ಆಸ್ಟೇಲಿಯಾ ಚುನಾವಣೆಯಲ್ಲಿ ಶಿಲ್ಪಾ ಹೆಗಡೆ ಕಣಕ್ಕೆ

ಸುಮಾರು 50ಕ್ಕೂ ಅಧಿಕ ಪಕ್ಷಗಳು ಸಂಸದೀಯ ಚುನಾವಣೆ ಕಣದಲ್ಲಿದ್ದು, ಪ್ರಮುಖ ಪಕ್ಷಗಳಲ್ಲಿ ಭಾರತೀಯ ಸಂಜಾತರಿಗೆ ಟಿಕೆಟ್ ನೀಡಿರುವುದು ವಿಶೇಷ.
ಲಿಬರಲ್ ಪಾರ್ಟಿಯ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಶಿಲ್ಪಾ ಕಳೆದ ಒಂದು ದಶಕದಿಂದ ರಾಜಕೀಯದಲ್ಲಿ ಸಕ್ರಿಯವಾಗಿದ್ದಾರೆ. ಶಿಲ್ಪಾ ಹೆಗ್ಡೆ ಅವರು ವಿಲ್ಸ್ ಕ್ಷೇತ್ರದಲ್ಲಿ ಚುನಾವಣಾ ಕಣದಲ್ಲಿದ್ದಾರೆ. ಶಿಲ್ಪಾ ಹೆಗ್ಡೆಯವರ ಪತಿ ದಯಾನಂದ ಶೆಟ್ಟಿ ಕೂಡ ಲಿಬರಲ್ ಪಾರ್ಟಿಯ ಕಾರ್ಯಕರ್ತರಾಗಿದ್ದಾರೆ. ಪತ್ನಿಯ ಪರವಾಗಿ ಪತಿ ಸಕ್ರಿಯವಾಗಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ
ಸೆಪ್ಟಂಬರ್ 7ರಂದು ಚುನಾವಣೆ ನಡೆಯಲಿದೆ. ಚುನಾವಣಾಪೂರ್ವ ಸಮೀಕ್ಷೆಗಳ ಪ್ರಕಾರ, ವಿಲ್ಸ್ ಕ್ಷೇತ್ರದಲ್ಲಿ ಶಿಲ್ಪಾ ಹೆಗ್ಡೆಯವರೇ ಗೆಲ್ಲುವ ಸಾಧ್ಯತೆ ಇದೆ ಎನ್ನಲಾಗಿದೆ. ಕ್ಷೇತ್ರದಲ್ಲಿರುವ 1.2 ಲಕ್ಷ ಮತದಾರರಲ್ಲಿ ಅರ್ಧಕ್ಕಿಂತ ಹೆಚ್ಚು ಮಂದಿ ಶಿಲ್ಪಾ ಬಗ್ಗೆ ಮತ ಹಾಕಲು ಸಿದ್ಧ ಎಂದಿದ್ದಾರಂತೆ.
ವಿಕ್ಟೋರಿಯಾ ರಾಜ್ಯದಲ್ಲಿರುವ ವಿಲ್ಸ್ ಕ್ಷೇತ್ರದಲ್ಲಿ ಲೇಬರ್ ಪಕ್ಷದ ಪ್ರಾಬಲ್ಯ ಹೆಚ್ಚಿದೆಯಾದರೂ ಈ ಬಾರಿ ಲಿಬರಲ್ ಪಾರ್ಟಿಯ ಶಿಲ್ಪಾ ಹೆಗ್ಡೆ ಅನಿರೀಕ್ಷಿತ ಗೆಲುವು ಸಾಧಿಸಲಿದ್ದಾರೆ. ಹಾಗೇನಾದರೂ ನಿಜವಾದಲ್ಲಿ ಶಿಲ್ಪಾ ಹೆಗ್ಡೆ ಈ ವಿಲ್ಸ್ ಕ್ಷೇತ್ರದಲ್ಲಿ ಗೆದ್ದ ಮೊದಲ ಲಿಬರಲ್ ಅಭ್ಯರ್ಥಿ ಎಂದು ಹೊಸ ಇತಿಹಾಸ ಬರೆಯಲಿದ್ದಾರೆ.
