ಬೆಂಗಳೂರಿನಲ್ಲಿ 11 ದಿನ ಮಾತ್ರ ಗಣೇಶ ಪ್ರತಿಷ್ಠಾಪನೆ
ಬೆಂಗಳೂರು, ಆ.26 : ನಗರದ ತುಂಬಾ ಗಣೇಶನ ಹಬ್ಬ ಆಚರಿಸಲು ಸಿದ್ಧತೆಗಳು ನಡೆಯುತ್ತಿವೆ. ಗಣೇಶನ ಪ್ರತಿಷ್ಠಾಪನೆ ವೇಳೆ ಸಂಘಟಕರು ಬಿಬಿಎಂಪಿಯ ನಿಯಮಗಳನ್ನು ಪಾಲನೆ ಮಾಡಬೇಕು ಎಂದು ಸಾರ್ವಜನಿಕರಿಗೆ ಪಾಲಿಕೆ ಮನವಿ ಮಾಡಿದೆ. 11 ದಿನ ಮಾತ್ರ ಗಣೇಶ ಪ್ರತಿಷ್ಠಾಪನೆ ಮಾಡಬೇಕು ಎಂದು ಬಿಬಿಎಂಪಿ ಆದೇಶ ಹೊರಡಿಸಿದೆ.
ಜಂಟಿ ಸುದ್ದಿಗೋಷ್ಠಿ ನಡೆಸಿದ ಬಿಬಿಎಂಪಿ ಮೇಯರ್ ಡಿ.ವೆಂಕಟೇಶಮೂರ್ತಿ ಹಾಗೂ ಆಯುಕ್ತ ಎಂ. ಲಕ್ಷ್ಮೀನಾರಾಯಣ, ನೀರಿನಲ್ಲಿ ಕರಗದ ಹಾಗೂ ಹಾನಿಕಾರಕ ರಾಸಾಯನಿಕ ಬಣ್ಣ ಲೇಪಿಸಿದ, ಪ್ಲಾಸ್ಟರ್ ಆಫ್ ಫ್ಯಾರಿಸ್‌ನಿಂದ ಮಾಡಿದ ಮೂರ್ತಿಗಳ ಪ್ರತಿಷ್ಠಾಪನೆ ಹಾಗೂ ವಿಸರ್ಜನೆ ಮಾಡಬಾರದು ಎಂದು ಮನವಿ ಮಾಡಿದರು.

ಪರಿಸರಕ್ಕೆ ಪೂರಕವಾದಂತಹ ಗಣೇಶ ಮೂರ್ತಿಗಳನ್ನು ತಯಾರಿಸುವಂತೆ ತಯಾರಕರ ಬಳಿ ಚರ್ಚೆ ನಡೆಸಲಾಗುವುದು. ಸೀಸ ರಹಿತ ಮತ್ತು ರಾಸಾನಿಯಕ ಬಣ್ಣ ರಹಿತವಾದ ನೈಸರ್ಗಿಕ ಸ್ನೇಹಿ ಗಣೇಶ ಮೂರ್ತಿಗಳನ್ನು ಇಡುವ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಲಾಗುವುದು ಎಂದು ಆಯುಕ್ತರು ತಿಳಿಸಿದರು.
11 ದಿನ ಮಾತ್ರ ಅವಕಾಶ : ಸೆ.8 ರಿಂದ ಗಣೇಶ ಹಬ್ಬ ಪ್ರಾರಂಭವಾಗಲಿದೆ. ಸೆ. 9 ರಂದು ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತದೆ. ಹೀಗೆ ಮೂರ್ತಿ ಪ್ರತಿಷ್ಠಾಪನೆ ಮಾಡುವ ಸಂಘ-ಸಂಸ್ಥೆ ಹಾಗೂ ಸಾರ್ವಜನಿಕರು ಕೇವಲ 11 ದಿನಗಳ ಕಾಲ ಮಾತ್ರ ಗಣೇಶ ಪ್ರತಿಷ್ಠಾಪನೆ ಮಾಡಬೇಕು ಎಂದು ಬಿಬಿಎಂಪಿ ಖಡಕ್ ಆದೇಶ ನೀಡಿದೆ.
