ಹಿಂದೂ ಯಾತ್ರೆ ವಿಫಲಗೊಳಿಸಿದ ಅಖಿಲೇಶ್
ಆಯೋಧ್ಯೆ, ಆ.26: ಅಯೋಧ್ಯೆಯ ವಿವಾದಿತ ಸ್ಥಳದಿಂದ ಯಾತ್ರೆ ನಡೆಸುವ ವಿಶ್ವಹಿಂದೂ ಪರಿಷತ್ (ವಿಎಚ್ ಪಿ) ಉದ್ದೇಶವನ್ನು ಅಖಿಲೇಶ್ ಯಾದವ್ ಸರ್ಕಾರ ವಿಫಲಗೊಳಿಸಿದೆ. ಯಾತ್ರೆಗೆ ನಿಷೇಧ ಹೇರಿದ್ದ ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ಸರ್ಕಾರವು ಭಾನುವಾರ ವಿಎಚ್ ಪಿ ಪ್ರಮುಖ ನಾಯಕರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಈ ನಡುವೆ ಯಾತ್ರೆಗೆ ಅಡ್ಡಿ ಪಡಿಸುವ ಮೂಲಕ ಅಖಿಲೇಶ್ ಯಾದವ್ ಸರ್ಕಾರ ಸಂವಿಧಾನದ 19ನೇ ವಿಧಿಯನ್ನು ಮುರಿದಿದೆ. ಹಿಂದೂ ಸಾಧು ಸಂತರ ಕ್ಷಮೆಯಾಚಿಸಬೇಕು ಎಂದು ಇತ್ತೀಚೆಗೆ ಬಿಜೆಪಿ ಸೇರಿದ ಸುಬ್ರಮಣ್ಯ ಸ್ವಾಮಿ ಆಗ್ರಹಿಸಿದ್ದಾರೆ.
ವಿಎಚ್ ಪಿ ನಾಯಕರಾದ ಪ್ರವೀಣ್ ತೊಗಾಡಿಯಾ, ಅಶೋಕ್ ಸಿಂಘಾಲ್, ಬಿಜೆಪಿಯ ಮಾಜಿ ಸಂಸದ ರಾಮ್ ವಿಲಾಸ್ ವೇದಾಂತಿ, ಹಾಲಿ ಶಾಸಕ ರಾಮಚಂದ್ರ ಯಾದವ್ ಸೇರಿದಂತೆ 1,600ಕ್ಕೂ ಅಧಿಕ ಮಂದಿಯನ್ನು ಬಂಧಿಸುತ್ತಿದ್ದಂತೆ ಯಾತ್ರೆ ನಡೆಸುವ ಉತ್ಸಾಹ ಕುಗ್ಗುತ್ತಾ ಬಂದಿತು.
ಬಂಧಿತರೆಲ್ಲರನ್ನೂ 14 ದಿನಗಳ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಸೆ.13ರವರೆಗೆ ಯಾತ್ರೆ ನಡೆಸಲು ವಿಎಚ್‌ಪಿ ನಿರ್ಧರಿಸಿತ್ತು. ಇನ್ನೂ ಯಾತ್ರೆಯನ್ನು ವಾಪಸ್ ಪಡೆದಿಲ್ಲ. ಹಾಗಾಗಿ ರಾಜ್ಯಾದ್ಯಂತ ಬಿಗಿಭದ್ರತೆ ಮುಂದುವರಿಯಲಿದೆ ಹಾಗೂ ಯಾರಾದರೂ ಆಗಮಿಸಿದರೆ ಅವರನ್ನೂ ಬಂಧಿಸಲಾಗುವುದು ಎಂದು ಐಜಿ ವಿಶ್ವಕರ್ಮ ತಿಳಿಸಿದ್ದಾರೆ. ಈಗಾಗಲೇ ಫೈಜಾಬಾದ್, ನೆರೆಯ 5 ಜಿಲ್ಲೆಗಳಲ್ಲಿ ನಿಷೇಧಾಜ್ಞೆ ವಿಧಿಸಲಾಗಿದೆ. ಅಯೋಧ್ಯೆಯಲ್ಲಿ 8 ಸಾವಿರಕ್ಕೂ ಅಧಿಕ ಪೊಲೀಸ್, ಅರೆಸೇನಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇನ್ನಷ್ಟು ವಿವರ ಮುಂದೆ ಓದಿ

