ಬೆಳಗಾವಿ : ಅಪರಿಚಿತ ವಾಹನ ಡಿಕ್ಕಿ, ನಾಲ್ವರ ಸಾವು

ಗುರುವಾರ ಮುಂಜಾನೆ 5 ಗಂಟೆ ಸುಮಾರಿಗೆ ಬೆಳಗಾವಿಯ ಸಂಕೇಶ್ವರ ಬಳಿಯ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಕ್ರೂಸರ್ ವಾಹನಕ್ಕೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದಿದೆ. ಕ್ರೂಸರ್ ನಲ್ಲಿದ್ದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗಾಯಗೊಂಡ ಮೂವರನ್ನು ಬೆಳಗಾವಿಯ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತರನ್ನು ವಾಸಪ್ಪ ಅಂಗಡಿ, ಹುಬ್ಬಳ್ಳಿಯ ಸಂತೋಷ್ ಗಂಡಾರ (30), ಹಾವೇರಿಯ ಇಬ್ರಾಹಿಂ ಸಾಬ್(40) ಎಂದು ಗುರುತಿಸಲಾಗಿದ್ದು, ಮತ್ತೊಬ್ಬರ ಗುರುತು ಪತ್ತೆಯಾಗಿಲ್ಲ. ಗಾಯಗೊಂಡವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ.
ಚಾಲಕನೇ ಕಾರಣ : ಕ್ರೂಸರ್ ಚಾಲಕನಿಗೆ ನಿದ್ದೆ ಬಂದಿದ್ದರಿಂದ ಬೆಳಗ್ಗೆ 4.30ರ ಸುಮಾರಿಗೆ, ಕ್ಲೀನರ್ ಗೆ ವಾಹನ ಚಲಾಯಿಸಿಲು ಕೊಟ್ಟು ಆತ ನಿದ್ದೆಗೆ ಜಾರಿದ್ದಾನೆ. ಕ್ಲೀನರ್ ಇಬ್ರಾಹಿಂ ಸಾಬ್ ವೇಗವಾಗಿ ವಾಹನ ಚಲಾಯಿಸುತ್ತಿದ್ದ. ಈ ಸಂರ್ಭದಲ್ಲಿ ಎದುರಿನಿಂದ ಬಂದ ವಾಹನ ಡಿಕ್ಕಿ ಹೊಡೆಯಿತು ಎಂದು ಗಾಯಾಳುಗಳು ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.
ಬೆಳಕಿನ ಪ್ರಖರತೆಯಲ್ಲಿ ವಾಹನ ಯಾವುದೆಂದು ಗುರುತಿಸಲು ವಿಫಲವಾದೆವು. ಲಾರಿ ಇರಬಹುದು ಎಂದು ಗಾಯಾಳು ಪೊಲೀಸರಿಗೆ ನೀಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಸಂಕೇಶ್ವರ ಪೊಲೀಸರು, ತನಿಖೆ ಕೈಗೊಂಡಿದ್ದು, ಅಪರಿಚಿತ ವಾಹನವನ್ನು ಪತ್ತೆ ಹಚ್ಚವ ಕಾರ್ಯ ಪ್ರಾರಂಭಿಸಿದ್ದಾರೆ.












Click it and Unblock the Notifications