ದಾವೂದ್ ಕರೆತರುವ ಕಾರ್ಯ ಎಲ್ಲಿಯವರೆಗೆ ಬಂದಿದೆ?
ನವದೆಹಲಿ, ಆಗಸ್ಟ್ 28: ಮುಂಬೈ ಸರಣಿ ಸ್ಫೋಟದ ಪ್ರಮುಖ ದೋಷಿ ದಾವೂದ್ ಇಬ್ರಾಹಿಂ ಭಾರತದ ಪ್ರಮುಖ ನಗರಗಳಲ್ಲಿ ಒಂದು ಲಕ್ಷ ಕೋಟಿ ರೂ ಆಸ್ತಿ ಹೊಂದಿದ್ದಾನೆ. ಆದರೆ ಸರಕಾರ ಇದನ್ನು ಮುಟ್ಟುಗೋಲು ಹಾಕಿಕೊಳ್ಳಲು ಮತ್ತು ಅದನ್ನು ತನ್ನ ಬಳಕೆಗೆ ವಿನಿಯೋಗಿಸಲು ಸಾಧ್ಯವಾಗುತ್ತಿಲ್ಲ ಎಂಬುದು ಇತ್ತೀಚೆಗೆ ಬಹಿರಂಗವಾಗಿತ್ತು.
ಇಂತಿಪ್ಪ ದಾವೂದ್ ಮತ್ತು ಅವನ ಅಪಾರ ಆಸ್ತಿಯ ಕುರಿತಾದ ತಾಜಾ ವರದಿಯೇನಪ್ಪಾ ಅಂದರೆ ಭೂಗತ ವ್ಯವಹಾರಗಳ ಮೂಲಕ ದಾವೂದ್ ಗಳಿಸಿರುವ ಆದಾಯದಲ್ಲಿ ಶೇ. 30ರಷ್ಟನ್ನು ಭಯೋತ್ಪಾದಕ ಕೃತ್ಯಗಳಿಗಾಗಿ ಹಂಚಿಕೆ ಮಾಡಿದರೆ ಆತನಿಗೆ ರಕ್ಷಣೆ ನೀಡುವುದಾಗಿ ಪಾಕಿಸ್ತಾನದ ISI ಭರವಸೆ ನೀಡಿದೆ!

ಈ ಕಹಿಸತ್ಯವನ್ನು ಬಾಯ್ಬಿಟ್ಟಿರುವುದು ದಾವೂದ್ ಹಾಗೂ ಐಎಸ್‌ಐ ಜತೆ ಸಖ್ಯ ಹೊಂದಿದ್ದ ಬಂಧಿತ ಎಲ್‌ಇಟಿ ಉಗ್ರ ಅಬ್ದುಲ್ ಕರೀಂ ತುಂಡಾ. ಸದ್ಯಕ್ಕೆ ದೆಹಲಿ ಪೊಲೀಸರ ಬಂಧನದಲ್ಲಿರುವ ತುಂಡಾ, ವಿಚಾರಣೆ ವೇಳೆ ಈ ಮಾಹಿತಿ ನೀಡಿದ್ದಾನೆ. ಇದೇ ವೇಳೆ, ಪಾಕಿಸ್ತಾನದಲ್ಲಿ ದಾವೂದ್ ಇರಬಹುದಾದ 3 ವಿಳಾಸಗಳನ್ನೂ ತುಂಡಾ ನೀಡಿದ್ದಾನೆ.
ಇದರೊಂದಿಗೆ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಪಾಕಿಸ್ತಾನದಲ್ಲೇ ವಾಸವಾಗಿರುವುದು ಮತ್ತು ದಾವೂದ್ ಹಾಗೂ ಪಾಕ್ ಗುಪ್ತಚರ ಸಂಸ್ಥೆ ISI ನಡುವಿನ 'ವ್ಯವಹಾರ' ಇರುವುದು ಬಹಿರಂಗ ಸತ್ಯವಾಗಿದೆ.