ಯಾತ್ರೆ ಸಮಯ ಸರಿ ಇದೆಯೇ?
ಚಾತುರ್ಮಾಸದ ಅವಧಿಯಲ್ಲಿ ಅಂದರೆ ಆಗಸ್ಟ್ ನಿಂದ ಡಿಸೆಂಬರ್ ವರೆಗೆ ಯಾತ್ರೆ ನಡೆಸುವುದು ಹಿಂದೂ ಸಂಪ್ರದಾಯಕ್ಕೆ ವಿರುದ್ಧ ಎಂದು ಅರ್ಚಕ ಆಚಾರ್ಯ ಸತೇಂದ್ರ ದಾಸ್ ಹೇಳಿದ್ದಾರೆ. ಇದಕ್ಕೆ ಧಾರ್ಮಿಕ ಪಾವಿತ್ರ್ಯ ಇರದ ಕಾರಣ ನೈಜ ರಾಮಭಕ್ತ ಸಂತರು ಈ ಯಾತ್ರೆಗೆ ಆಗಮಿಸಲಾರರು ಎಂದಿದ್ದಾರೆ. ಹೀಗಾಗಿ ಇದೊಂದು ರಾಜಕೀಯ ಪ್ರೇರಿತ ಯಾತ್ರೆ ಎಂದು ಅನೇಕರು ಖಂಡಿಸಿದ್ದಾರೆ.

ಇಂದು ಪ್ರತಿಭಟನೆ
ಉತ್ತರ ಪ್ರದೇಶ ಸರ್ಕಾರದ ಕ್ರಮಕ್ಕೆ ವಿಎಚ್ ಪಿ ನಾಯಕ ತೊಗಾಡಿಯಾ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ರಾಜಕೀಯ ಯಾತ್ರೆ ಅಲ್ಲ, ಧಾರ್ಮಿಕ ಯಾತ್ರೆ. ಇದನ್ನು ತಡೆದ ಸರ್ಕಾರದ ಕ್ರಮವನ್ನು ಸಹಿಸಲು ಸಾಧ್ಯವೇ ಇಲ್ಲ. ಸರ್ಕಾರದ ವಿರುದ್ಧ ಸೋಮವಾರ ದೇಶಾದ್ಯಂತ ಪ್ರತಿಭಟನೆ ನಡೆಸಲಿದ್ದೇವೆ. ದೇಶದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಧರಣಿ, ಪ್ರತಿಭಟನೆ ನಡೆಯಲಿವೆ ಎಂದು ತೊಗಾಡಿಯಾ ತಿಳಿಸಿದ್ದಾರೆ. ಬೆಂಗಳೂರಿನ ಟೌನ್ ಹಾಲ್ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

ಬಿಗಿ ಭದ್ರತೆ
ವಿಎಚ್ ಪಿ ಯಾತ್ರೆ ನಡೆಯದಂತೆ ತಡೆಯಲು ಬಿಗಿ ಬಂದೋ ಬಸ್ತ್ ಮಾಡಲಾಗಿತ್ತು. ತೊಗಾಡಿಯಾರನ್ನು ಅಯೋಧ್ಯೆಯ ಮಂದಿರವೊಂದರ ಬಳಿ ವಶಕ್ಕೆ ತೆಗೆದುಕೊಂಡರೆ, ಅಶೋಕ್ ಸಿಂಘಾಲ್ ರನ್ನು ಲಖ್ನೋ ಏರ್ ಪೋರ್ಟ್ ನಲ್ಲಿ ತಡೆಹಿಡಿಯಲಾಯಿತು. ಈ ವೇಳೆವಿಮಾನ ನಿಲ್ದಾಣದ ಹೊರಗಡೆ ವಿಎಚ್ ಪಿ ಮತ್ತು ಬಿಜೆಪಿ ಕಾರ್ಯಕರ್ತರು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು. ಆದರೆ ಅಖಿಲೇಶ್ ಯಾದವ್ ಸರ್ಕಾರ ಯಾತ್ರೆ ಸಂಪೂರ್ಣ ವಿಫಲವಾಗುವಂತೆ ಮಾಡಿತು.

ಸಾಧು ಸಂತರು ಸೆರೆ
ಸಾಧು ಸಂತರು ಎಂಬ ಲೆಕ್ಕವಿಲ್ಲದೆ ಎಲ್ಲರನ್ನು ಬಂಧಿಸಿ ವಿವಾದಿತ ಪ್ರದೇಶದಿಂದ ಹೊರಗಿಡಲಾಯಿತು. ಇನ್ನಷ್ಟು ಚಿತ್ರಗಳನ್ನು ನಿರೀಕ್ಷಿಸಿ..












Click it and Unblock the Notifications