ಶೂಟೌಟ್: ಕುಂದಾಪುರದ ವಿಜಯ್ ಪೂಜಾರಿ ಗುಂಡಿಗೆ ಬಲಿ

ವಿರೋಧಿ ಗುಂಪು ನಡೆಸಿದ ಗುಂಡಿನ ದಾಳಿಗೆ ಬಲಿಯಾದ ವಿಜಯ್ ಪೂಜಾರಿ (35) ಮೂಲತಃ ಕುಂದಾಪುರದವ. ಮುಂಬೈನ ಖಾರ್ ಬಳಿಯಿರುವ ಹೋಟೆಲಿನಲ್ಲಿ ಈ ಶೂಟ್ ಔಟ್ ನಡೆದಿದೆ.
ಏರ್ ಇಂಡಿಯಾದ ಕಾರ್ಗೊ ವಿಭಾಗದಲ್ಲಿ ನೌಕರಿಯಲ್ಲಿದ್ದ ವಿಜಯ್ ಪೂಜಾರಿಗೆ ನಾಲ್ಕು ವರ್ಷದ ಪುತ್ರನಿದ್ದಾನೆ. ವಿಜಯ್ ಪೂಜಾರಿ ಇತ್ತೀಚೆಗೆ ಪೂನಾಗೆ ವರ್ಗವಾಗಿದ್ದ.
ಬುಧವಾರ ರಾತ್ರಿ ವಿಜಯ್ ಪೂಜಾರಿ ಎಂದಿನಂತೆ ಖಾರ್ ನಲ್ಲಿರುವ ಶಾರದಾ ಬಾರ್ ಅಂಡ್ ರೆಸ್ಟೋರೆಂಟಿಗೆ ಸ್ನೇಹಿತರೊಂದಿಗೆ ಹೋಗಿದ್ದ. ಮಧ್ಯರಾತ್ರಿ 12 ಗಂಟೆಯ ವೇಳೆಗೆ ಏಕಾಏಕಿ ಈತನ ಮೇಲೆ ಗುಂಡಿನ ದಾಳಿ ನಡೆದಿದೆ. ರಾಹುಲ್ ಶರ್ಮಾ ಕಡೆಯವರು ಹೋಟೆಲಿಗೆ ನುಗ್ಗಿ ಮನಬಂದಂತೆ ವಿಜಯ್ ಪೂಜಾರಿ ಮತ್ತು ಅವನ ಸ್ನೇಹಿತರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ವಿಜಯ್ ಪೂಜಾರಿ ಆಸ್ಪತ್ರೆಯಲ್ಲಿ ಮೃತಪಟ್ಟ ಎಂದು ಡಿಸಿಪಿ ನಾಮದೇವ್ ಚೌಹಾನ್ ತಿಳಿಸಿದ್ದಾರೆ.
ಪೂಜಾರಿ ಸ್ನೇಹಿತರೂ ಶರ್ಮಾ ಗ್ಯಾಂಗ್ ಮೇಲೆ ಪ್ರತಿ ದಾಳಿ ನಡೆಸಿದ್ದಾರೆ. ಬಾರಿನಲ್ಲಿದ್ದ ಗ್ರಾಹಕರು ಘಟನೆಯಿಂದ ಕಕ್ಕಾಬಿಕ್ಕಿಯಾಗಿ, ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಶೂಟ್ ಔಟಿನಲ್ಲಿ ಒಬ್ಬ ಗಾಯಗೊಂಡಿದ್ದಾನೆ.
ವಿಜಯ್ ಪೂಜಾರಿ ಮತ್ತು ರಾಹುಲ್ ಶರ್ಮಾ ವಿರುದ್ಧ ಅನೇಕ ಅಪರಾಧ ಪ್ರಕರಣಗಳು ದಾಖಲಾಗಿವೆ. ಇಬ್ಬರೂ ಪರಸ್ಪರ ಕಡು ವಿರೋಧಿಗಳು. ವಿಜಯ್ ಪೂಜಾರಿ ದೇಹವನ್ನು ಜೆಜೆ ಆಸ್ಪತ್ರೆಯಲ್ಲಿಡಲಾಗಿದೆ. ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.












Click it and Unblock the Notifications