ಸಂಸತ್ತಿಗೆ ಚಕ್ಕರ್:ರಾಜ್ಯದ ಎಂಪಿಗಳಲ್ಲಿ ಎಚ್ಡಿಕೆ ಅಗ್ರಗಣ್ಯ
ನವದೆಹಲಿ, ಆ 21: ರಾಜ್ಯದ ಮಂಡ್ಯ ಮತ್ತು ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಇಂದು (ಆ 21) ಲೋಕಸಭಾ ಉಪಚುನಾವಣೆ ನಡೆಯುತ್ತಿದೆ. ಅದಕ್ಕೆ ಕಾರಣೀಭೂತರು ಪ್ರಮುಖವಾಗಿ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ.
ಕ್ಷೇತ್ರದ ಜನತೆಯ ಆಶೀರ್ವಾದ ಪಡೆದು ಆಯ್ಕೆಯಾಗುವ ಜನಪ್ರತಿನಿಧಿಗಳು, ಕ್ಷೇತ್ರದ ಸಮಸ್ಯೆಯ ಬಗ್ಗೆ ತಲೆಕೆಡಿಸಿ ಕೊಳ್ಳದಿದ್ದರೆ ಹೇಗೆ ಎನ್ನುವುದು ಸಮಸ್ತ ಭಾರತೀಯರಿಗೆ ಕಾಡುವ ಪ್ರಶ್ನೆಯಾದರೂ ಅದು ಇನ್ನೂ ಬಗೆಹರಿಯದ ಸಮಸ್ಯೆಯಾಗಿಯೇ ಉಳಿದಿರುವುದು ವಿಪರ್ಯಾಸ.
ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿ, ವಿಧಾನಸಭೆಗೆ ಆಯ್ಕೆಯಾದ ಹಿನ್ನಲೆಯಲ್ಲಿ ತೆರವಾದ ಕ್ಷೇತ್ರಕ್ಕೆ ಇಂದು ಉಪಚುನಾವಣೆ ನಡೆಯುತ್ತಿದೆ. ಆದರೆ ಕುಮಾರಸ್ವಾಮಿ ಸಂಸದರಾಗಿದ್ದ ಅವಧಿಯಲ್ಲಿ ಲೋಕಸಭಾ ಕಲಾಪದಲ್ಲಿ ಅವರು ಭಾಗವಹಿಸಿದ ಹಾಜರಾತಿ ಎಷ್ಟು?
2009ರಿಂದ ರಾಜ್ಯದ ಒಟ್ಟು 28 ಲೋಕಸಭಾ ಕ್ಷೇತ್ರದಲ್ಲಿನ ಸಂಸದರ ಒಟ್ಟಾರೆ ಹಾಜರಾತಿ ಎಷ್ಟು ಎನ್ನುವುದರ ಬಗ್ಗೆ ದೆಹಲಿ ಮೂಲದ ಸಂಸ್ಥೆಯೊಂದು ನಡೆಸಿದ ಸರ್ವೇಯಲ್ಲಿ ಈ ಅಂಶ ಬಯಲಾಗಿದೆ.
ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಹಾಜರಾಗಲು 'ಹಾಜರಾತಿ' ಎಷ್ಟು ಮುಖ್ಯವೋ ಅದೇ ರೀತಿ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲು ಸಂಸದರಿಗೆ 'ಸಂಸತ್ ಕಲಾಪ'ದಲ್ಲಿ ಇಂತಿಷ್ಟು ಶೇಕಡಾವಾರು ಕಡ್ಡಾಯ ಹಾಜರಾತಿ ಇರಲೇ ಬೇಕೆಂದು ಕಾನೂನು ತಂದರೆ ಹೇಗೆ?
ರಾಜ್ಯದ ಪ್ರಮುಖ ಸಂಸದರ ಸಂಸತ್ತಿನ ಕಲಾಪದಲ್ಲಿನ ಒಟ್ಟಾರೆ ಹಾಜರಾತಿ ಎಷ್ಟು? ಸ್ಲೈಡಿನಲ್ಲಿ..

