ಹೊಸ ಮೇಯರ್ ಕಟ್ಟೆಗೆ ಸಮ ಕೈಕೊಟ್ಟ ಸಿದ್ದು ಸರಕಾರ
ಬೆಂಗಳೂರು, ಸೆಪ್ಟೆಂಬರ್ 6: ಬಸವನಗುಡಿಯ ಕಟ್ಟೆ ಸತ್ಯನಾರಾಯಣ ಅವರಿಗೆ ಬಿಜೆಪಿ ಪಕ್ಷದ ವತಿಯಿಂದ ನೂತನ ಮೇಯರ್ ಆಗಿ ಆಯ್ಕೆಯಾಗಿದ್ದೇ ಮಹಾಪರಾಧವಾಯ್ತು ಅನ್ನುವಂತಾಗಿದೆ. ಏಕೆಂದರೆ ನೂತನ ಮೇಯರಿಗೆ ಮೊದಲ ಆಘಾತ ನೀಡಿರುವ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರಕಾರ ಮೇಯರ್ ಅನುದಾನ ಪ್ರಮಾಣದ ಮೇಲೆ ಕತ್ತರಿ ಪ್ರಯೋಗಿಸಿದೆ.
ಅಷ್ಟೇ ಅಲ್ಲ ಒಂದು ಕಣ್ಣಿಗೆ ಬೆಣ್ಣೆ, ಮತ್ತೊಂದು ಕಣ್ಣಿಗೆ ಸುಣ್ಣವನ್ನು ಹಚ್ಚಿದೆ. ಮೇಯರ್ ಅನುದಾನ 150 ಕೋಟಿ ರೂ. ಇದ್ದುದನ್ನು ಸರ್ಕಾರ 50 ಕೋಟಿ ರೂ. ಗೆ ಇಳಿಸಿದೆ. ಉಳಿದ ಅನುದಾನಕ್ಕೆ 'ಕೈ' ಎತ್ತಿದೆ. ಇದೇ ವೇಳೆ, ಮೀಸಲು ಅನ್ವಯ ಉಪ ಮೇಯರ್ ಸ್ಥಾನ ಕಾಂಗ್ರೆಸ್ಸಿಗೆ ದಕ್ಕಿದ ಪರಿಣಾಮ ಇಂದಿರಾ ಅವರು ಉಪ ಮಹಾಪೌರರಾಗಿ ಆಯ್ಕೆಯಾಗಿದ್ದಾರೆ.
ಆದರೆ ಉಪ ಮೇಯರಿಗೆ ಒದಗಿಸುವ ಅನುದಾನವನ್ನು ಕಡಿಮೆಗೊಳಿಸುವ ಸಾಹಸಕ್ಕೆ ಕಾಂಗ್ರೆಸ್ ಸರಕಾರ ಕೈಹಾಕಿಲ್ಲ. ಅವರಿಗೆ ಮೀಸಲಿಟ್ಟಿರುವ 25 ಕೋಟಿ ರೂ. ಗಳನ್ನು ಕಟ್ ಮಾಡದೆ ಹಾಗೆಯೇ ಮುಂದುವರಿಸಿದೆ. ಮೊದಲೇ ಬಿಬಿಎಂಪಿ ಬೊಕ್ಕಸ ಬೆಕ್ಕಸಪಡುವಷ್ಟು ಬರಿದಾಗಿದೆ. ಅಂತಹುದರಲ್ಲಿ ಮೇಯರ್ ಪಾಲಿನ 100 ಕೋಟಿ ರೂ. ಖೋತಾ ಮಾಡಿದೆ.

ವೆಂಕಟೇಶಮೂರ್ತಿ ಬಜೆಟ್ಟಿಗೂ ಕತ್ತರಿ
ಇನ್ನು, ಮಾಜಿ ಮೇಯರ್ ಡಿ ವೆಂಕಟೇಶಮೂರ್ತಿ ಮಂಡಿಸಿದ್ದ ಸುಮಾರು 8250 ಕೋಟಿ ರೂ. ಬಜೆಟ್‌ನಲ್ಲಿ 24 ಕೋಟಿ ರೂ. ಕಡಿತಗೊಳಿಸಿ ಉಳಿದಂತೆ ಅನುಮೋದನೆ ನೀಡಿದೆ.
ಆದರೆ, ಅದರಲ್ಲೂ ಸರಕಾರ 'ಕೈ'ಯಾಡಿಸಿದ್ದು, ಕೆಲವು ಮಾರ್ಪಾಡುಗಳನ್ನು ಮಾಡಿದೆ. ವಾರ್ಡ್‌ಗಳಿಗೆ ವೆಂಕಟೇಶಮೂರ್ತಿ ಘೋಷಿಸಿದ್ದ ವಿಶೇಷ ಅನುದಾನ 347 ಕೋಟಿ ರೂ.ಗಳನ್ನು ಸಂಪೂರ್ಣವಾಗಿ ರದ್ದುಗೊಳಿಸಿ ಆ ಅನುದಾನವನ್ನು ಬೇರೆ ಯೋಜನೆಗಳಿಗೆ ನೀಡಿದೆ.

