ಗುಜರಾತಿನಲ್ಲಿ ಎಎಪಿಗೆ ಅಧಿಕಾರ ಸಿಕ್ಕರೆ ಹಿರಿಯರಿಗೆ ಉಚಿತ ತೀರ್ಥಯಾತ್ರೆ ಆಫರ್!
ಅಹ್ಮದಾಬಾದ್, ಮೇ 12: ಪಂಜಾಬಿನಲ್ಲಿ ಗದ್ದುಗೆ ಹಿಡಿದಿರುವ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಈಗ ಗುಜರಾತ್ ಕಡೆಗೆ ಲಕ್ಷ್ಯ ನೆಟ್ಟಿದ್ದಾರೆ. ಗುಜರಾತಿನಲ್ಲಿ ವಿಧಾನಸಭಾ ಚುನಾವಣೆ ಪೂರ್ವದಲ್ಲೇ ಪ್ರಚಾರದ ಅಖಾಡಕ್ಕೆ ಇಳಿದು ಭರ್ಜರಿ ಆಫರ್ ಘೋಷಿಸಿದ್ದಾರೆ.
ರಾಜಕೋಟ್ ನಗರದಲ್ಲಿ ನಡೆದ ಪ್ರಚಾರ ಮೆರವಣಿಗೆಯಲ್ಲಿ ಮಾತನಾಡಿದ ಅರವಿಂದ್ ಕೇಜ್ರಿವಾಲ್, ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಅಧಿಕಾರ ಸಿಕ್ಕರೆ ರಾಜ್ಯದ ಪ್ರತಿಯೊಬ್ಬ ಹಿರಿಯ ನಾಗರಿಕರಿಗೆ ಉಚಿತ ತೀರ್ಥಯಾತ್ರೆಗೆ ವ್ಯವಸ್ಥೆ ಕಲ್ಪಿಸಲಾಗುವುದು. ಅಯೋಧ್ಯೆ ಸೇರಿದಂತೆ ಧಾರ್ಮಿಕ ಕೇಂದ್ರಗಳಿಗೆ ಪ್ರವಾಸ ಹೋಗಲು ಅವಕಾಶ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.
Breaking; ಗುಜರಾತ್ನಲ್ಲಿ ಬಿಜೆಪಿ ಸೇರಿದ 500 ವೈದ್ಯರು
ಗುಜರಾತಿನಲ್ಲಿ ಕಳೆದ ಮೂರು ದಶಕಗಳಿಂದ ಆಡಳಿತ ನಡೆಸುತ್ತಿರುವ ಭಾರತೀಯ ಜನತಾ ಪಕ್ಷವು ಶಿಕ್ಷಣ, ಆರೋಗ್ಯ, ಉದ್ಯೋಗ ಕ್ಷೇತ್ರಗಳನ್ನು ಅಭಿವೃದ್ಧಿಪಡಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಅರವಿಂದ್ ಕೇಜ್ರಿವಾಲ್ ಆರೋಪಿಸಿದರು.
ಉಚಿತ ವಿದ್ಯುತ್ ಸೌಲಭ್ಯದ ಭರವಸೆೆ:
ಗುಜರಾತಿನಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಆಪ್ ಪಕ್ಷವನ್ನು ಗೆಲ್ಲಿಸಿದರೆ ಉಚಿತವಾಗಿ ವಿದ್ಯುತ್ ಸೌಕರ್ಯವನ್ನು ಒದಗಿಸಲಾಗುವುದು ಎಂದು ಅರವಿಂದ್ ಕೇಜ್ರಿವಾಲ್ ಹೇಳಿದರು. ಇದರ ಜೊತೆಗೆ ಉತ್ತಮ ಶಿಕ್ಷಣ ವ್ಯವಸ್ಥೆ, ವೈದ್ಯಕೀಯ ಸೌಲಭ್ಯವನ್ನು ಕಲ್ಪಿಸಲಾಗುವುದು ಎಂದು ಹೇಳಿದರು.
ತೀರ್ಥಯಾತ್ರೆಯ ಸೌಲಭ್ಯ:
"ಕಳೆದ 27 ವರ್ಷಗಳಿಂದ ಗುಜರಾತಿನಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರವು ಒಬ್ಬರೇ ಒಬ್ಬ ವ್ಯಕ್ತಿಯನ್ನು ತೀರ್ಥಯಾತ್ರೆಗೆ ಕಳುಹಿಸಿಲ್ಲ. ಆದರೆ ದೆಹಲಿಯಲ್ಲಿ ಮೂರು ವರ್ಷಗಳಲ್ಲಿ ಒಟ್ಟು 50,000 ಜನರನ್ನು ತೀರ್ಥಯಾತ್ರೆಗೆ ಕಳುಹಿಸಿದ್ದೇವೆ. ಆಮ್ ಆದ್ಮಿ ಪಕ್ಷಕ್ಕೆ ಅಧಿಕಾರವನ್ನು ನೀಡಿದರೆ, ರಾಜ್ಯದಲ್ಲಿನ ಹಿರಿಯ ನಾಗರಿಕರಿಗೆ ಧಾರ್ಮಿಕ ಕೇಂದ್ರಗಳ ಪುಣ್ಯಕ್ಷೇತ್ರದ ದರ್ಶನ ಭಾಗ್ಯ ಒದಗಿ ಬರಲಿದೆ," ಎಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

ಬಿಜೆಪಿ ಅಹಂಕಾರ ಮುರಿಯಲು ಎಎಪಿಗೆ ಅಧಿಕಾರ ನೀಡಿ:
"ಆಮ್ ಆದ್ಮಿ ಪಕ್ಷವು ವಿದ್ಯಾವಂತ, ಪ್ರಾಮಾಣಿಕ ಹಾಗೂ ದೇಶಭಕ್ತರ ಪಕ್ಷವಾಗಿದೆ. ನಾವು ಪ್ರಾಮಾಣಿಕವಾಗಿ ಕೆಲಸ ಮಾಡದಿದ್ದರೆ, ಬೇರೆ ಪಕ್ಷವನ್ನು ಆಯ್ಕೆ ಮಾಡಿಕೊಳ್ಳಲು ನೀವು ಸ್ವಾತಂತ್ರರಾಗಿದ್ದೀರಿ. ಆದರೆ ಅದಕ್ಕೂ ಪೂರ್ವದಲ್ಲಿ ಬಿಜೆಪಿಯ ಅಹಂಕಾರವನ್ನು ಮುರಿಯುವುಕ್ಕಾದರೂ, ಎಎಪಿಗೆ ಒಂದು ಅವಕಾಶವನ್ನು ನೀಡಬೇಕು," ಎಂದು ಅರವಿಂದ್ ಕೇಜ್ರಿವಾಲ್ ಮನವಿ ಮಾಡಿಕೊಂಡಿದ್ದಾರೆ.