ಎಚ್ ಡಿ ಕುಮಾರಸ್ವಾಮಿ
ಕುಮಾರಸ್ವಾಮಿ ಸಂಸದರಾಗಿದ್ದ ಅವಧಿಯಲ್ಲಿ ಲೋಕಸಭಾ ಕಲಾಪದಲ್ಲಿ ಅವರು ಭಾಗವಹಿಸಿದ ಹಾಜರಾತಿ ಶೇ. 32 (2009ರಿಂದ). ವಿಧಾನಸಭಾ ಚುನಾವಣೆ ನಡೆಯುತ್ತಿದ್ದ ಹಿನ್ನಲೆಯಲ್ಲಿ ಪಕ್ಷ ಬಲವರ್ಧನೆಗೆ ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದ ಹಿನ್ನಲೆಯಲ್ಲಿ ಲೋಕಸಭೆ ಹಾಜರಾಗಲಿಲ್ಲ ಎನ್ನುವುದು ಇವರು ಕೊಡಬಹುದಾದ ಸಬೂಬು. ಆದರೆ ಸಂಸದರಿಗಾಗಿ ನೀಡುವ MPLAD funds ಅನ್ನು ಇವರು ಅತಿ ಹೆಚ್ಚು ಬಳಸಿಕೊಂಡಿದ್ದಾರೆ.

ಎಚ್ಡಿಕೆ ನಂತರ ಯಾರು?
ಕುಮಾರಸ್ವಾಮಿ ನಂತರದ ಸರದಿ ಅವರದೇ ಪಕ್ಷದ ಚೆಲುವರಾಯ ಸ್ವಾಮಿ (ಸಂಸದರಾಗಿದ್ದ ಅವಧಿಯಲ್ಲಿ), ಅವರ ಹಾಜರಾತಿ ಬರೋಬ್ಬರಿ ಶೇ. 50. ಅದಾದ ನಂತರ ಯಡಿಯೂರಪ್ಪ ಅವರ ಪುತ್ರ ಸದ್ಯ ಬಿಜೆಪಿ ಸಂಸದರಾಗಿಯೇ ಉಳಿದು ಕೊಂಡಿರುವ ಶಿವಮೊಗ್ಗ ಕ್ಷೇತ್ರದ ಬಿ ವೈ ರಾಘವೇಂದ್ರ. ಇವರ ಹಾಜರಾತಿ ಶೇ. 52.

ದೇವೇಗೌಡ ಮತ್ತು ಅನಂತ ಕುಮಾರ್
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ಅನಂತ ಕುಮಾರ್ ಅವರ ಹಾಜರಾತಿ ಶೇ.85. ಜೆಡಿಎಸ್ ಅಧ್ಯಕ್ಷ ಮತ್ತು ಹಾಸನ ಸಂಸದ ಎಚ್ ಡಿ ದೇವೇಗೌಡ ಅವರ ಹಾಜರಾತಿ ಶೇ. 63.

ಅತಿಹೆಚ್ಚು ಹಾಜರಾತಿ ಯಾರದ್ದು?
ರಾಜ್ಯದ ಸಂಸದರಲ್ಲಿ ಅತಿಹೆಚ್ಚು ಲೋಕಸಭಾ ಅಧಿವೇಶನದ ಕಲಾಪದಲ್ಲಿ ಭಾಗವಹಿಸಿದ ಕೀರ್ತಿ ಹಾವೇರಿಯ ಬಿಜೆಪಿ ಸಂಸದ ಶಿವಕುಮಾರ್ ಉದಾಸಿ ಅವರಿಗೆ ಹೋಗುತ್ತದೆ. ಅವರು ಹಾಜರಾತಿ ಒಟ್ಟಾರೆ ಶೇ. 87. ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಸದ ಜಯಪ್ರಕಾಶ್ ಹೆಗ್ಡೆ ಅವರ ಹಾಜರಾತಿ ಶೇ. 75.

ರಾಜ್ಯದ ಕೇಂದ್ರ ಸಚಿವರು
ಮಲ್ಲಿಕಾರ್ಜುನ ಖರ್ಗೆ, ಕೆ ಎಚ್ ಮುನಿಯಪ್ಪ ಮತ್ತು ವೀರಪ್ಪ ಮೊಯ್ಲಿ ಕೇಂದ್ರದಲ್ಲಿ ಸಚಿವರಾಗಿದ್ದಾರೆ. ಹಾಗಾಗಿ ಕಲಾಪದಲ್ಲಿ ಮತ್ತು ಪ್ರಶ್ನೋತ್ತರ ವೇಳೆಯಲ್ಲಿ ಅವರುಗಳು ಭಾಗವಹಿಸಲೇ ಬೇಕಾಗುತ್ತದೆ. ಇನ್ನು ಬಿಜೆಪಿ ಸಂಸದರಾದ ಡಿ ಬಿ ಚಂದ್ರೇಗೌಡ ಮತ್ತು ಪಿ ಸಿ ಮೋಹನ್ ಅವರ ಹಾಜರಾತಿ ಕ್ರಮವಾಗಿ ಶೇ. 59 ಮತ್ತು ಶೇ.69.












Click it and Unblock the Notifications