ನಟಿ ಕಾರು ಗುದ್ದಿ ಒಬ್ಬ ಬಲಿ, ಐವರಿಗೆ ಗಾಯ
ಮುಂಬೈ, ಆ.2: ಕಿರುತೆರೆ ನಟಿ ಹಾಗೂ ರೂಪದರ್ಶಿ ಸಾಕ್ಷಿ ಪಾರೀಖ್ ಅವರು ಓಡಿಸುತ್ತಿದ್ದ ಹೋಂಡಾ ಸಿವಿಕ್ ಕಾರು ಶುಕ್ರವಾರ ವಾಹನಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಒಬ್ಬ ಮೃತಪಟ್ಟಿದ್ದು, ಹಲವರಿಗೆ ಗಾಯಗಳಾಗಿದೆ.
ರಾಷ್ಟ್ರೀಯ ಮಾಧ್ಯಮಗಳ ವರದಿ ಪ್ರಕಾರ ಕಂಡಿವಾಲಿ ಪ್ರದೇಶದಲ್ಲಿ ಬೈಕ್ ಹಾಗೂ ಆಟೋರಿಕ್ಷಾಗೆ ಹೋಂಡಾ ಸಿವಿಕ್ ಕಾರು ರಭಸವಾಗಿ ಗುದ್ದಿದೆ. ಕಾರನ್ನು ಸ್ವತಃ ಸಾಕ್ಷಿ ಅವರೇ ಅತಿ ವೇಗದಲ್ಲಿ ಚಲಿಸುತ್ತಿದ್ದರು ಎಂಬುದು ತಿಳಿದು ಬಂದಿದೆ. ಆದರೆ, ಸಾಕ್ಷಿ ಅವರು ಮದ್ಯಪಾನ ಮಾಡಿದ್ದರ ಬಗ್ಗೆ ಇನ್ನೂ ಮಾಹಿತಿ ಸಿಕ್ಕಿಲ್ಲ. ಗಾಯಗೊಂಡವರ ವಿವರಗಳು ಲಭ್ಯವಾಗಿದ್ದು, ಅಹಮದ್ ಸಿದ್ದಿಕಿ, ಲೋಕೇಶ್ ಯಾದವ್, ದಿಲೀಪ್ ಕುಮಾರ್ ಸೋನಿ ಎಂದು ಗುರುತಿಸಲಾಗಿದೆ. ಮೃತಪಟ್ಟ ವ್ಯಕ್ತಿ ಹಾಗೂ ಮತ್ತೊಬ್ಬ ಗಾಯಗೊಂಡ ವ್ಯಕ್ತಿಯ ವಿವರ ಇನ್ನೂ ಲಭ್ಯವಾಗಿಲ್ಲ.

ಅತಿ ವೇಗದಿಂದ ಬಂದ ಹೋಂಡಾ ಸಿವಿಕ್ ಕಾರು ತನ್ನ ಲೇನ್ ಬದಲಿಸಿ ನುಗ್ಗಿದ ಪರಿಣಾಮ ಬೈಕ್ ಹಾಗೂ ಆಟೋರಿಕ್ಷಾಗೆ ಗುದ್ದಿದೆ. ಬೈಕ್ ಸವಾರ ತೀವ್ರವಾದ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಗಾಯಗೊಂಡ ಇತರರನ್ನು ಭಗವತಿ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ನಟಿ ಸಾಕ್ಷಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ.
MH-09-BX-9279 ವಾಹನ ನೋಂದಣಿ ಸಂಖ್ಯೆಯುಳ್ಳ ಹೋಂಡಾ ಸಿವಿಕ್ ಕಾರು ಓಡಿಸುತ್ತಿದ್ದ ಸಾಕ್ಷಿ ಪಾರೀಖ್ ಅವರು ವಾಹನದ ಮೇಲೆ ನಿಯಂತ್ರಣ ತಪ್ಪಿದ ಪರಿಣಾಮ ಅಪಘಾತ ಸಂಭವಿಸಿದೆ ಎನ್ನಲಾಗಿದೆ.
ಮುಂಬೈನ ಈ ಭಾಗದಲ್ಲಿ ಮಳೆಯಿಂದ ರಸ್ತೆ ಬೇರೆ ಹಾಳಾಗಿದೆ. ಅಲ್ಲದೆ ಈ ಘಟನೆ ನಡೆದಿರುವುದು ಬೆಳಗ್ಗೆ 11 ಗಂಟೆ ಸುಮಾರಿಗೆ ಹಾಗಾಗಿ ಕುಡಿದು ಗಾಡಿ ಓಡಿಸಿರುವ ಸಾಧ್ಯತೆ ಕಮ್ಮಿ ಎಂದು ಹೇಳಲಾಗಿದೆ. ಬ್ರೇಕ್ ಒತುವ ಬದಲು ಆಕೆ ಆಕ್ಸಿಲೇಟರ್ ಒತ್ತಿದ್ದೆ ಅಪಘಾತಕ್ಕೆ ಕಾರಣ ಎನ್ನಲಾಗಿದೆ.
ಕಳೆದ ರಾತ್ರಿ ಶೂಟಿಂಗ್ ನಲ್ಲಿದ್ದರು. ಅಧಿಕವಾದ ಕೆಲಸದ ಒತ್ತಡದಿಂದ ನಿದ್ದೆ ಸರಿಯಾಗಿ ಮಾಡಿರಲಿಲ್ಲ ಎಂದು ತಿಳಿದು ಬಂದಿದೆ. ಪೊಲೀಸರು ವಿಚಾರಣೆ ನಂತರ ಆಕೆಯನ್ನು ಶೂಟಿಂಗ್ ಮುಂದುವರೆಸಲು ಅನುಮತಿ ನೀಡಿ ಕಳಿಸಿಕೊಟ್ಟಿದ್ದಾರೆ ಎಂಬ ಸುದ್ದಿಯೂ ಇದೆ.
ಬಾಲಿವುಡ್ ಜಗತ್ತಿನ ಸೆಲೆಬ್ರಿಟಿಗಳು ಈ ರೀತಿ ಹಿಟ್ ಅಂಡ್ ರನ್ ಕೇಸಿನಲ್ಲಿ ಕಾಣಿಸಿಕೊಳ್ಳುವುದು ಇದೇ ಮೊದಲಲ್ಲ, ಸಲ್ಮಾನ್ ಖಾನ್ ಅವರ 2002ರ ಹಿಟ್ ಅಂಡ್ ರನ್ ಕೇಸ್ ಇನ್ನೂ ಕೋರ್ಟಿನಲ್ಲಿ ವಿಚಾರಣೆ ಹಂತದಲ್ಲಿದೆ.












Click it and Unblock the Notifications