ಬೀಡಾ ತಿನ್ನಲು ಹೋಗಿ 7 ಲಕ್ಷ ಕಳೆದುಕೊಂಡರು!

ಕಮರ್ಷಿಯಲ್ ಸ್ಟ್ರೀಟ್ ನಲ್ಲಿ ವಿದೇಶಿ ಹಣ ವಿನಿಮಯ ಕಚೇರಿ ನಡೆಸುತ್ತಿರುವ ಅತಿಕ್ ಅಹಮದ್ ಎಂಬ ವ್ಯಕ್ತಿ ಪಾನ್ ಬೀಡಾ ತಿನ್ನಲು ಹೋಗಿ ಹಣ ಕಳೆದುಕೊಂಡವರು. ಮಂಗಳವಾರ 12 ಗಂಟೆ ವೇಳೆಗೆ ಅಹಮದ್ ಅಂಗಡಿಗೆ ಹೊರಟಿದ್ದರು. ಮಾರ್ಗ ಮಧ್ಯದಲ್ಲಿ ಅವರಿಗೆ ಪಾನ್ ಬೀಡಾ ತಿನ್ನುವ ಆಸೆಯಾಗಿದೆ.
ಪುಲಿಕೇಶಿ ನಗರದ ಕಮಲಾ ಹೋಟೆಲ್ ಬಳಿ ತಮ್ಮ ಹೊಂಡಾ ಆಕ್ಟಿವಾ ಬೈಕ್ ನಿಲ್ಲಿಸಿದ ಅವರು ಸ್ವಲ್ಪ ದೂರದಲ್ಲಿದ್ದ ಪಾನ್ ಅಂಗಡಿಗೆ ತೆರಳಿದ್ದಾರೆ. ಪಾನ್ ಜಗಿಯುತ್ತಾ, ಐದು ನಿಮಿಷ ಬಿಟ್ಟು ಅವರು ಮರಳಿದಾಗ ಬೈಕ್ ನಲ್ಲಿದ್ದ ಬ್ಯಾಗ್ ಕಾಣೆಯಾಗಿತ್ತು. ಇದರಿಂದ ಆತಂಕಗೊಂಡ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ಬ್ಯಾಗ್ ನಲ್ಲಿ 7 ಲಕ್ಷ 15 ಸಾವಿರ ನಗದು, 2 ಲಕ್ಷ ಮೌಲ್ಯದ ಡಾಲರ್, ಯುರೋ ಇನ್ನಿತರ ವಿದೇಶಿ ಕರೆನ್ಸಿ, ಚೆಕ್ ಬುಕ್ ಮುಂತಾದವ ವಸ್ತುಗಳಿದ್ದವು ಎಂದು ಅತಿಕ್ ಅಹಮದ್ ಪುಲಿಕೇಶಿ ನಗರ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಅಹಮದ್ ಅವರನ್ನು ಹಿಂಬಾಲಿಸಿದ ಗುಂಪು ಈ ಕೃತ್ಯ ಎಸಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
(67ನೇ ಸ್ವಾತಂತ್ರ್ಯ ದಿನಾಚರಣೆ : ಈ ಪುಟ ನಿಮ್ಮ ಸ್ನೇಹಿತರಿಗೆ ಕಳಿಸಿ)












Click it and Unblock the Notifications