ಅಸಾರಾಮ್ 'ಸಂತ' ನಲ್ಲ ಪುತ್ರ 'ಸಾಚಾ' ಅಲ್ಲ
ಇಂದೋರ್, ಸೆ.7: ಸ್ವಯಂಘೋಷಿತ ದೇವಮಾನವ ಅಸಾರಾಮ್ ಬಾಪು ಅವರಿಗೆ ಕೆಟ್ಟ ಕಾಲ ಮುಂದುವರೆಯುತ್ತಲೇ ಇದೆ. ಅಸಾರಾಮ್ ಬಾಪು ಮೇಲೆ ಕೇಸ್ ಗಳ ಮೇಲೆ ಕೇಸ್ ದಾಖಲಾಗುತ್ತಿರುವ ಬೆನ್ನಲ್ಲೇ ಅವರ ಪುತ್ರ ನಾರಾಯಣ ಸಾಯಿ ಅವರ ಮೇಲೆ ವಂಚನೆ ಪ್ರಕರಣವೊಂದು ದಾಖಲಾಗಿದೆ.
ಇಂದೋರ್ ನ ಮಹಿಳೆಯೊಬ್ಬರು ಸಾಯಿ ಅವರು ವಂಚೆನೆ, ಕೊಲೆ ಸಂಚು ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ನನಗೆ ನಂಬಿಸಿ ಕೈ ಕೊಟ್ಟಿದ್ದಾರೆ ಎಂದು ದೂರಿದ್ದಾರೆ. ಅಸಾರಾಮ್ ಬಾಪು ಅವರನ್ನು ಬೆಂಬಲಿಸುತ್ತಾ ಬಂದಿರುವ ಪುತ್ರ ನಾರಾಯಣ ಅವರ ಮೇಲೆ ಕ್ರಮ ಕೈಗೊಳ್ಳಲು ಪೊಲೀಸರು ಮುಂದಾಗಿದ್ದಾರೆ.
ಬಾಪು ಸಂಕಟ: ಅತ್ಯಾಚಾರ ಪ್ರಕರಣ ಸಂಬಂಧ ಜೈಲು ಸೇರಿರುವ ಸ್ವಯಂ ಘೋಷಿತ ದೇವಮಾನವ ಅಸಾರಾಂ ಬಾಪು ವಿರುದ್ಧ ಹೊಸ ಮೊಕದ್ದಮೆ ದಾಖಲಾಗಿದೆ.
ಬಾಪು ಅವರು ಜೈಲು ಸೇರಿದ ಬೆನ್ನ ಹಿಂದೆಯೇ ಒಬ್ಬೊಬ್ಬರಾಗಿ ದೂರು ನೀಡಲು ಮುಂದೆ ಬರುತ್ತಿದ್ದಾರೆ. ಅವರ ಹೆಸರು ಮತ್ತು ಗುರುತನ್ನು ಗೌಪ್ಯವಾಗಿಡಲಾಗಿದೆ. ಸಾಕ್ಷ್ಯಾಧಾರಗಳನ್ನು ಕಲೆಹಾಕಲು ಅವರು ಸಹಕರಿಸುತ್ತಿದ್ದಾರೆ' ಎಂದು ಡಿಸಿಪಿ ಅಜಯ್ ಪಾಲ್ ಲಂಬಾ ತಿಳಿಸಿದ್ದಾರೆ.

ಲೈಂಗಿಕ ಚಟುವಟಿಕೆಯಲ್ಲಿ ತೊಡಗಿದ್ದ ಯಾವುದೇ ಸಿಡಿ ಅಥವಾ ವಿಡಿಯೋ ತುಣಕುಗಳನ್ನು ವಶಕ್ಕೆ ಪಡೆಯಲಾಗಿಲ್ಲ. ಬಾಪು ಅವರ ಆಪ್ತ ಶಿವನ ಬಳಿ ಇದೆ ಎನ್ನಲಾದ ವಿಡಿಯೋ ತುಣುಕುಗಳು ನಮಗೆ ಸಿಕ್ಕಿಲ್ಲ' ಎಂದು ಸ್ಪಷ್ಟಪಡಿಸಿದರು.
ಬಾಪು ಸಂತನಲ್ಲ : ಕೇಂದ್ರ ಸಚಿವಾಲಯವು ಅಸಾರಾಂ ಬಾಪು ಅವರನ್ನು ಸಂತ ಮತ್ತು ಧಾರ್ಮಿಕ ಗುರುಗಳ ವರ್ಗದಿಂದ ಹೊರಗಿಡುವಂತೆ ಸೂಚಿಸಿದೆ.
ಜೋಧ್ ಪುರ ಕೇಂದ್ರ ಕಾರಾಗೃಹ ಆಡಳಿತವು ಅಸಾರಾಂನನ್ನು 'ಸಂತ' ಎಂದು ಕರೆಯುತ್ತಿತ್ತು. ಜಿಲ್ಲಾ ನ್ಯಾಯಾಲಯಕ್ಕೆ ಕಾರಾಗೃಹ ಆಡಳಿತವು ರವಾನಿಸಿದ ಪತ್ರವೊಂದರಿಂದ ಇದು ಬಯಲಾಗಿದೆ. ಪತ್ರದ ಅಂಚಿನಲ್ಲಿ ಅಧಿಕಾರಿಗಳು 'ಸಂತ ಶ್ರೀ ಅಸಾರಾಂ ಬಾಪು' ಎಂದು ಬರೆದಿದ್ದರು.
ಅಸಾರಾಂ ಹಾಗೂ ಚಿಂದ್ವಾರಾ ಗುರುಕುಲದ ವಾರ್ಡನ್ ಶಿಲ್ಪಿ ನಡುವೆ ದೈಹಿಕ ಸಂಪರ್ಕವಿತ್ತು ಎಂದು ಉಲ್ಲೇಖಿಸಿರುವ ಮಾಧ್ಯಮಗಳ ವರದಿಯನ್ನು ಪೊಲೀಸರು ಅಲ್ಲಗೆಳೆದಿದ್ದಾರೆ.












Click it and Unblock the Notifications