ಸಿರಿಯಾ: ವಿಷಾನಿಲ ಪ್ರಯೋಗಕ್ಕೆ 200 ಜನ ಬಲಿ
ಅಮ್ಮಾನ್ ,ಆ.21: ಬಂಡುಕೋರರನ್ನು ತಡೆಗಟ್ಟಲು ಇಲ್ಲಿನ ಬಷರ್ ಅಲ್ ಅಸಾದ್ ಸರ್ಕಾರ ಅತ್ಯಂತ ಕ್ರೂರ ಮಟ್ಟದ ಪ್ರಯೋಗಕ್ಕೆ ಮುಂದಾಗಿದ್ದು ವಿಷಾನಿಲ ಪ್ರಯೋಗಿಸಿ ಪ್ರತಿಭಟನಾಕಾರರನ್ನು ಕೊಲ್ಲುತ್ತಿದೆ ಎಂದು ಎಎಫ್ ಪಿ ವರದಿ ಮಾಡಿದೆ. ಸಾವಿನ ಸಂಖ್ಯೆ 200 ದಾಟುತ್ತಿದ್ದು, ರಷ್ಯಾ ಹಾಗೂ ಅಮೆರಿಕ ನಡುವೆ ಮತ್ತೊಮ್ಮೆ ಕಾವು ಹೆಚ್ಚಿಸಿದೆ.
ಪ್ರತಿಭನಾನಿರತ ಗುಂಪಿನ ಮೇಲೆ ಮಾರಣಾಂತಿಕ ವಿಷಾನಿಲ ನರ್ವ್ ಗ್ಯಾಸ್' ಪ್ರಯೋಗಿಸುತ್ತಿದ್ದು, 200ಕ್ಕೂ ಹೆಚ್ಚು ಮಂದಿ ಅಸುನೀಗಿದ್ದಾರೆ ಎಂದು ಪ್ರತಿಭನಾಕಾರರು ಆರೋಪಿಸಿದ್ದಾರೆ. ಗೌಟಾ ಪ್ರದೇಶದ ಏನ್ ತರ್ಮಾ, ಜಮಲ್ಕಾ ಮತ್ತು ಜೋಬರ್ ಗಳಲ್ಲಿ ವಿಷಾನಿಲ ಪ್ರಯೋಗ ವಿಪರೀತವಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಂಭವವಿದೆ. ಡೌಮಾ ಪ್ರದೇಶದ ನರ್ಸ್ ಬಾಯನ್ ಬೆಕರ್ ಅವರು ಹೇಳಿಕೆ ನೀಡಿ ಸಾವಿನ ಸಂಖ್ಯೆ 213 ದಾಟಿದೆ ಎಂದಿದ್ದಾರೆ.
ಇದೇ ದಾಖಲೆಯನ್ನು ಈ ಪ್ರದೇಶದ ವೈದ್ಯರೊಬ್ಬರು ದೃಢಪಡಿಸಿದ್ದು, ಅಧಿಕ ಪ್ರಮಾಣದ ಮಹಿಳೆಯರು ಮತ್ತು ಮಕ್ಕಳು ಅಸ್ವಸ್ಥರಾಗಿ ಇಲ್ಲಿಗೆ ಚಿಕಿತ್ಸೆಗೆ ಬರುತ್ತಿದ್ದಾರೆ. ಅವರಲ್ಲಿ ಬಹುತೇಕ ಮಂದಿಗೆ ಕಣ್ಣು ಮಂಜಾಗಿರುತ್ತದೆ, ಬಾಯಲ್ಲಿ ನೊರೆ ಉಕ್ಕುತ್ತಿರುತ್ತದೆ, ಕೈಕಾಲು ತಣ್ಣಗಾಗಿರುತ್ತವೆ. ಇವೆಲ್ಲವೂ ನರ್ವ್ ಗ್ಯಾಸ್(ವಿಷಾನಿಲ) ನಿಂದ ಉಂಟಾಗುವ ಲಕ್ಷಣಗಳು ಎಂದು ಸ್ಪಷ್ಟಪಡಿಸಿದ್ದಾರೆ.

ಏನಿದು ನರ್ವ್ ಗ್ಯಾಸ್(ವಿಷಾನಿಲ)?: ನರ್ವ್ ಗ್ಯಾಸ್ ಒಂದು ರೀತಿಯ ಕೀಟನಾಶಕ. ಈ ಅನಿಲ ಉಸಿರಾಟದ ಮೂಲಕ ಅಧಿಕ ಪ್ರಮಾಣದಲ್ಲಿ ದೇಹ ಸೇರಿದರೆ, ಮೂಗು ಸೋರುವಿಕೆ, ಕಣ್ಣು ಮಂಜಾಗುವುದು, ಕೆಮ್ಮು, ಎದೆತುಂಬುವುದು, ಉಸಿರಾಟದ ತೊಂದರೆ ಉಂಟಾಗುತ್ತೆ. ತಲೆನೋವು, ಹೊಟ್ಟೆನೋವು, ವಾಂತಿಯಿಂದ ಇಡೀ ದೇಹವನ್ನು ಕೃಶವಾಗಿಸಿಬಿಡುತ್ತೆ. ಅಂತಿಮವಾಗಿ ವ್ಯಕ್ತಿ ಅತಿಯಾದ ಆಯಾಸದಿಂದ ಸಾವಿಗೀಡಾಗುತ್ತಾನೆ.
ಸಿರಿಯಾ ಸರ್ಕಾರ ಹೇಳಿಕೆ: ಆದರೆ, ಸಿರಿಯಾ ಸರ್ಕಾರ ಮಾತ್ರ ವಿಷಾನಿಲ ಪ್ರಯೋಗಿಸಿದ ಆರೋಪವನ್ನ ತಳ್ಳಿಹಾಕಿದೆ. 2 ವರ್ಷಗಳ ಬಂಡುಕೋರರ ಜೊತೆಗಿನ ಸಂಘರ್ಷದಲ್ಲಿ ನಾವು ಒಮ್ಮೆಯೂ ಆ ರೀತಿಯ ಕುಕೃತ್ಯಕ್ಕೆ ಕೈ ಹಾಕಿಲ್ಲ ಎಂದು ಸ್ಪಷ್ಟನೆ ನೀಡಿದೆ.
ರಷ್ಯಾ ಸಿರಿಯಾಕ್ಕೆ ಈ ಹಿಂದೆ ಶಸ್ತ್ರಗಳನ್ನು ಮಾರಾಟ ಮಾಡಿರುವುದೇ ಅಲ್ಲದೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಯಲ್ಲಿ ಅಸಾದ್ ವಿರುದ್ಧದ ನಿರ್ಣಯಗಳಿಗೆ ವೀಟೊ ಚಲಾಯಿಸಿತ್ತು.
ಅಸಾದ್ ರ ಪಡೆಗಳು ಬಂಡುಕೋರರ ವಿರುದ್ಧ 'ನರ್ವ್ ಗ್ಯಾಸ್' ಬಳಸಿವೆ ಎಂಬುದನ್ನು ತೋರಿಸುವ ಅಮೆರಿಕದ ಪುರಾವೆಯನ್ನು ರಷ್ಯಾ ತಳ್ಳಿಹಾಕಿದೆ. ನರ್ವ್ ಗ್ಯಾಸ್ ಪ್ರಯೋಗದ ಬಗ್ಗೆ ವಿಶ್ವಸಂಸ್ಥೆಯ ತಂಡ ಈ ಬಗ್ಗೆ ತನಿಖೆ ಕೈಗೊಂಡಿದೆ.












Click it and Unblock the Notifications