ಪಾತಕಿ ದಾವೂದನ 2 ಮನೆ ಕರಾಚಿಯಲ್ಲಿದ್ದರೆ ಮತ್ತೊಂದು ಇಸ್ಲಾಮಾಬಾದಿನಲ್ಲಿದೆ. ಕರಾಚಿಯ ಕ್ಲಿಪ್ಟನ್ ರಸ್ತೆಯಲ್ಲಿರುವ ವೈಟ್ ಹೌಸ್ ಬಂಗ್ಲೆಯೂ ಇದರಲ್ಲಿ ಸೇರಿದೆ. ಈ ಮೂರೂ ವಿಳಾಸಗಳ ಬಗ್ಗೆ ಭಾರತೀಯ ಗುಪ್ತಚರದಳದ ಬಳಿಯೂ ಮಾಹಿತಿಯಿದೆ.
ದಾವೂದ್ ಕರೆತರುವ ಕಾರ್ಯ ಎಲ್ಲಿಯವರೆಗೆ ಬಂದಿದೆ?:
ಈ ಮಧ್ಯೆ, ಪಾಕಿಸ್ತಾನದಲ್ಲಿ ನೆಲೆಸಿರುವ ಭೂಗತ ಪಾತಕಿ, ಮುಂಬೈ ಸರಣಿ ಸ್ಫೋಟದ ರೂವಾರಿ ದಾವೂದ್ ಇಬ್ರಾಹಿಂನನ್ನು ಭಾರತಕ್ಕೆ ಕರೆತರಲು ಕೈಗೊಂಡ ಕ್ರಮಗಳ ವಿವರ ನೀಡುವಂತೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅನಂತ್ ಕುಮಾರ್ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಲೋಕಸಭೆ ಪ್ರಶ್ನೋತ್ತರ ವೇಳೆಯಲ್ಲಿ ಮಂಗಳವಾರ ಈ ವಿಚಾರ ಪ್ರಸ್ತಾಪಿಸಿದ ಅವರು, ದಾವೂದನನ್ನು ಭಾರತೀಯ ಕಾನೂನಿನಂತೆ ವಿಚಾರಣೆ ನಡೆಸಲು ಸರ್ಕಾರ ಏನು ಕ್ರಮ ಕೈಗೊಂಡಿದೆ ಎನ್ನುವ ಕುರಿತು ಮಾಹಿತಿ ನೀಡುವಂತೆ ಗೃಹ ಸಚಿವ ಸುಶೀಲ್ ಕುಮಾರ್ ಶಿಂದೆ ಅವರನ್ನು ಕೋರಿದರು.
ಅನಂತ್ ಪ್ರಶ್ನೆಗೆ ಉತ್ತರಿಸಿದ ಶಿಂದೆ, ದಾವೂದ್ ಹಾಗೂ ಮುಂಬೈ ಸ್ಫೋಟದ ರೂವಾರಿ, ಉಗ್ರ ಹಫೀಜ್ ಸಯೀದ್ ಪಾಕ್ ನಲ್ಲೇ ಇದ್ದಾರೆ. ಅವರನ್ನು ಗಡಿಪಾರು ಮಾಡುವಂತೆ ಪಾಕ್ ಮೇಲೆ ಒತ್ತಡ ಹೇರಲಾಗಿದೆ. ಇತ್ತೀಚೆಗೆ ನಡೆದ ಇಂಟರ್ ಪೋಲ್ ಸಮಾವೇಶದಲ್ಲೂ ಭಾರತ ಈ ವಿಚಾರಕ್ಕೆ ಸಂಬಂಧಿಸಿ ಪ್ರತಿಭಟನೆ ನಡೆಸಿತ್ತು. ದಾವೂದನನ್ನು ಹಸ್ತಾಂತರಿಸುವಂತೆ ಒತ್ತಡ ಹಾಕಲಾಗಿತ್ತು ಎಂದು ಶಿಂದೆ ತಿಳಿಸಿದ್ದಾರೆ.












Click it and Unblock the Notifications