ಶಿಲ್ಪಾ ಬಗ್ಗೆ ಒಂದಿಷ್ಟು: ನಿಟ್ಟೆಯಲ್ಲಿ ಎಂಜಿನಿಯರಿಂಗ್ ಪದವಿ ಪಡೆದ ಶಿಲ್ಪಾ, 2001ರಲ್ಲಿ ಆಸ್ಟ್ರೇಲಿಯಾಗೆ ವಲಸೆ ಹೋದರು. ಡಿಡಬ್ಲ್ಯೂಎಸ್ ಕಂಪನಿಯಲ್ಲಿ ಐಟಿ ಕನ್ಸಲ್ಟೆಂಟ್ ಆಗಿ ಕೆಲಸ ಮಾಡುತ್ತಿರುವ ಶಿಲ್ಪಾಗೆ ಇಬ್ಬರು ಗಂಡು ಮಕ್ಕಳಿದ್ದಾರೆ. [ ಹೆಚ್ಚಿನ ಮಾಹಿತಿಗೆ ಕ್ಲಿಕ್ ಮಾಡಿ]
ಇತ್ತ, ಉಡುಪಿಯ ಪೆರ್ಡೂರಿನಲ್ಲಿ ವಾಸಿಸುತ್ತಿರುವ ಶಿಲ್ಪಾ ತಂದೆ-ತಾಯಿ ಮತ್ತು ಕುಟುಂಬವರ್ಗದವರು ಮಗಳ ಸಾಹಸವನ್ನ ಮೆಚ್ಚಿಕೊಂಡಿದ್ದು, ಗೆಲುವಿಗಾಗಿ ಶುಭ ಹಾರೈಸುತ್ತಿದ್ದಾರೆ.
ಇದರ ಜೊತೆಗೆ ಲೇಬರ್ ಪಕ್ಷದಿಂದ ವಿಕ್ಟೋರಿಯಾದ Menzies ಸೀಟಿಗಾಗಿ ಮನೋಜ್ ಕುಮಾರ್ ಸ್ಪರ್ಧಿಸಿದ್ದಾರೆ. ವಿವಾದಿತ ಮಾಜಿ ವಲಸೆ ಸಚಿವ ಕೆವಿನ್ ಆಂಡ್ರ್ಯೂಸ್ ವಿರುದ್ಧ ಸೆಣಸುತ್ತಿದ್ದಾರೆ. ಬೆಂಗಳೂರಿನ ವೈದ್ಯ ಮಹಮ್ಮದ್ ಹನೀಫ್ ವೀಸಾ ರದ್ದು ಮಾಡಿದ್ದು ಇದೇ ಕೆವಿನ್ ಎಂಬುದನ್ನು ಇಲ್ಲಿ ಸ್ಮರಿಸಬಹುದು.
ಲಿಬರಲ್ ಪಾರ್ಟಿಯಿಂದ ಶಿಲ್ಪಾ ಹೆಗಡೆ ಜತೆಗೆ ಜಗ್ ಛುಗಾ ಅವರು ಸ್ಕುಲ್ಲಿನ್ ಕ್ಷೇತ್ರದಿಂದ ಸ್ಪರ್ಧೆಗಿಳಿದಿದ್ದಾರೆ. ಕ್ಲೈವ್ ಪಾಮರ್ ಅವರ ಪಾಮರ್ ಯುನೈಟೆಡ್ ಪಾರ್ಟಿ ಕೂಡಾ ಕೆಲವು ಭಾರತೀಯ ಸಂಜಾತರನ್ನು ಕಣಕ್ಕಿಳಿಸುತ್ತಿದೆ.
PUP ನಿಂದ ವಶೀಲ್ ಶರ್ಮ ಹಾಗೂ ವಿಮಲ್ ಶರ್ಮ ಅವರು ಕಣದಲ್ಲಿದ್ದಾರೆ, ಅವತಾರ್ ಗಿಲ್ ಅವರು ವಿಕ್ಟೋರಿಯಾದ ಐಸಾಕ್ ಕ್ಶೇತ್ರದಲ್ಲಿ ಸ್ಪರ್ಧಿಸಿದ್ದಾರೆ, ವಿಕ್ಟೋರಿಯಾ ಬ್ಯಾಟ್ ಮನ್ ಕ್ಷೇತ್ರದಿಂದ ಬಿಲ್ ಗುಪ್ತಾ ಅವರು 21st ಸೆಂಚುರಿ ಪಕ್ಷದ ಟಿಕೆಟ್ ಪಡೆದಿದ್ದಾರೆ.
ವಿಕಿಲೀಕ್ಸ್ ಕೂಡಾ ಕಣಕ್ಕೆ: ಭಾರತೀಯ ಮೂಲದ ಬಿನಾಯ್ ಕಾಂಪಮಾರ್ಕ್ ಹಾಗೂ ಸುರೇಶ್ ರಾಜನ್ ಅವರು ವಿಕಿಲೀಕ್ಸ್ ಪಾರ್ಟಿ ಕಣಕ್ಕಿಳಿಸಿರುವ 7 ಜನರಲ್ಲಿ 2 ಭಾರತೀಯ ಅಭ್ಯರ್ಥಿಗಳಾಗಿದ್ದಾರೆ. ಒಟ್ಟಾರೆ ಸುಮಾರು 450,000 ಭಾರತೀಯ ಮೂಲದವರನ್ನು ಆಸ್ಟ್ರೇಲಿಯಾ ಹೊಂದಿದೆ.












Click it and Unblock the Notifications