JDS ಸೋಲಿನ ಹೊಣೆ ನೇರವಾಗಿ ದೇವೇಗೌಡ್ರ ಹೆಗಲಿಗೆ
ರಾಮನಗರ, ಆಗಸ್ಟ್ 24: ನಿಜಕ್ಕೂ ಇದು ದೊಡ್ಡಗೌಡರ ಕುಟುಂಬಕ್ಕೆ ಸಂದ ಅಪಜಯ. ಅದೇ ಉಸಿರಿನಲ್ಲಿ ಹೇಳಬೇಕು ಅಂದರೆ ಒಂದು ಕಡೆ ಡಿಕೆಶಿಗೂ ಮತ್ತೊಂದು ಕಡೆ ಕಾಂಗ್ರೆಸ್ಸಿಗೆ ಗೆಲುವಿನ ಕಾಣಿಕೆಯಾಗಿದೆ.
ಬೆಂಗಳೂರು ಗ್ರಾಮಾಂತರ ಮತ್ತು ಮಂಡ್ಯದಲ್ಲಿ ಜೆಡಿಎಸ್- ಕಾಂಗ್ರೆಸ್ ನಡುವೆ ತೀವ್ರ ಜಿದ್ದಾಜಿದ್ದಿಯಾಗಿ ಚುನಾವಣೆ ನಡೆದಿತ್ತಾದರೂ ಈ ಕ್ಷಣದ ಫಲಿತಾಂಶ ನೋಡಿದರೆ ಕಾಂಗ್ರೆಸ್ ಗೆಲುವಿನ ನಾಗಾಲೋಟ ಸಂಪಾದಿಸಿದೆ ಎನ್ನಬಹುದು.
ಇನ್ನು, ಜೆಡಿಎಸ್ ಜತೆ ಅನೈತಿಕ ಮೈತ್ರಿ ಮಾಡಿಕೊಂಡ ಬಿಜೆಪಿ ಜೆಡಿಎಸ್ ಹಿರಿಯ ನಾಯಕ ವೈಎಸ್ ವಿ ದತ್ತಾ ಅವರೇ ಮಾರ್ಮಿಕವಾಗಿ ಹೇಳಿದಂತೆ ಬಿಜೆಪಿ ಪಕ್ಷವು ಅಂಗೈ ತೋರಿಸಿ ಅವಲಕ್ಷಣವೆನಿಸಿಕೊಂಡಿದೆ.

ವೈಯಕ್ತಿಕ ನೆಲೆಗಟ್ಟಿನಲ್ಲಿ ನೋಡಿದರೆ ಬೆಂಗಳೂರು ಗ್ರಾಮಾಂತದಲ್ಲಿ ಡಿಕೆ ಶಿವಕುಮಾರ್ ವಿರುದ್ಧ ಎಚ್ ಡಿ ಕುಮಾರಸ್ವಾಮಿ ಅವರ ಸೋಲು. ಈ ಸೋಲನ್ನು ವಿಸ್ತರಿಸಿ ಹೇಳುವುದಾದರೆ ಅನಿತಾ ಕುಮಾರಸ್ವಾಮಿಗೆ ಸೋಲಿನ ಸರಮಾಲೆಯಾಗಿದ್ದು, ಚುನಾವಣೆ ಸ್ಪರ್ಧೆಗಳಿಂದ ಹಿಂದೆಸರಿಯುವ ಕಾಲ. ಇನ್ನು ಕೊನೆಯದಾಗಿ ದೊಡ್ಡಗೌಡರಿಗೂ ಅಪಜಯವೇ.
