ನಿಡ್ಡೋಡಿ ವಿದ್ಯುತ್ ಸ್ಥಾವರದ ದುಷ್ಪರಿಣಾಮ:ಸಂದರ್ಶನ
ದಕ್ಷಿಣ ಕನ್ನಡ ಜಿಲ್ಲೆ ನಿಡ್ಡೋಡಿಯಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿರುವ ಉಷ್ಣ ವಿದ್ಯುತ್ ಸ್ಥಾವರದ ವಿರುದ್ದದ ಪ್ರತಿಭಟನೆಯ ಕಾವು ದಿನದಿಂದ ದಿನಕ್ಕೆ ಏರುತ್ತಾ ಇದೆ. ಈ ಭಾಗದ ಜನರ ಹಿತಾಸಕ್ತಿಯ ವಿರುದ್ದ ಯಾವುದೇ ಪಕ್ಷಗಳು ಆಟವಾಡಲು ಬಹಿರಂಗವಾಗಿ ಸಿದ್ದವಿಲ್ಲದಿದ್ದರೂ ಪ್ರಮುಖ ಪಕ್ಷಗಳಿಂದ ಪ್ರತಿಭಟನೆಗೆ ಸೂಕ್ತ ರೀತಿಯಲ್ಲಿ ಸಹಕಾರ ಸಿಗುತ್ತಿಲ್ಲ ಎನ್ನುವುದು ಸ್ಥಳೀಯರ ನೋವಿನ ಮಾತು.
ಸಾರ್ವಜನಿಕ ಹಿತಾಸಕ್ತಿಯ ಪ್ರತಿಭಟನೆಯಲ್ಲೂ ರಾಜಕೀಯ ಲಾಭ ಪಡೆದುಕೊಳ್ಳುವುದು ಪಕ್ಷಗಳ ಒಂದಂಕಿ ಕಾರ್ಯಕ್ರಮದಂತಾಗಿರುವುದರಿಂದ ಈ ಹೋರಾಟಕ್ಕೆ ಸ್ಥಳೀಯರು ರಾಜಕೀಯ ನಾಯಕರುಗಳನ್ನು ಹೆಚ್ಚಾಗಿ ಅವಲಂಬಿತವಾಗಿಲ್ಲ.
ನಿಡ್ಡೋಡಿ ಉಷ್ಣ ವಿದ್ಯುತ ಸ್ಥಾವರ ಸ್ಥಾಪನೆ ವಿರುದ್ದ ಮಾತೃಭೂಮಿ ಸಂಘಟನೆಯ ಸಕ್ರಿಯ ಸದಸ್ಯರೂ ಮತ್ತು ಕಟೀಲು ಫಸ್ಟ್ ಗ್ರೇಡ್ ಕಾಲೇಜಿನ ಉಪನ್ಯಾಸಕರೂ ಆಗಿರುವ ಸೋಂದ ಭಾಸ್ಕರ್ ಭಟ್ ಅವರ ಜೊತೆ ನಡೆಸಿದ ಸಂದರ್ಶನ ಆಯ್ದ ಭಾಗ ಇಲ್ಲಿದೆ.
ಪ್ರ: ನಿಡ್ಡೋಡಿ ಉಷ್ಣ ವಿದ್ಯುತ ಸ್ಥಾವರ ಯಾವ ಪ್ರದೇಶದಲ್ಲಿ ಸ್ಥಾಪಿಸಲಾಗುತ್ತಿದೆ?
ಭಟ್: ಇದು ಕಟೀಲು ದೇವಳದಿಂದ ಪಶ್ಚಿಮಕ್ಕೆ ಮೂರುವರೆ ಕಿಲೋಮೀಟರ್ ದೂರದಲ್ಲಿ, ಕಟೀಲು -ಕಿನ್ನಿಗೋಳಿ-ಮೂಡಬಿದರೆ ಮಾರ್ಗದಲ್ಲಿದೆ.

ಪ್ರ: ಇದು ಎಷ್ಟು ಎಕರೆ ಪ್ರದೇಶದಲ್ಲಿ ವ್ಯಾಪಿಸಲಿದೆ?
ಭಟ್: ಇದು 4000 ಮೆಗಾವ್ಯಾಟ್ ವಿದ್ಯುತ್ ಸ್ಥಾವರ. ನಮ್ಮ ಅಂದಾಜಿನ ಪ್ರಕಾರ ಸುಮಾರು 4000 ಎಕರೆ ನೀರಾವರಿ ಭೂಮಿಯಲ್ಲಿ ಸ್ಥಾಪಿತವಾಗಲಿದೆ. ವಿದ್ಯುತ್ ಸ್ಥಾವರದ ಹತ್ತು ಕಿಲೋಮೀಟರ್ ವ್ಯಾಪ್ತಿಯಲ್ಲಿ ವಸತಿ ವ್ಯವಸ್ಥೆ ಮಾಡಲು ನಕ್ಷೆ ರೂಪಿಸಲಾಗುತ್ತಿದೆ.
ಪ್ರ: ಈ ಸ್ಥಾವರಕ್ಕೆ ಭೂವಿಜ್ಞಾನ ಇಲಾಖೆಯ ಅನುಮತಿ ಲಭಿಸಿದೆಯೇ?
