ಜಯಲಕ್ಷ್ಮಿಯಂಥವರಿಗೆ ಬುದ್ಧಿ ಬರುವುದು ಯಾವಾಗ?

ಆದರೆ, ಆ ಸಮಯದಲ್ಲಿ ಅವರಿಗೆ ಮಂಕು ಬಡಿದಿರುತ್ತದೆಯೋ, ಹಣದಾಸೆಯ ಮೋಹವೇ ಅವರನ್ನು ಸಮ್ಮೋಹನಗೊಳಿಸಿರುತ್ತದೆಯೋ ಅಥವಾ ತಾವೇ ಅತಿ ಬುದ್ಧಿವಂತರೆಂದು ಈ ಮಹಿಳೆಯರು ತಿಳಿದುಕೊಂಡಿರುತ್ತಾರೋ, ಆ ದೇವನೇ ಬಲ್ಲ. ಲಕ್ಷ್ಮಿಯ ಹಿಂದೆ ಬಿದ್ದು ಮೋಸ ಹೋದ ಬಳ್ಳಾರಿ ಜಯಲಕ್ಷಿಯ ಕಥೆ ಇಲ್ಲಿದೆ ಓದಿರಿ.
ಬಳ್ಳಾರಿಯ ಜಯಲಕ್ಷ್ಮಿಯವರು ಜೀವನದಲ್ಲಿ ಒಂದು ಬಾರಿಯಾದರೂ ಕೌನ್ ಬನೇಗಾ ಕರೋಡಪತಿ ಹಿಂದಿ ರಿಯಾಲಿಟಿ ಶೋಗಾಗಿ ಕರೆ ಮಾಡಿ ಉತ್ತರಿಸದವರು, ಮೋಸಗಾರರ ಮರಳು ಮಾತಿಗೆ ಬಲಿಯಾಗಿ ಭರ್ತಿ 80 ಸಾವಿರ ರು.ಗಳನ್ನು ಕಳೆದುಕೊಂಡು ಕಣ್ಣೀರಿಡುತ್ತಿದ್ದಾರೆ. ಇನ್ನೂ 1.80 ಲಕ್ಷ ರು. ಕಳೆದುಕೊಳ್ಳುವ ಮುನ್ನ ಎಚ್ಚೆತ್ತುಕೊಂಡಿದ್ದಾರೆ.
ಆಗಿದ್ದೇನೆಂದರೆ, ಜಯಲಕ್ಷ್ಮಿಯವರಿಗೆ ಅನಾಮಧೇಯರಿಂದ ಒಂದು ಕರೆ ಬಂದಿದೆ. ಕೌನ್ ಬನೇಗಾ ಕರೋಡಪತಿ ಕಾರ್ಯಕ್ರಮದಲ್ಲಿ 25 ಲಕ್ಷ ರು. ಜಾಕ್ ಪಾಟ್ ಹೊಡಿದಿದ್ದೀರೆಂದು ಅವರಿಗೆ ಮನವರಿಕೆ ಮಾಡಿಕೊಡಲಾಗಿದೆ. ಅಮಿತಾಬ್ ಬಚ್ಚನ್ ಧ್ವನಿಯಲ್ಲಿ ಕರೆ ಬಂದಿದ್ದರಿಂದ ಅವರು ನಂಬಿಬಿಟ್ಟಿದ್ದಾರೆ. ಮೊದಲಿಗೆ 25 ಸಾವಿರ ರು. ಹಣವನ್ನು ಅವರು ಹೇಳಿದ ಬ್ಯಾಂಕ್ ಖಾತೆಗೆ ಜಮಾ ಮಾಡಿದರೆ ಸಂಪೂರ್ಣ ಹಣ ನೀಡುವುದಾಗಿ ನಂಬಿಸಿದ್ದಾರೆ.