ನಾಡಪ್ರಭು ಕೆಂಪೇಗೌಡರ ಪುತ್ಥಳಿಗೂ ಕತ್ತರಿ
ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ನಾಡಪ್ರಭು ಕೆಂಪೇಗೌಡರ ಕಂಚಿನ ಪುತ್ಥಳಿ ನಿರ್ಮಾಣದ ಅನುದಾನವನ್ನು 1 ಕೋಟಿ ರೂ.ಗೆ ಇಳಿಸಿದೆ. ಒಟ್ಟಾರೆ 627 ಕೋಟಿ ರೂ. ಘೋಷಣೆಯಲ್ಲಿ 527 ಕೋಟಿ ರೂ. ಗೆ ಕತ್ತರಿ ಹಾಕುವ ಮೂಲಕ ಕೇವಲ 100 ಕೋಟಿ ರೂ. ಗೆ ಕೈ ಸರ್ಕಾರ ಜೈ ಎಂದಿರುವುದು ಚರ್ಚೆಗೆ ಗ್ರಾಸವಾಗಿದೆ.

ರಾಮಲಿಂಗಾರೆಡ್ಡಿ ಬಿಟಿಎಂ ಲೇಔಟ್‌ಗೆ ಶುಕ್ರದೆಸೆ
ವೆಂಕಟೇಶಮೂರ್ತಿ ಮಂಡಿಸಿದ್ದ ಬಜೆಟ್‌ನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಅವರು ಪ್ರತಿನಿಧಿಸುವ ಬಿಟಿಎಂ ಲೇಔಟ್‌ಗೆ ಯಾವುದೇ ಅನುದಾನ ನಿಗದಿ ಮಾಡಿರಲಿಲ್ಲ. ಆದರೆ, ಸರ್ಕಾರ ಪರಿಷ್ಕೃತ ಪಟ್ಟಿಯಲ್ಲಿ ಬಿಟಿಎಂ ಲೇಔಟ್‌ಗೆ ಅಭಿವೃದ್ಧಿಗೆಂದು 14.85 ಕೋಟಿ ರೂ. ವಿಶೇಷ ಅನುದಾನವನ್ನು ನೀಡಿದೆ.

ಸರ್ವಜ್ಞನಗರ ಕ್ಷೇತ್ರಕ್ಕೂ ಶುಕ್ರದೆಸೆ
ಅದೇ ರೀತಿ ಗೃಹ ಸಚಿವ ಕೆ ಜೆ ಜಾರ್ಜ್ ಪ್ರತಿನಿಧಿಸುವ ಸರ್ವಜ್ಞನಗರ ವಿಧಾನಸಭಾ ಕ್ಷೇತ್ರಕ್ಕೂ 18.50 ಕೋಟಿ ರೂ. ಬಂಪರ್ ಕೊಡುಗೆ ನೀಡಿ ಕೃತಾರ್ಥವಾಗಿದೆ.

ಕಾಂಗ್ರೆಸ್ ಕಾರ್ಪೊರೇಟರ್ ಎನ್ಆರ್ ರಮೇಶ್ 'ಕೈ'ವಾಡ
ಕಾಂಗ್ರೆಸ್ ಕಾರ್ಪೊರೇಟರ್ ಎನ್ಆರ್ ರಮೇಶ್ ಅವರು ಈ ಹಿಂದೆ ಸರ್ಕಾರಕ್ಕೆ ಪತ್ರ ಬರೆದು ಮೇಯರ್ ವೆಂಕಟೇಶಮೂರ್ತಿಯವರು ಮನಬಂದಂತೆ ಬಜೆಟ್‌ನಲ್ಲಿ ಬೇಕಾಬಿಟ್ಟಿ ಹಣ ಮೀಸಲಿಟ್ಟಿದ್ದಾರೆ. ಇದನ್ನು ಮಾರ್ಪಾಡು ಮಾಡಬೇಕೆಂದು ಮನವಿ ಮಾಡಿದ್ದರು. ಅದಕ್ಕೆ ಸ್ಪಂದಿಸಿರುವ ಸರ್ಕಾರ ಬಜೆಟ್ ಅನುದಾನಕ್ಕೆ ಸಮ ಕತ್ತರಿ ಹಾಕಿರುವುದು ವಿಶೇಷವಾಗಿದೆ.












Click it and Unblock the Notifications