ರಾಜೀನಾಮೆಗೂ ಮುಂಚೆ ಅಭ್ಯರ್ಥಿಗಳ ಆಯ್ಕೆ ಮಾಡಿಟ್ಟಿದ್ದ ಗೌಡರಿಗೆ ಭಾರಿ ಅಪಜಯ:
ಹಾಗೆ ನೋಡಿದರೆ, ಒಂದು ಕ್ಷೇತ್ರದಿಂದ ತಮ್ಮ ಸೊಸೆ ಅನಿತಾರನ್ನು ಮತ್ತೊಂದು ಕ್ಷೇತ್ರದಿಂದ ಜೆಡಿಎಸ್ ಕಟ್ಟಾಳು ಪುಟ್ಟರಾಜು ಅವರನ್ನೇ ಕಣಕ್ಕಿಳಿಸುವ ತೀರ್ಮಾನ ಕೈಗೊಂಡೇ ದೊಡ್ಡಗೌಡರು ತಮ್ಮಿಬ್ಬರೂ ಸಂಸದರಿಂದ ರಾಜೀನಾಮೆ ಕೊಡಿಸಿದ್ದರು. ಅಂದರೆ ಚುನಾವಣೆ ಘೋಷಣೆಗೂ ಮುನ್ನವೇ ಜೆಡಿಎಸ್ ಅಭ್ಯರ್ಥಿಗಳ ಆಯ್ಕೆಯಾಗಿತ್ತು.
ಆದರೆ ಕಾಂಗ್ರೆಸ್ ವಿಷಯದಲ್ಲಿ ಹೀಗೆ ಹೇಳಲಾಗದು. In fact ಕೊನೆಯ ಕ್ಷಣದಲ್ಲಿ ಅಭ್ಯರ್ಥಿಗಳ ಆಯ್ಕೆಯಾಗಿದ್ದು. ರಮ್ಯಾ ಮತ್ತು ಸುರೇಶ್ ಅವರುಗಳನ್ನು ನಿಲ್ಲಿಸುವ ಬಗ್ಗೆ ಸ್ವತಃ ಕಾಂಗ್ರೆಸ್ ಪಕ್ಷದಲ್ಲೇ ವಿರೋಧ/ ಅಪನಂಬಿಕೆಯಿತ್ತು.
ಊರಿಗೊಬ್ಳೇ ಪದ್ಮಾವತಿ!:
ಪುಟ್ಟರಾಜು ಅವರಂತೂ ದೊಡ್ಡಗೌಡ್ರ ಆಶಿರ್ವಾದ ಪಡೆಯುತ್ತಿದ್ದಂತೆ ಮನೆ ಮನೆಗೂ ಭೇಟಿ ನೀಡತೊಡಗಿದರು. ಮತದಾರರ ವಿಶ್ವಾಸವನ್ನು ಗಳಿಸಿದ್ದರು. ಆದರೆ ಅಧಿಕೃತವಾಗಿ ರಮ್ಯಾ ಎಂಟ್ರಿ ಆಗುತ್ತಿದ್ದಂತೆ ಚಿತ್ರಣವೇ ಬದಲಾಗತೊಡಗಿತು.
ಅನುಕಂಪದ ಅಲೆ: ಅದೂ ಜೆಡಿಎಸ್ಸಿನ ಅರಿವುಗೇಡಿ ಮಾಜಿ ಶಾಸಕರೊಬ್ಬರು ರಮ್ಯಾ ಪ್ರನಾಳ ಶಿಶು, ಆಕೆಯ ಅಪ್ಪ ಯಾರು ಮೂಲಕ್ಕೆ ಕೈಹಾಕಿದಾಗ ಗೆಲುವಿನ ಭರವಸೆಯಲ್ಲಿದ್ದ ಪುಟ್ಟರಾಜುಗೆ ಏಟುಬಿತ್ತು. ಅದು ಅಷ್ಟಕ್ಕೇ ಮಗಿಯಲಿಲ್ಲ. ಮುಂದೆ, ಜವಾಬ್ದಾರಿ ಮೆರೆಯಬೇಕಿದ್ದ ಕುಮಾರಸ್ವಾಮಿ ಸಹ ತಮ್ಮ ಶಾಸಕ ಮಿತ್ರ ಕೇಳಿದ್ದ ಪ್ರಶ್ನೆಯನ್ನು ಅನುಮೋದಿಸುತ್ತಾ ರಮ್ಯಾ ಅಪ್ಪನ ಬಗ್ಗೆ ತಮಗೂ ಡೌಟಿದೆ ಎಂಬಂತೆ ಮಾತನಾಡಿದರು. ಅಲ್ಲಿಗೆ ಪುಟ್ಟರಾಜು ಹಾಕಿದ್ದ ಬೇಸ್ ನಿಧಾನಕ್ಕೆ ಕುಸಿಯತೊಡಗಿತು.
