್ವದಲ್ಲಿ ಒಂದು ಸಮಿತಿ ರಚನೆಯಾಗುತ್ತದೆ. "ಕೆಲ ತಿಂಗಳ ಹಿಂದೆ ರಚನೆಯಾದ ಸಮಿತಿಯು ಈ ಪ್ರಕರಣದ ಎಲ್ಲಾ 11 ಅಪರಾಧಿಗಳಿಗೆ ಬಿಡುಗಡೆ ಮಾಡುವ ಒಮ್ಮತದ ನಿರ್ಧಾರ ತೆಗೆದುಕೊಂಡಿತು. ಈ ಶಿಫಾರಸನ್ನು ರಾಜ್ಯ ಸರಕಾರಕ್ಕೆ ಕಳುಹಿಸಲಾಯಿತು. ನಿನ್ನೆ, ಅವರ ಬಿಡುಗಡೆಗೆ ಆದೇಶ ಸಿಕ್ಕಿದೆ" ಎಂದು ಮಾಯತ್ರ ಹೇಳಿದ್ದಾರೆ.












Click it and Unblock the Notifications