ಭಟ್: ಯಾರಿಗೂ ಈ ಬಗ್ಗೆ ಸರಿಯಾದ ಮಾಹಿತಿಯಿಲ್ಲ. ಸ್ಥಳೀಯ ರಾಜಕೀಯ ಮುಖಂಡರನ್ನು ಸಂಪರ್ಕಿಸಿದರೆ ಅವರಿಂದಲೂ ಅದೇ ಉತ್ತರ ಸಿಗುತ್ತಿದೆ. ರಾಜ್ಯ ಮತ್ತು ಕೇಂದ್ರ ಸರಕಾರದ ಯಾವುದೇ ಅಧಿಕಾರಿಗಳಿಗೆ ಇದರ ಬಗ್ಗೆ ಮಾಹಿತಿಯಿಲ್ಲ. ಇದರ ಬಗ್ಗೆ ಸರಿಯಾದ ಮಾಹಿತಿ ಇರುವುದು ವೀರಪ್ಪ ಮೊಯ್ಲಿ ಮತ್ತು ಆಸ್ಕರ್ ಫೆರ್ನಾಂಡಿಸ್ ಅವರಿಗೆ ಮಾತ್ರ. ಬಳಪುಂಜ ರಸ್ತೆ ಉಡುಪಿ-ನಿಟ್ಟೋಡಿ ನಡುವೆ ರೈಲು ಮಾರ್ಗಕ್ಕೆ ಸರ್ವೇ ಈಗಾಗಲೇ ಮುಗಿದಿದೆ.
ಪ್ರ: ಈ ಸ್ಥಾವರದಿಂದ ಪರಿಸರಕ್ಕೆ ಯಾವ ರೀತಿ ತೊಂದರೆಯಾಗಲಿದೆ?
ಭಟ್: 250 ಮೀಟರ್ ಎತ್ತರದ ಟವರ್ ನಿರ್ಮಾಣವಾಗಲಿದೆ. ಇಲ್ಲಿಂದ 10-15 ಕಿಲೋಮೀಟರ್ ದೂರದಲ್ಲಿ ಬಜ್ಪೆ ವಿಮಾನ ನಿಲ್ದಾಣವಿದೆ. ವಿಮಾನ ಕಾರ್ಯಾಚರಣೆಗೆ ತೊಂದರೆಯಾಗಲಿದೆ. ಹತ್ತಿರದಲ್ಲೇ ನಂದಿನಿ ನದಿ ಹರಿಯುತ್ತದೆ. ಈ ನದಿ ನೀರನ್ನು ಕೃಷಿಗೆ ಬಳಸಿಕೊಳ್ಳಲಾಗುತ್ತಿದೆ. ಸ್ಥಾವರದಿಂದ ಉತ್ಪಾದನೆಯಾಗುವ ಹಾರುವ ಬೂದಿಯಿಂದ ಪರಿಸರ ಕಲುಷಿತಗೊಳ್ಳುತ್ತದೆ.
ಪ್ರ: ನಿಮ್ಮ ಹೋರಾಟಕ್ಕೆ ಜನಬೆಂಬಲ ಹೇಗಿದೆ?
ಭಟ್: ನಾವು ನಿರೀಕ್ಷೆ ಮಾಡಿದಕ್ಕಿಂತಲೂ ಚೆನ್ನಾಗಿದೆ. ಜನರಿಗೆ ಈ ಘಟಕ ಸ್ಥಾಪನೆಯಿಂದಾಗುವ ತೊಂದರೆಯ ಬಗ್ಗೆ ಇನ್ನೂ ಸರಿಯಾಗಿ ತಿಳಿದಿಲ್ಲ. ಅವರಿಗೆ ಅರಿವು ಮೂಡಿಸುವ ಪ್ರಯತ್ನ ಮಾಡುತ್ತಿದ್ದೇವೆ. ಇಲ್ಲಿ ಒಂದು ಕುಟುಂಬದಲ್ಲಿ ನಾಲ್ಕು ಜನರಿದ್ದರೆ, ಅದರಲ್ಲಿ ಮೂವರು ಮುಂಬೈನಲ್ಲಿರುತ್ತಾರೆ. ಹಾಗಾಗಿ ಭೂಮಿಯನ್ನು ಮಾರಿ ಮುಂಬೈ ಅಥವಾ ಬೆಂಗಳೂರಿನಲ್ಲಿ ನೆಲೆಸುವ ಆಲೋಚನೆ ಕೂಡಾ ಕೆಲವರಲ್ಲಿದೆ.
ಪ್ರ: ನಂದಿಕ್ಕೂರು, ಎಂಆರ್ಪಿಎಲ್, ಈಗ ನಿಡ್ಡೋಡಿ. ಯಾಕೆ ಈ ಭಾಗದಲ್ಲೇ ಇಂಥಹ ಪ್ರಾಜೆಕ್ಟುಗಳು ಆರಂಭವಾಗುತ್ತಿದೆ?
ಭಟ್: ಪ್ರಮುಖವಾಗಿ ರೈಲು ನಿಲ್ದಾಣ ಮತ್ತು ಬಂದರು. ಸ್ಥಾವರದ ಕೊಳಚೆ ನೀರನ್ನು ಸಮುದ್ರಕ್ಕೆ ಬಿಡಲು ಅನುಕೂಲವಾಗುತ್ತದೆ ಮತ್ತು ಸಮುದ್ರದ ಉಪ್ಪು ನೀರನ್ನು ಶುದ್ದೀಕರಿಸಿ ಬಳಸ ಬಹುದಾಗಿದೆ.












Click it and Unblock the Notifications