ಮಗು ಹೆತ್ತ ಕೂಡಲೇ ಸುಟ್ಟು ಹಾಕಿದ ತಾಯಿ
ತಿರುವನಂತಪುರ, ಆ.5: 'ದೇವರ ನಾಡು' ಎಂದು ಕರೆಸಿಕೊಳ್ಳುವ ಕೇರಳದಲ್ಲಿ ಪೈಶಾಚಿಕ ಕೃತ್ಯವೊಂದು ವರದಿಯಾಗಿದೆ. ತಾಯಿಯೊಬ್ಬಳು ತನ್ನ ಮಗುವನ್ನು ಹೆತ್ತ ಕೂಡಲೇ ಸುಟ್ಟು ಹಾಕಿದ ದಾರುಣ ಘಟನೆ ನಡೆದಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ 24 ವರ್ಷ ವಯಸ್ಸಿನ ಸುಮಾ ಹಾಗೂ ಅವರ ತಾಯಿ 46 ವರ್ಷ ವಯಸ್ಸಿನ ಕುಮಾರಿ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ತಿರುವನಂತಪುರದ ನೆಡುಮಂಗಡ್ ಪೊಲೀಸ್ ಠಾಣೆ ವ್ಯಾಪ್ತಿಯ ಬುಡಕಟ್ಟು ಜನಾಂಗದ ಕಾಲೋನಿಯಲ್ಲಿ ಆರೋಪಿಗಳು ಸಿಕ್ಕಿ ಬಿದ್ದಿದ್ದಾರೆ.
ಮಗುವಿನ ಶವದ ಅವಶೇಷಗಳನ್ನು ಸಂಗ್ರಹಿಸಿರುವ ಪೊಲೀಸರು ಮರಣೋತ್ತರ ಪರೀಕ್ಷೆಗೆ ಕಳಿಸಿದ್ದಾರೆ. ಸುಮಾ ಅವರ ಮನೆ ಬಳಿ ಅವಶೇಷಗಳು ಸಿಕ್ಕಿವೆ. ಮರಣೋತ್ತರ ಪರೀಕ್ಷೆ ಪ್ರಕಾರ ಗಂಡು ಮಗು ಜನನವಾದ ಕೆಲವೇ ಕ್ಷಣಗಳಲ್ಲಿ ಮಗುವನ್ನು ಸುಟ್ಟು ಹಾಕಲಾಗಿದೆ. ಮಗು ಜೀವಂತ ಇರುವಾಗಲೇ ಬೆಂಕಿ ಹಚ್ಚಲಾಗಿದೆ ಎಂದು ತಿಳಿದು ಬಂದಿದೆ.

ಈ ಅಮಾನುಷ ಕೃತ್ಯಕ್ಕೆ ಕಾರಣ ಏನು ಎಂಬುದು ತಿಳಿದು ಬಂದಿಲ್ಲ. ಸಾಮಾನ್ಯವಾಗಿ ಹೆಣ್ಣು ಮಗು ಹುಟ್ಟಿದರೆ ಅಪಶಕುನ, ದೌರ್ಭಾಗ್ಯ ಎಂಬ ಅಪನಂಬಿಕೆಗೆ ಒಳಗಾಗಿ ಕೆಲವು ಬುಡಕಟ್ಟಿನ ಜನ ಶಿಶು ಹತ್ಯೆ ಮಾಡುವ ನಿದರ್ಶನಗಳಿವೆ ಆದರೆ, ಗಂಡು ಮಗುವನ್ನು ಈ ಜೀವಂತ ಇರುವಾಗಲೇ ಸುಟ್ಟು ಹಾಕಿರುವುದು ಇದೇ ಮೊದಲು ಎಂದು ಪೊಲೀಸರು ಹೇಳಿದ್ದಾರೆ.
ತಾಯಿ ಮತ್ತು ಮಗಳನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಈ ಕೃತ್ಯಕ್ಕೆ ಬೇರೊಬ್ಬರ ಸಹಾಯ ಇರುವ ಬಗ್ಗೆ ಸಂಶಯವಿದೆ. ಸುಮಾ ಅವರ ಪತಿ ಬಗ್ಗೆ ಕೂಡಾ ಯಾವುದೇ ಮಾಹಿತಿ ಸಿಕ್ಕಿಲ್ಲ ಎಂದು ಪೊಲೀಸರು ಹೇಳಿದ್ದಾರೆ.ತನಿಖೆ ಮುಂದುವರೆದಿದೆ. ಅನೈತಿಕವಾಗಿ ಹುಟ್ಟಿದ ಸಂತಾನವಾದರೂ ಈ ರೀತಿ ಮಗುವನ್ನು ಸುಟ್ಟು ಹಾಕಿದ ಬಗ್ಗೆ ನಾವು ಕೇಳಿಲ್ಲ, ಕಂಡಿಲ್ಲ ಎಂದು ಬುಡಕಟ್ಟು ಕಾಲೋನಿಯ ಜನ ಪ್ರತಿಕ್ರಿಯಿಸಿದ್ದಾರೆ.












Click it and Unblock the Notifications