25 ಲಕ್ಷ ರು. ತಮ್ಮ ಖಾತೆಗೆ ಸೇರಿಸಿಕೊಳ್ಳುವ ಕನಸಿಗೆ ಬಿದ್ದ ಜಯಲಕ್ಷಿಯವರು ತಮ್ಮ ಯಜಮಾನರಿಗೂ ತಿಳಿಸದಂತೆ 25 ಸಾವಿರ ರು.ಯನ್ನು ಖಾತೆಗೆ ಜಮಾ ಮಾಡಿದ್ದಾರೆ. ಸ್ವಲ್ಪ ದಿನದಲ್ಲಿ 55 ಸಾವಿರ ರು. ಭರ್ತಿ ಮಾಡಬೇಕೆಂದು ಅವರಿಗೆ ಹೇಳಲಾಗಿದೆ. ಜಯಲಕ್ಷ್ಮಿಯವರು ಕ್ಷಣಕೂಡ ತಲೆಕೆಡಿಸಿಕೊಳ್ಳದೆ, ಗಂಡನಿಗೂ ಹೇಳದೆ ಭರ್ತಿ ಮಾಡಿದ್ದಾರೆ. ಇನ್ನು ಕೆಲ ದಿನದಲ್ಲಿ 1.80 ಲಕ್ಷ ರು. ಜಮಾ ಮಾಡಬೇಕೆಂದು ಮತ್ತೆ ಕರೆ ಬಂದಾಗ ಇವರಿಗೆ ಜ್ಞಾನೋದಯವಾಗಿದೆ.
ತಾವು ಬ್ಯಾಂಕ್ ಮ್ಯಾನೇಜರ್ ಆಗಿದ್ದು, ನಿಮ್ಮ ಹಣ ನಮ್ಮಲ್ಲಿ ಸುರಕ್ಷಿತವಾಗಿದ್ದು, ಮತ್ತಷ್ಟು ಹಣ ಜಮಾ ಮಾಡಿ ಎಂದು ಕರೆ ಬಂದಾಗ, ಜಯಲಕ್ಷ್ಮಿಯವರ ಜಂಘಾಬಲ ಉಡುಗಿಹೋಗಿದೆ, ತಾವು ಎಂಥ ತಪ್ಪು ಮಾಡಿದೆ ಎಂಬುದರ ಅರಿವಾಗಿದೆ. ಕೂಡಲೆ ಅವರು ಗಂಡನಿಗೆ ವಿಷಯವನ್ನೆಲ್ಲ ವಿವರಿಸಿದ್ದಾರೆ. ಗಂಡ ಈ ಕುರಿತು ಬಂದ ಕರೆಯ ನಂಬರಿಗೆ ಫೋನ್ ಮಾಡಿದಾಗ ತಾವು ಮೋಸದ ಜಾಲದಲ್ಲಿ ಸಿಲುಕಿರುವುದು ಮನವರಿಕೆಯಾಗಿದೆ.
ಅಷ್ಟರಲ್ಲಾಗಲೆ ಜಯಲಕ್ಷ್ಮಿಯವರು 80 ಸಾವಿರ ರು. ಕಳೆದುಕೊಂಡಾಗಿದೆ. ಇನ್ನೂ ಸ್ವಲ್ಪ ಯಾಮಾರಿದ್ದರೆ 1.80 ಲಕ್ಷ ರು. ಕೂಡ ಕೈಬಿಟ್ಟು ಹೋಗುವುದರಲ್ಲಿತ್ತು. ತಾವು ಅಪರಿಚಿತರಿಂದ ಮೋಸ ಹೋಗಿರುವುದಾಗಿ ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕೊಟ್ಟ ಹಣ ವಾಪಸ್ ಬರುತ್ತದಾ?
ಟೈರ್ ಪಂಕ್ಚರ್ ಆಗಿದೆಯೆಂದು ಯಾಮಾರಿಸಿ ಹಣ ಲಪಟಾಯಿಸುವವರು, ಹಣ ದ್ವಿಗುಣ ಮಾಡುತ್ತೇವೆಂದು ಮೋಸ ಮಾಡುವವರು, ಚಿನ್ನ ಭದ್ರವಾಗಿಟ್ಟುಕೊಳ್ಳಿ ಎಂದು ಹೇಳಿ ಆಭರಣ ಮೈಮೇಲಿಂದ ತೆಗೆಸಿ ಕೈಯಲ್ಲಿ ಕಲ್ಲು ಕೊಟ್ಟು ಹೋಗುವವರು, ಚಿಟ್ ಫಂಡ್ ನಲ್ಲಿ ಲಕ್ಷಗಟ್ಟಲೆ ಹಣ ತೊಡಗಿಸಿ ಹಣ ಲಪಟಾಯಿಸುವವರು ಜನರನ್ನು ನಂಬಿಸಿ ಮೋಸ ಮಾಡುತ್ತಲೇ ಇದ್ದರೂ ಇವರು ಇನ್ನೂ ಎಚ್ಚೆತ್ತುಕೊಂಡಿಲ್ಲ. ಜಯಲಕ್ಷ್ಮಿಯಂಥವರಿಗೆ ಬುದ್ಧಿ ಬರುವುದು ಯಾವಾಗ?












Click it and Unblock the Notifications