ಬಾಲಕನ ಕಾಲು ಕಿತ್ತುಕೊಂಡ ಬಿಎಂಟಿಸಿ ಬಸ್

ಬುಧವಾರ ಸಂಜೆ ಕಂಟೋನ್ಮೆಂಟ್ ರೈಲ್ವೆ ನಿಲ್ದಾಣದ ಬಳಿ ರಸ್ತೆ ದಾಟುವಾಗ, ಬಿಎಂಟಿಸಿ ಬಸ್ ಚಂದನ್ (5) ಮತ್ತು ಅವರ ತಾಯಿಯ ಕಾಲಿನ ಮೇಲೆ ಹತ್ತಿದೆ. ಇದರಿಂದ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಜೈನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆಸ್ಪತ್ರೆಯ ವೈದ್ಯರ ಪ್ರಕಾರ ಚಂದನ್ ಮತ್ತು ಜಯಂತಿ ಅವರ ಕಾಲಿಗೆ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ. ಚಂದನ್ ಬಲಗಾಲಿಗೆ ಗಂಭೀರ ಗಾಯಗಳಾಗಿದ್ದು, ಮೂಳೆಗಳು ಪುಡಿಯಾಗಿವೆ. ಆತನಿಗೆ ಕೃತಕ ಕಾಲು ಜೋಡಿಸಬೇಕಾಗುತ್ತದೆ ಎಂದು ಹೇಳಿದ್ದಾರೆ. ಜಯಂತಿ ಅವರಿಗೆ ವಿಶ್ರಾಂತಿ ತೆಗೆದುಕೊಳ್ಳಲು ಸೂಚಿಸಲಾಗಿದೆ.
ಅಜ್ಜಿ ಮನೆಯಿಂದ ಬರುತ್ತಿದ್ದರು : ಕೆಜಿಎಫ್ ನಲ್ಲಿಯ ತಾಯಿಯ ಮನೆಗೆ ಹೋಗಿದ್ದ ಜಯಂತಿ, ರೈಲಿನಲ್ಲಿ ಬೆಂಗಳೂರಿಗೆ ಬುಧವಾರ ಸಂಜೆ ಹಿಂದಿರುಗಿದ್ದರು. ಕಂಟೋನ್ಮೆಂಟ್ ನಿಲ್ದಾಣದಿಂದ ವಸಂತನಗರದಲ್ಲಿರುವ ಮನೆಗೆ ಹೋಗಲು ಆಗಮಿಸಿ ಸರ್ಕಲ್ ನಲ್ಲಿ ರಸ್ತೆ ದಾಟುತ್ತಿದ್ದರು.
ಈ ಸಮಯದಲ್ಲಿ ಎದುರಿನಿಂದ ಬಂದ ಬಿಎಂಟಿಸಿ ಬಸ್ ನ ಹಿಂಬದಿಯ ಚಕ್ರಗಳು ಜಯಂತಿ ಮತ್ತು ಚಂದನ್ ಅವರ ಕಾಲಿನ ಮೇಲೆ ಹತ್ತಿವೆ. ಚಂದನ್ ಕಾಲಿನ ಮೂಳೆಗಳು ಪುಡಿಯಾಗಿದ್ದು, ಕಾಲು ಕಳೆದುಕೊಂಡಿದ್ದಾನೆ. ಹೈಗ್ರೌಂಡ್ಸ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಬಸ್ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ.
ಪೆಟ್ರೋಲ್ ಬಂಕ್ ನುಗ್ಗಿದ ಬಸ್ : ಗುರುವಾರ ಬೆಳಗ್ಗೆ ಹಡ್ಸ್ ನ್ ವೃತ್ತದ ಬಳಿ ಬಿಎಂಟಿಸಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಪೆಟ್ರೋಲ್ ಬಂಕ್ ಗೆ ಡಿಕ್ಕಿ ಹೊಡೆದಿದೆ. ಮೆಜೆಸ್ಟಿಕ್ ನಿಂದ ಪರಂಗಿ ಪಾಳ್ಯಕ್ಕೆ ತೆರಳುತ್ತಿದ್ದ 340ಎ ಬಸ್ ಬೆಳಗ್ಗೆ 7.15ರ ಸುಮಾರಿಗೆ ಪೆಟ್ರೋಲ್ ಬಂಕ್ ಗೆ ನುಗ್ಗಿದೆ.
ಪೆಟ್ರೋಲ್ ಬಂಕ್ ಆಫ್ ಆಗಿದ್ದರಿಂದ ಸಂಭವಿಸಬಹುದಾಗಿದ್ದ ಭಾರೀ ಅನಾಹುತ ತಪ್ಪಿದೆ. ಚಾಲಕನ ಅಜಾಗರೂಕತೆಯೇ ಘಟನೆಗೆ ಕಾರಣ ಎಂದು ಪೊಲೀಸರು ಹೇಳಿದ್ದಾರೆ. ಬಸ್ ಚಾಲಕನನ್ನು ಬಂಧಿಸಲಾಗಿದೆ.












Click it and Unblock the Notifications