ಬೆಂಗಳೂರಿನಲ್ಲಿ ಆಸ್ತಿ ಖರೀದಿ ಮತ್ತಷ್ಟು ದುಬಾರಿ

ಸೋಮವಾರ ರಾಜ್ಯ ಸರ್ಕಾರ ಸ್ಥಿರಾಸ್ತಿ ಮಾರ್ಗಸೂಚಿ ಅಧಿಸೂಚನೆ ಹೊರಡಿಸಿದೆ. ಪರಿಷ್ಕರಿಸಿದ ಮಾರ್ಗಸೂಚಿ ಅನ್ವಯ ಸ್ಥಿರಾಸ್ತಿ ಬೆಲೆ ಸರಾಸರಿ ಶೇ 40ರಷ್ಟು ಏರಿಕೆಯಾಗಿದೆ. ಆಯಾ ಪ್ರದೇಶದ ವಸ್ತು ಸ್ಥಿತಿಗೆ ಅನುಗುಣವಾಗಿ ದರವೂ ವ್ಯತ್ಯಾಸವಾಗಲಿದೆ.
ಜುಲೈನಲ್ಲಿ ನೋಂದಣಿ ಮಹಾಪರಿವೀಕ್ಷಕರು ಬೆಂಗಳೂರಿನ ಸ್ಥಿರಾಸ್ತಿ ದರವನ್ನು ಪರಿಷ್ಕರಿಸಿ ಮಾರ್ಗಸೂಚಿ ಹೊರಡಿಸಿದ್ದರು. ಸಾರ್ವಜನಿಕರಿಗೆ ಆಕ್ಷೇಪಣೆ ಸಲ್ಲಿಸಲು 15 ದಿನಗಳ ಅವಕಾಶ ನೀಡಿದ್ದರು. ಸದ್ಯ ಆಕ್ಷೇಪಣೆಗಳನ್ನು ಬಗೆಹರಿಸಿ, ಅಂತಿಮ ಮಾರ್ಗಸೂಚಿಯನ್ನು ಪ್ರಕಟಿಸಲಾಗಿದೆ.
ಆ.8ರಂದು ಸ್ಥಿರಾಸ್ತಿ ದರ ಹೆಚ್ಚಳವನ್ನು ಗೆಜೆಟ್ ನಲ್ಲಿ ಪ್ರಕಟಿಸಲಾಗಿತ್ತು. ಆ.12ರಂದು ಅಂತಿಮ ಅಧಿಸೂಚನೆ ಹೊರಬಿದ್ದಿದ್ದು, ಸೋಮವಾರದಿಂದ ನೂತನ ದರ ಜಾರಿಗೆ ಬಂದಿದೆ ಎಂದು ನೋಂದಣಿ ಮಹಾಪರಿವೀಕ್ಷಕ ಹಾಗೂ ಮುಂದ್ರಾಂಕ ಇಲಾಖೆ ಆಯುಕ್ತರಾದ ಸಯ್ಯದ್ ಸಲೀಂ ಹೇಳಿದ್ದಾರೆ.
ಸ್ಥಿರಾಸ್ತಿಯ ಹಾಲಿ ಮಾರುಕಟ್ಟೆ ದರ, ಆ ಪ್ರದೇಶದ ವಾಣಿಜ್ಯ ಚಟುವಟಿಕೆಗಳು, ಕೈಗಾರಿಕಾ ಬೆಳವಣಿಗೆ, ಭವಿಷ್ಯದ ಪ್ರಗತಿ ಮುಂತಾದ ಅಂಶಗಳನ್ನು ಗಮನಿಸಿ ದರ ಪರಿಷ್ಕರಣೆ ಮಾಡಲಾಗಿದೆ. ಕೆಲ ಪ್ರದೇಶಗಳಲ್ಲಿ ಶೇ 10 ರಷ್ಟು ಏರಿಕೆಯಾಗಿದ್ದರೆ, ಹಲವು ಪ್ರದೇಶಗಳಲ್ಲಿ ಶೇ 40, 60, 80 ರಷ್ಟು ದರ ಏರಿಕೆಯನ್ನು ನೂತನ ಮಾರ್ಗಸೂಚಿಯಲ್ಲಿ ಪ್ರಕಟಿಸಲಾಗಿದೆ.