ಸೆಪ್ಟೆಂಬರ್ 20ರೊಳಗೆ ಬಿಬಿಎಂಪಿ ವ್ಯಾಪ್ತಿಯಲ್ಲಿನ ಎಲ್ಲಾ ಮೂರ್ತಿಗಳನ್ನು ವಿಸರ್ಜನೆ ಮಾಡಬೇಕು. ಈ ಸೂಚನೆ ಪಾಲಿಸದಿದ್ದಲ್ಲಿ ಅಂತಹ ಮೂರ್ತಿಗಳನ್ನು ಪಾಲಿಕೆಯೇ ವಿಸರ್ಜನೆ ಮಾಡಬೇಕಾಗುತ್ತದೆ ಎಂದು ಆಯುಕ್ತ ಎಂ.ಲಕ್ಷ್ಮೀನಾರಾಯಣ ತಿಳಿಸಿದ್ದಾರೆ.
ಗಣಪತಿ ವಿಸರ್ಜನೆ : ಗಣೇಶ ಮೂರ್ತಿಗಳನ್ನು ನಗರ ಪ್ರದೇಶದ ಒಳಗೆ ಹಲಸೂರು ಕೆರೆ, ಸ್ಯಾಂಕಿ ಕೆರೆ, ಯಡಿಯೂರು ಕೆರೆ, ಸಾಣೆಗುರುವನಹಳ್ಳಿ ಕೆರೆಗಳಲ್ಲಿ ವಿಸರ್ಜನೆ ಮಾಡಲು ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಮೇಯರ್ ವೆಂಕಟೇಶಮೂರ್ತಿ ಹೇಳಿದ್ದಾರೆ.
ಇದರ ಜೊತೆಗೆ ನಗರದ ಹೊರವಲಯದ 32 ಕೆರೆಗಳನ್ನು ಗಣೇಶ ವಿಸರ್ಜನೆಗಾಗಿ ಗುರುತಿಸಲಾಗಿದೆ. ಜತೆಗೆ, 88ಕ್ಕೂ ಹೆಚ್ಚು ಸಂಚಾರಿ ಘಟಕ ಕಾರ್ಯ ನಿರ್ವಹಿಸಲಿವೆ. ಟ್ಯಾಂಕರ್ ಗಳ ಮೂಲಕ ಪುಟ್ಟ ಮೂರ್ತಿಗಳ ವಿಸರ್ಜನೆಗೆ ಅವಕಾಶ ಕಲ್ಪಿಸಿ ಕೊಡಲಾಗುವುದು ಎಂದು ಮೇಯರ್ ಮಾಹಿತಿ ನೀಡಿದರು.
ಕಸದ ಸಮಸ್ಯೆ : ಬಿಬಿಎಂಪಿ ಹಬ್ಬದ ಸಂದರ್ಭದಲ್ಲಿ ನಗರದಲ್ಲಿ ಉಂಟಾಗುವ ಕಸದ ಸಮಸ್ಯೆ ನಿವಾರಿಸಲು ಸಜ್ಜಾಗಿದೆ. ಹೂವು, ಬಾಳೆ ಕಂಬ, ತೋರಣ ಸೇರಿದಂತೆ ಎಲ್ಲಾ ತ್ಯಾಜ್ಯವನ್ನೂ ಪಾಲಿಕೆ ಸೂಚಿಸಿದ ಕಸದ ತೊಟ್ಟಿಗಳಲ್ಲಿ ಹಾಕಲು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಮುಂದಾಗಿದೆ. ಬ್ಯಾನರ್ ಮತ್ತು ಬಂಟಿಗ್ಸ್ ಹಾಕುವುದಕ್ಕೆ ನಿಷೇಧ ವಿಧಿಸಿದೆ.












Click it and Unblock the Notifications