ಜೆಡಿಎಸ್ಸಿನ ಮತ್ತೊಂದು ವಿಕೆಟ್ ಪತನ?
ರಾಮನಗರ, ಆಗಸ್ಟ್ 27: ಹಾಲಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಅವರ ಎಡ-ಬಲವೇ ಇರುತ್ತಿದ್ದ ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ, ಈಚೆಗೆ ಅವರೊಂದಿಗೆ ಮನಸ್ತಾಪ ಹೊಂದಿದ್ದು, ತಮ್ಮ ರಾಜಕೀಯ ಭವಿಷ್ಯದ ದೃಷ್ಟಿಯಿಂದ ಜೆಡಿಎಸ್ ಗೆ ಗುಡ್ ಬೈ ಹೇಳಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇದೇ ವೇಳೆ, ಎಂಎಲ್ಸಿ ಪುಟ್ಟಣ್ಣ ಕಾಂಗ್ರೆಸ್‌ನತ್ತ ಮುಖ ಮಾಡಿದ್ದಾರೆ ಎನ್ನುವ ವದಂತಿಯೂ ಹಬ್ಬುತ್ತಿದೆ.
ಬೆಂಗಳೂರು ಪದವೀಧರ ಶಿಕ್ಷಕರ ಕ್ಷೇತ್ರದ ಚುನಾವಣೆ ಮುಂದಿನ ಜೂನ್ ತಿಂಗಳಲ್ಲಿ ನಡೆಯಲಿದೆ. ಅದಕ್ಕಾಗಿ ಈಗಿನಿಂದಲೇ ತಮ್ಮ ಹುಟ್ಟುಹಬ್ಬದ ನೆಪದಲ್ಲಿ ಶಿಕ್ಷಕರಿಗೆ ಔತಣ ನೀಡಿ ಚುನಾವಣಾ ತಾಲೀಮು ನಡೆಸುತ್ತಿದ್ದಾರೆ ಎನ್ನಲಾಗಿದೆ.

ಕಳೆದ ವಿಧಾನಸಭಾ ಚುನಾವಣೆಯಿಂದೀಚೆಗೆ ಪುಟ್ಟಣ್ಣ ಅವರನ್ನು ಕುಮಾರಸ್ವಾಮಿ ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಅಲ್ಲದೆ, ಅನಿತಾ ಕುಮಾರಸ್ವಾಮಿ ಚನ್ನಪಟ್ಟಣದಲ್ಲಿ ಸ್ಪರ್ಧಿಸಿದ್ದ ಸಂದರ್ಭದಲ್ಲಿ ಅವರ ಪರವಾಗಿ ಸರಿಯಾಗಿ ಕೆಲಸ ಮಾಡಿಲ್ಲ ಎಂದು ಕೆಲ ಸ್ಥಳೀಯ ಮುಖಂಡರು ಹೇಳಿದ ಚಾಡಿ ಮಾತಿಗೆ ಎಚ್ಡಿಕೆ ಮನ್ನಣೆ ನೀಡಿ, ತಮ್ಮನ್ನು ಕಡೆಗಣಿಸುತ್ತಿದ್ದಾರೆ. ಹಾಗಾಗಿ, ಇನ್ನು ಜೆಡಿಎಸ್‌ನಲ್ಲಿ ಇರುವುದು ಸೂಕ್ತವಲ್ಲ ಎನ್ನುವ ತೀರ್ಮಾನಕ್ಕೆ ಅವರು ಬಂದಿದ್ದಾರೆ ಎಂಬ ಮಾತು ಚಾಲ್ತಿಯಲ್ಲಿದೆ.
ಇದೇ ವೇಳೆ, ಕುಮಾರಸ್ವಾಮಿಯ ಪರಮಾಪ್ತ ಜಮೀರ್ ಅಹಮದ್ ಕೂಡ ಕಾಂಗ್ರೆಸ್ ಹೋಗುವುದು ಖಚಿತವಾದಂತಿದ್ದು, ಪುಟ್ಟಣ್ಣ ಸಹ ಅದೇ ಹಾದಿಹಿಡಿಯಲಿದ್ದಾರೆ. ಈ ಬಗ್ಗೆ ಡಿಕೆ ಶಿವಕುಮಾರ್ ಜತೆ ಮಾತುಕತೆಯೂ ನಡೆದಿದ್ದು, ಶಿವಕುಮಾರ್ ಸಚಿವ ಸಂಪುಟ ಸೇರ್ಪಡೆಯಾಗುತ್ತಿದ್ದಂತೆ ಈ ಬಗ್ಗೆ ಸ್ಪಷ್ಟ ಚಿತ್ರಣ ಮೂಡುವ ಸಂಭವ ಹೆಚ್ಚಿದೆ.












Click it and Unblock the Notifications