ಮುಂದೆ ಕಾಂಗ್ರೆಸ್ಸಿನ ನಾಯಕರು ಅಭೂತಪೂರ್ವ ಒಗ್ಗಟ್ಟು ಪ್ರದರ್ಶಿಸಿದ್ದು, ರಮ್ಯಾ ಗೆಲುವಿಗೆ ಸೋಪಾನವಾಯಿತು. ಅಂಬರೀಷ್ ಅವರಿಗಂತೂ ಈಗ ಸೋಮೇಶ್ವರನೆದುರು ಉರುಳುಸೇವೆ ಮಾಡುವ ಸೌಭಾಗ್ಯ (ಸಂಕಷ್ಟ!?) ಎದುರಾಗಿದೆ.
ಇನ್ನು ಬೆಂಗಳೂರು ಗ್ರಾಮಾಂತರವಂತೂ ಕುಮಾರಸ್ವಾಮಿಗೆ ಮೀಸಲು ಕ್ಷೇತ್ರ ಎಂಬಂತಾಗಿತ್ತು. ದೊಡ್ಡಗೌಡರಾದಿಯಾಗಿ ಕುಟುಂಬದವರೆಲ್ಲಾ ಮತದಾರರಿಗೆ ಭಾರಿ ಮೋಡಿ ಮಾಡಲು ಯತ್ನಿಸಿದರು. ಆದರೆ ಮತದಾರ ಚಿತ್ತ ಕಾಂಗ್ರೆಸ್ಸಿನತ್ತ ದೃಢವಾಗಿಯೇ ನೆಟ್ಟಿತ್ತು ಎಂಬುದು ದೊಡ್ಡಗೌಡ ಅರಿವಿಗೂ ಬರಲಿಲ್ಲ. ಕುಮಾರಸ್ವಾಮಿ ಕಣ್ಣೀರಿಗೂ ಮತದಾರ ಕರಗಲಿಲ್ಲ.
ಬಿಜೆಪಿ ಜತೆ (ಆರ್ ಅಶೋಕ್) ಜೆಡಿಎಸ್ ಅನೈತಿಕ ಸ್ನೇಹ ಕಂಡುಬಂದಿದ್ದು ಮತದಾರನನ್ನು ಕೆರಳಿಸಿತ್ತಾದರೂ ಯೋಗೀಶ್ವರ್ ಜತೆ ಕಾಂಗ್ರೆಸ್ (ಡಿಕೆಶಿ) ಸ್ನೇಹ ಕುದುರಿದ್ದು ವರವಾಗಿ ಪರಿಣಮಿಸಿದ್ದು ಪವಾಡವೇ!
ಏನೇ ಆಗಲಿ, ಈ ಚುನಾವಣೆ ಕೇವಲ 8-10 ತಿಂಗಳ ಸಾಮ್ರಾಜ್ಯಕ್ಕಾಗಿ ನಡೆದಿದ್ದಾದರೂ ಮತದಾರ ಜೆಡಿಎಸ್ ಪಕ್ಷಕ್ಕೆ ಮರ್ಮಾಘಾತ ನೀಡಿರುವುದು ದಿಟ.












Click it and Unblock the Notifications