ಬೆಂಗಳೂರು : ಕಾರಿಗೆ ಸಿಲುಕಿ ಮಗು ಸಾವು

ಬುಧವಾರ ಸಂಜೆ 4.30ರ ಸುಮಾರಿಗೆ ಹನುಮಾನ್ ನಗರದಲ್ಲಿ ವ್ಯಕ್ತಿಯೊಬ್ಬರು ಕಾರನ್ನು ರಿವರ್ಸ್ ಪಡೆಯುತ್ತಿದ್ದರು, ಈ ಸಮಯದಲ್ಲಿ ಒಂದೂವರೆ ವರ್ಷದ ಮಗು ಯವರಾಜ ಕಾರಿನಡಿ ಸಿಲುಕಿ ಮೃತಪಟ್ಟಿದೆ. ತಕ್ಷಣ ಮಗುವನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಮಗು ಮೃತಪಟ್ಟಿದೆ.
ಕಾರಿನ ಹಿಂದೆ ಯಾರು ಇರಲಿಲ್ಲ. ಅದು ಹೇಗೆ ಮಗು ಸಿಲುಕಿಕೊಂಡಿತು ಎಂದ ತಿಳಿದಿಲ್ಲ ಎಂದು ಕಾರಿನ ಚಾಲಕರು ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕಾರು ಚಾಲಕನನ್ನು ಬಂಧಿಸಿದ್ದಾರೆ.
ಬೆಂಗಳೂರು : ಬೇಲೂರು ಸರ್ಕಾರಿ ಬಸ್ ದುರಂತ ಪ್ರಕರಣದ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ರಸ್ತೆ ಪಕ್ಕದಲ್ಲಿರುವ ಕೆರೆಗಳಿಗೆ ತಡೆಗೋಡೆ ನಿರ್ಮಿಸಲು ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಅವರು ಭರವಸೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ, ರಸ್ತೆಯ ಪಕ್ಕ ತಡೆಗೋಡೆ ಇಲ್ಲದಿದ್ದರಿಂದ ದುರಂತ ಸಂಭವಿಸಿದೆ ಎಂದು ತಿಳಿದು ಬಂದಿದೆ. ರಾಜ್ಯ ಹೆದ್ದಾರಿ ಮತ್ತು ರಾಷ್ಟ್ರೀಯ ಹೆದ್ದಾರಿಗಳು ಹಾದು ಹೋಗುವಲ್ಲಿನ ಕೆರೆಗಳಿಗೆ ತಡೆಗೋಡೆ ನಿರ್ಮಿಸುವ ಕುರಿತು, ಲೋಕಪಯೋಗಿ ಸಚಿವರ ಜೊತೆ ಚರ್ಚೆ ನಡೆಸಿ, ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.
ಬೆಂಗಳೂರು : ಆಕ್ಸಿಸ್ ಬ್ಯಾಂಕ್ ಎಟಿಎಂಗೆ ಹಣ ತುಂಬಲು ಆಗಮಿಸಿದ್ದ ವಾಹನದೊಂದಿಗೆ ಬಂದಿದ್ದ ಸೆಕ್ಯೂರಿಟಿ ಗಾರ್ಡ್, ಡಬಲ್ ಬ್ಯಾರಲ್ ಗನ್ ನಿಂದ ಆಕಸ್ಮಿಕವಾಗಿ ಗುಂಡು ಹಾರಿ ಎಟಿಎಂ ಸಿಬ್ಬಂದಿ ಗಾಯಗೊಂಡಿರುವ ಘಟನೆ ಕೋರಮಂಗಲದ 7ನೇ ಬ್ಲಾಕ್ ನಲ್ಲಿ ನಡೆದಿದೆ.
ಬುಧವಾರ ಬೆಳಗ್ಗೆ, 10 ಗಂಟೆ ಸುಮಾರಿಗೆ ಕೋರಮಂಗಲ 7 ನೇ ಬ್ಲಾಕ್ ನಲ್ಲಿರು ಆಕ್ಸಿಸ್ ಬ್ಯಾಂಕ್ ಎಟಿಎಂಗೆ ಹಣ ಹಾಕಲು ಬಂದಾಗ ಈ ಘಟನೆ ನಡೆದಿದೆ. ಇದರಿಂದ ಎಟಿಎಂ ಸಿಬ್ಬಂದಿಯೊಬ್ಬರ ಪಕ್ಕೆಲುಬಿಗೆ ಗಾಯಗಳಾಗಿದ್ದು ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹಾಸನ : ಬೇಲೂರು ಬಳಿ ಸರ್ಕಾರಿ ಬಸ್ ಕರೆಗೆ ಉರುಳಿ 8 ಮಂದಿ ಮೃತಪಟ್ಟ ಘಟನೆ ಮರೆಯುವ ಮುನ್ನವೆ ಹಾಸನದ ರುದ್ರ ಪಟ್ಟಣ ಬಳಿ ಮತ್ತೊಂದು ಸರ್ಕಾರಿ ಬಸ್ ಅಪಘಾತಕ್ಕೀಡಾಗಿದೆ. ಘಟನೆಯಿಂದಾಗಿ 10 ಪ್ರಯಾಣಿಕರಿಗೆ ಚಿಕ್ಕಪುಟ್ಟ ಗಾಯಗಳಾಗಿವೆ.
ಮೈಸೂರು : ಕೆಎಸ್ಆರ್ ಟಿಸಿ ಬಸ್ ಟ್ರಾಕ್ಟರ್ ಗೆ ಡಿಕ್ಕಿ ಹೊಡೆದು ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟು, ಎಂಟು ಮಂದಿ ಗಾಯಗೊಂಡಿರುವ ಘಟನೆ ಹುಣಸೂರಿನಲ್ಲಿ ಬುಧವಾರ ಬೆಳಗ್ಗೆ ನಡೆದಿದೆ. ಚಿಕ್ಕ ಹುಣಸೂರು ಬಳಿ ಟ್ರಾಕ್ಟರ್ ಗೆ ಬಸ್ ಡಿಕ್ಕಿ ಹೊಡೆದಿದೆ. ಇದರಿಂದ ಅದರಲ್ಲಿದ್ದ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ಗಾಯಗೊಂಡವರನ್ನು ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ.












Click it and Unblock the Notifications