ಅತಿ ಶ್ರೀಮಂತರಿಗೆ ಶೇ.35 ರಷ್ಟು ತೆರಿಗೆ ಹೊರೆ?

ಗುರುವಾರ ಕೇಂದ್ರ ಸಚಿವ ಸಂಪುಟ ಸಭೆ ನಡೆಯಲಿದ್ದು ಅದರಲ್ಲಿ, ಡಿಟಿಸಿ (ನೇರ ತೆರಿಗೆ ಸಂಹಿತೆ) ಮಸೂದೆ ಕುರಿತು ಮಹತ್ವದ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ. ಮಸೂದೆಗೆ ಕೇಂದ್ರ ಸಂಪುಟದ ಒಪ್ಪಿಗೆ ದೊರೆತರೆ ಅತಿ ಶ್ರೀಮಂತರು ಶೇ 35ರಷ್ಟು ತೆರಿಗೆ ಪಾವತಿ ಮಾಡಬೇಕಾಗುತ್ತದೆ.
ಸಂಸದೀಯ ಸ್ಥಾಯಿ ಸಮಿತಿ ಮಸೂದೆ ಕುರಿತು ಸರ್ಕಾರಕ್ಕೆ ಕೆಲವೊಂದು ಶಿಫಾರಸ್ಸುಗಳನ್ನು ನೀಡಿದೆ. ಅವುಗಳನ್ನು ಸಂಪುಟ ಸಭೆಯಲ್ಲಿ ಅಂಗೀಕರಿಸಿ ಅದರ ಜೊತೆಗೆ ಕೆಲವೊಂದು ತಿದ್ದುಪಡಿತಂದು ಮಸೂದೆಗೆ ಅನುಮೋದನೆ ಪಡೆಯುವ ಸಾಧ್ಯತೆ ಇದೆ.
ತೆರಿಗೆ ಭಾರವಾಗಲಿದೆ : ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ, 1ಕೋಟಿ ರೂ.ಗಿಂತ ಹೆಚ್ಚಿನ ಆದಾಯ ಹೊಂದಿದ ಶ್ರೀಮಂತರಿಗೆ ಶೇ.10ರಷ್ಟು ಹೆಚ್ಚುವರಿ ತೆರಿಗೆ ಅಂದರೆ ಸೆಸ್ ವಿಧಿಸುವ ಬಗ್ಗೆ ಹಣಕಾಸು ಸಚಿವ ಪಿ.ಚಿದಂಬರಂ ಘೋಷಣೆ ಮಾಡಿದ್ದರು.
ಅಂದರೆ ಶೇ.30ರಷ್ಟು ತೆರಿಗೆಯ ಮೇಲೆ ಶೇ.10ರಷ್ಟು ಸೆಸ್ ಅಂದರೆ ಅಂದಾಜು 33ರಷ್ಟು ತೆರಿಗೆ ವಿಧಿಸುವ ಘೋಷಣೆ ಮಾಡಿದ್ದರು. ಆದರೆ, ಹೊಸ ಪ್ರಸ್ತಾಪದ ಅನ್ವಯ ಸೆಸ್ ಅನ್ನು ಹೆಚ್ಚಿಸಿ ತೆರಿಗೆಯನ್ನು ಶೇ.30ರಿಂದ ಶೇ.35ಕ್ಕೆ ಏರಿಸುವ ಸಾಧ್ಯತೆ ಇದೆ.
ಈ ಮಸೂದೆ ಜಾರಿಗೆ ಬಂದರೆ ಅತಿ ಶ್ರೀಮಂತರ ಬೊಕ್ಕಸಕ್ಕೆ ಮತ್ತಷ್ಟು ಹೊರೆ ಬೀಳಲಿದೆ. ಆದರೆ ಈ ಶೇ.35ರ ಆದಾಯ ಮಿತಿಗೆ ಈ ಹಿಂದಿನಂತೆ 1ಕೋಟಿ ರೂ. ಆದಾಯದವರು ಬರುತ್ತಾರೆಯೇ ಅಥವಾ ಇದಕ್ಕೂ ಹೊಸ ಆದಾಯದ ಮಿತಿಯನ್ನು ಸರ್ಕಾರ ರಚಿಸುತ್ತದೆಯೇ ಎಂದು ಕಾದು ನೋಡಬೇಕು.
ಕನಿಷ್ಠ ಅದಾಯ ಮಿತಿ ಹೆಚ್ಚಳ : ಗುರುವಾರದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ 2 ಲಕ್ಷವಿರುದ ಕನಿಷ್ಠ ಆದಾಯದ ಮಿತಿಯನ್ನು 3 ಲಕ್ಷಗಳಿಗೆ ಹೆಚ್ಚಿಸುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. ನವದೆಹಲಿಯಲ್ಲಿ ನಡೆಯಲಿರುವ ಸಭೆಯಲ್ಲಿ ಆರ್ಥಿಕ ಕ್ಷೇತ್ರದ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಬಹುದಾಗಿದೆ.












Click it and Unblock the Notifications