ಮದರಸಾ ಶಿಕ್ಷಕನಿಂದ ಬಾಲಕಿಗೆ ಲೈಂಗಿಕ ದೌರ್ಜನ್ಯ
ಮಂಗಳೂರು, ಆ.26: ಇಲ್ಲಿನ ಬೊಲಿಯಾರ್ ಸಮೀಪದಲ್ಲಿರುವ ಮದರಸಾದಲ್ಲಿ ಇಸ್ಲಾಂ ಧರ್ಮ ಬೋಧನೆ ಮಾಡುತ್ತಿರುವ ಶಿಕ್ಷಕರೊಬ್ಬರು ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜರ್ನ್ಯ ಎಸಗಿದ್ದಾರೆ ಎಂದು ಆರೋಪಿಸಿ ಬಂಧಿಸಲಾಗಿದೆ. ಏಳು ವರ್ಷ ಬಾಲಕಿ ಮೇಲೆ ಕಾಮದೃಷ್ಟಿ ಬೀರಿ, ಲೈಂಗಿಕ ಹಿಂಸೆ ನೀಡಿದ ಶಿಕ್ಷಕನನ್ನು ಅಬ್ದುಲ್ ಕರೀಂ ಎಂದು ಗುರುತಿಸಲಾಗಿದೆ.
ಕಳೆದ ತಿಂಗಳು ಪವಿತ್ರ ರಂಜಾನ್ ಆಚರಣೆ ಮುಗಿಯುತ್ತಿದ್ದಂತೆ ಈ ಬಾಲಕಿ ಮಾನಸಿಕ ಖಿನ್ನತೆ ಒಳಗಾಗಿರುವುದು ಗಮನಕ್ಕೆ ಬಂದಿದೆ. ಬಾಲಕಿಯ ಹಿತೈಷಿಗಳು ಮಕ್ಕಳ ಸಹಾಯವಾಣಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ರಂಜಾನ್ ಮಾಸ ಮುಗಿಯುತ್ತಿದ್ದಂತೆ ಶಿಕ್ಷಕ ಕರೀಂ ಆಕೆ ಮೇಲೆ ದೌರ್ಜನ್ಯ ಎಸಗಿದ್ದಾನೆ ಎಂದು ತಿಳಿದು ಬಂದಿದೆ.

ದೂರು ನೀಡಿದರೂ ಪ್ರಯೋಜನವಿಲ್ಲ: ಲೈಂಗಿಕ ಹಿಂಸೆ ಅನುಭವಿಸಿದ ಬಾಲಕಿ ತನ್ನ ನೋವನ್ನು ಮೊದಲಿಗೆ ಸ್ನೇಹಿತೆಯರಲ್ಲಿ ಹೇಳಿಕೊಂಡಿದ್ದಾಳೆ. ಅಲ್ಲಿಂದ ವಿಷಯ ಶಾಲೆಯ ಮುಖ್ಯೋಪಾಧ್ಯಯರಿಗೆ ತಲುಪಿದೆ. ಶಾಲಾ ಮುಖ್ಯಸ್ಥರು ದೂರನ್ನು ಮದರಸಾ ಸಮಿತಿ ಕಿವಿಗೆ ಹಾಕಿದ್ದಾರೆ. ಮದರಸಾ ಸಮಿತಿ ಅವರು ಶಿಕ್ಷಕನ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ಇಟ್ಟುಕೊಂಡಿದ್ದ ಬಾಲಕಿಯ ಪೋಷಕರಿಗೆ ನಿರಾಶೆಯಾಗಿದೆ.
ಶಿಕ್ಷಕ ಕರೀಂ ಪ್ರಭಾವಿ ನಾಯಕರ ಸಂಪರ್ಕ ಹೊಂದಿದ್ದು ಆತನ ಮೇಲೆ ಕ್ರಮ ಜರುಗಿಸಲು ಸಮಿತಿಯ ಸದಸ್ಯರು ಹಿಂಜರೆದಿದ್ದಾರೆ. ಕೆಲವು ಸದಸ್ಯರು ಮಾತ್ರ ಕ್ರಮ ಜರುಗಿಸುವುದೇ ಸರಿ ಎಂದು ವಾದಿಸಿದ್ದಾರೆ. ಶಿಕ್ಷಕನಿಗೆ ಶಿಕ್ಷೆ ನೀಡುವ ಬಗ್ಗೆ ಸಮಿತಿ ಒಮ್ಮತಕ್ಕೆ ಬರಲು ಸಾಧ್ಯವಾಗದೆ ಪರಸ್ಪರ ಕೆಸರೆರಚಾಟಕ್ಕೆ ಮುಂದಾಗಿದ್ದಾರೆ. ಈ ಆಂತರಿಕ ಕಿತ್ತಾಟ ಇನ್ನೂ ಮುಂದಕ್ಕೆ ಸಾಗಿ ಸಂತ್ರಸ್ತ ಬಾಲಕಿಯ ಪೋಷಕರು ದೂರನ್ನು ಹಿಂಪಡೆಯುವಂತಾಗಿದೆ.
ಈ ಬಗ್ಗೆ ಬಾಲಕಿಯ ಸಂಬಂಧಿಕರೊಬ್ಬರಿಗೆ ತಡವಾಗಿ ವಿಷಯ ತಿಳಿದು ಬಂದಿದ್ದು ಅವರು ತಕ್ಷಣವೇ ಮಕ್ಕಳ ಕಲ್ಯಾಣ ಸಮಿತಿಗೆ ಕರೆ ಮಾಡಿ ನಡೆದ ಘಟನೆಯನ್ನು ವಿವರಿಸಿದ್ದಾರೆ. ಮೊದಲಿಗೆ ಬಾಲಕಿ ಹಾಗೂ ಪೋಷಕರಿಗೆ ಕೌನ್ಸಲಿಂಗ್ ನಡೆಸಿದ ಕಲ್ಯಾಣ ಸಮಿತಿ, ಪೋಲೀಸ್ ಠಾಣೆಗೆ ದೂರು ನೀಡುವಂತೆ ಸೂಚಿಸಿದ್ದಾರೆ. ಸಮಿತಿಯವರ ಬುದ್ಧಿವಾದದ ನಂತರ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಪೊಲೀಸರು ಶಿಕ್ಷಕನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿರುವುದನ್ನು ಒಪ್ಪಿಕೊಂಡಿದ್ದಾನೆ.












Click it and Unblock the Notifications