ಮಳೆಗೆ ಸಿಲುಕಿದ ಸುಳ್ಯ-ಮಡಿಕೇರಿ ರಸ್ತೆ ದುಸ್ಥಿತಿ ನೋಡಿ
ಮಂಗಳೂರು, ಆ.5 : ಈ ವರ್ಷ ಮುಂಗಾರು ಮಳೆ ಮಾಡಿದ ಅನಾಹುತಗಳಿಗೆ ಲೆಕ್ಕವಿಲ್ಲ. ಕಳೆದ ವರ್ಷವಷ್ಟೇ ನಿರ್ಮಿಸಿದ್ದ ಸುಳ್ಯ - ಮಡಿಕೇರಿ ರಾಜ್ಯ ಹೆದ್ದಾರಿ ಸಂಪಾಜೆ ಕೊಯನಾಡಿನಲ್ಲಿ ಬಿರುಕು ಬಿಟ್ಟಿದ್ದು, ಮಳೆಯ ರುದ್ರ ನರ್ತನಕ್ಕೆ ಸಾಕ್ಷಿಯಾಗಿದೆ.
ಆರು ದಿನಗಳ ಹಿಂದೆ ಈ ಹೆದ್ದಾರಿ ಬಿರುಕು ಬಿಟ್ಟಿತ್ತು. ಇದರಿಂದಾಗಿ ವಾಹನ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಭಾನುವಾರ ಹೆದ್ದಾರಿಯಲ್ಲಿ ವಾಹನಗಳ ಸಂಚಾರ ಮತ್ತೆ ಪ್ರಾರಂಭವಾಗಿತ್ತು. ಹೆದ್ದಾರಿಯಲ್ಲಿ ಮತ್ತೆ ಹೆದ್ದಾರಿ ಪುನಃ ಬಿರುಕು ಬಿಟ್ಟಿದ್ದು ಭಾರೀ ವಾಹನಗಳ ಸಂಚಾರ ಸಂಪೂರ್ಣ ಸ್ಥಗಿತಗೊಳಿಸಲಾಗಿದೆ.
ಮುಂಗಾರು ಮಳೆಯ ಅರ್ಭಟದಿಂದಾಗಿ ಈ ರಸ್ತೆ ಸಂಪೂರ್ಣವಾಗಿ ಬಿರುಕು ಬಿಟ್ಟಿತ್ತು. ಆದ್ದರಿಂದ ವಾಹನಗ ಸಂಚಾರ ರದ್ದುಗೊಳಿಸಲಾಗಿತ್ತು. ವಾಹನ ಸವಾರರ ಪ್ರತಿಭಟನೆ ಹಿನ್ನಲೆಯಲ್ಲಿ ಭಾನುವಾರ ಸಂಚಾರ ಮತ್ತೆ ಪ್ರಾರಂಭಿಸಲಾಗಿತ್ತು.
ರಾಜ್ಯ ಹೆದ್ದಾರಿ ಸುಮಾರು 50 ಮೀ ಬಿರುಕು ಬಿಟ್ಟಿದ್ದರಿಂದ ಭಾರೀ ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ. ರಸ್ತೆಯ ಒಂದು ಬದಿಯಿಂದ ಲಘು ವಾಹನಗಳು ಸಂಚರಿಸಬಹುದಾಗಿದೆ. ಭಾರೀ ವಾಹನಗಳಿಗೆ ರಸ್ತೆಯಲ್ಲಿ ಸಂಚರಿಸಲು ಅವಕಾಶ ನೀಡದಂತೆ ಜಿಲ್ಲಾಡಳಿತ ಪೊಲೀಸರಿಗೆ ಸೂಚನೆ ನೀಡಿದೆ. ಬಿರುಕು ಬಿಟ್ಟ ರಸ್ತೆಯ ಚಿತ್ರಗಳು ಹೀಗಿವೆ ನೋಡಿ. (ಫೋಟೋ ಕೃಪೆ: ಡಾ.ಜಯರಾಮ್ )

ಕಳೆದ ವರ್ಷ ನಿರ್ಮಿಸಿದ ರಸ್ತೆ
2012ರಲ್ಲಿ ಕೆಆರ್ ಡಿಸಿಎಲ್ ವತಿಯಿಂದ ಕುಶಾಲನಗರದಿಂದ ಸಂಪಾಜೆ ವರೆಗಿನ ಈ ಹೆದ್ದಾರಿಯನ್ನು ಅಭಿವೃದ್ಧಿ ಪಡಿಸಲಾಗಿತ್ತು. ಈಗ ಕೊಯನಾಡು ಅರಣ್ಯ ಇಲಾಖೆಯ ಕಚೇರಿ ಸಮೀಪದಿಂದ ಸುಮಾರು 50 ಮೀಟರ್ ಉದ್ದಕ್ಕೆ ರಸ್ತೆ ಬಿರುಕು ಬಿಟ್ಟಿದೆ.

ಒನ್ ವೇ ಸಂಚಾರ
ರಸ್ತೆಯ ಒಂದು ಭಾಗದಲ್ಲಿ ಲಘು ವಾಹನಗಳು ಸಂಚಾರ ನಡೆಸಬಹುದಾಗಿದೆ. ಆದ್ದರಿಂದ ಭಾರೀ ವಾಹನಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ. ರಸ್ತೆಯನ್ನು ನೋಡಿದರೆ ಬೇರೆ ಮಾರ್ಗದಲ್ಲಿ ಹೋಗಬೇಕು ಎಂದು ವಾಹನ ಸವಾರರು ಇಷ್ಟಪಡುತ್ತಾರೆ.

ಲಘುವಾಹನ ಸಂಚಾರ
ರಸ್ತೆಯಲ್ಲಿ ವಾಹನ ಸಂಚಾರ ಅಸಾಧ್ಯವೆಂದು ತಿಳಿದಿದ್ದರೂ. ಪ್ರಯಾಣಿಕರು ಪ್ರತಿಭಟನೆ ನಡೆಸಿದ ಹಿನ್ನೆಯಲ್ಲಿ ಲಘುವಾಹನಗಳಿಗೆ ಮಾತ್ರ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಭಾರೀ ವಾಹನಗಳಿಗೆ ಪ್ರವೇಶ ನಿಷೇಧಿಸಲಾಗಿದೆ.

ಮಳೆಯ ಆರ್ಭಟ
ರಾಜ್ಯ ಹೆದ್ದಾರಿ ಈ ಸ್ಥಿತಿಗೆ ತಲುಪಲು ಈ ಬಾರಿಯ ಮಳೆಯೇ ಕಾರಣ. ಕಳೆದ ವರ್ಷ ಅಭಿವೃದ್ದಿ ಪಡಿಸಿದ ಈ ರಸ್ತೆ ಈ ವರ್ಷ ಗುರುತು ಸಿಗದಷ್ಟು ಹಾನಿಗೆ ಒಳಗಾಗಿದೆ.

ಎಲ್ಲಿಂದ ಸಂಚರಿಸಬಹುದು
ಸಂಪಾಜೆ ಮೂಲಕ ಮೈಸೂರು, ಬೆಂಗಳೂರಿಗೆ ಪ್ರಯಾಣಿಸುವ ಭಾರೀ ವಾಹನಗಳು ಶಿರಾಡಿ ಘಾಟ್ ಮೂಲಕ ಸಂಚರಿಸಬಹುದಾಗಿದೆ.












Click it and Unblock the Notifications