840 ಕೋಟಿ ಆದಾಯ : ರಾಜ್ಯಾದ್ಯಂತ ಸ್ಥಿರಾಸ್ತಿ ದರ ಪರಿಷ್ಕರಣೆಯಿಂದ ಸರ್ಕಾರಕ್ಕೆ 840 ಕೋಟಿ ರೂ.ಆದಾಯ ಬರಬಹುದು ಎಂದು ನಿರೀಕ್ಷಿಸಲಾಗಿದೆ. ಇದರಲ್ಲಿ ಬೆಂಗಳೂರಿನಿಂದಲೇ 500ರಿಂದ 600 ಕೋಟಿ ಆದಾಯ ನಿರೀಕ್ಷಿಸಲಾಗಿದೆ.
ಸ್ಥಿರಾಸ್ತಿ ಮಾರುಕಟ್ಟೆ ಮೌಲ್ಯ ಪರಿಷ್ಕರಣೆ ಆದಾಗ ಮುದ್ರಾಂಕ ಮತ್ತು ನೋಂದಣಿ ಶುಲ್ಕಗಳು ಹೆಚ್ಚಾಗಲಿವೆ. ಆದ್ದರಿಂದ ಸರ್ಕಾರಕ್ಕೆ ಹೆಚ್ಚಿನ ಆದಾಯ ಬರುವುದು ನಿಶ್ಚಿತವಾಗಿದೆ. (ಬೆಂಗಳೂರಿನ ಸ್ಥಿರಾಸ್ತಿ ದರ ಮತ್ತಷ್ಟು ಹೆಚ್ಚಳ )
ನೋಂದಣಿಗೆ ದಂಡು : ಬೆಂಗಳೂರಿನ ಸ್ಥಿರಾಸ್ತಿ ದರ ಹೆಚ್ಚಳವಾಗುತ್ತದೆ ಎಂಬ ಮಾಹಿತಿ ತಿಳಿದ ಬಿಲ್ಡರ್ ಗಳು ಆ.6 ಮತ್ತು 7ರಂದು ನೋಂದಣಿ ಕಚೇರಿಗಳ ಮುಂದೆ ಸಾಲುಗಟ್ಟಿ ನಿಂತಿದ್ದರು. ಕಳೆದ ನಾಲ್ಕು ತಿಂಗಳ ಅವಧಿಯಲ್ಲಿ ಸರ್ಕಾರ 1,200ಕೋಟಿ ರೂ. ಆದಾಯವನ್ನು ನೋಂದಣಿಯಿಂದ ಪಡೆದಿದೆ.
ಪ್ರತಿ ವರ್ಷಕ್ಕೊಮ್ಮೆ ಸ್ಥಿರಾಸ್ತಿ ಮಾರ್ಗಸೂಚಿ ಬೆಲೆ ಪರಿಷ್ಕರಣೆ ಮಾಡಬೇಕು ಎಂಬ ನಿಯಮವಿದೆ. ಆದರೆ, ರಾಜ್ಯ ನೋಂದಣಿ ಇಲಾಖೆ 2012ರಲ್ಲಿ ಬೆಂಗಳೂರಿನ ಸ್ಥಿರಾಸ್ತಿ ಬೆಲೆಯನ್ನು ಪರಿಷ್ಕರಣೆ ಮಾಡಿರಲಿಲ್ಲ. ಆದ್ದರಿಂದ ಈ ಬಾರಿ ದರ ಸ್ಪಲ್ಪ ಹೆಚ್ಚಳವಾಗಿದೆ.
(67ನೇ ಸ್ವಾತಂತ್ರ್ಯ ದಿನಾಚರಣೆ : ಈ ಪುಟ ನಿಮ್ಮ ಸ್ನೇಹಿತರಿಗೆ ಕಳಿಸಿ)












Click it and Unblock the Notifications