ಮತ್ತೆ ಬಿಜೆಪಿಗೆ ನಮೋ ಎಂದ ಶಶೀಲ್ ನಮೋಶಿ

ದಾವಣಗೆರೆಯಲ್ಲಿ ಮಂಗಳವಾರ ಮಾತನಾಡಿದ ಶಶೀಲ್ ನಮೋಶೀ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕೊನೆ ಕ್ಷಣದಲ್ಲಿ ಟಿಕೆಟ್ ಕೈ ತಪ್ಪಿತ್ತು. ಆದ್ದರಿಂದ, ಕಾರ್ಯಕರ್ತರ ಒತ್ತಾಯಕ್ಕೆ ಮಣಿದು ಜೆಡಿಎಸ್ ಸೇರಿದ್ದೆ. ಪುನಃ ನಾನು ಬಿಜೆಪಿಗೆ ಮರಳುಲು ತೀರ್ಮಾನಿಸಿದ್ದು, ಶೀಘ್ರದಲ್ಲೇ ಪಕ್ಷ ಸೇರತ್ತೇನೆ ಹಾಗೂ ವಿಧಾನಪರಿಷತ್ ಚುನಾವಣೆಗೆ ಸ್ಪರ್ಧಿಸುತ್ತೇನೆ ಎಂದು ಹೇಳಿದರು.
ಬಿಜೆಪಿ ತೊರೆದಿದ್ದರು : ವಿಧಾನಸಭೆ ಚುನಾವಣೆಯಲ್ಲಿ ಗುಲ್ಬರ್ಗಾ ಉತ್ತರ ಕ್ಷೇತ್ರದಿಂದ ಶಶೀಲ್ ನಮೋಶಿ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ಕೊನೆಯ ಕ್ಷಣದಲ್ಲಿ ಟಿಕೆಟ್ ಕೈ ತಪ್ಪಿತ್ತು. ಇದರಿಂದ ಕೋಪಗೊಂಡು ಜೆಡಿಎಸ್ ಸೇರಿದ್ದರು. (ಬಿಜೆಪಿ ತೊರೆದ ನಮೋಶಿ)
ಆದರೆ, ಚುನಾವಣೆಯಲ್ಲಿ ಗುಲ್ಬರ್ಗಾ ಉತ್ತರ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಳಿದು ಸೋಲು ಅನುಭವಿಸಿದ್ದರು. ಸದ್ಯ ಬಿಜೆಪಿ ಮರಳುತ್ತೇನೆ ಎಂದು ಹೇಳುವ ಮೂಲಕ ಬಿಜೆಪಿಗೆ ಮರಳಿ ಬನ್ನಿ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ.
ನಾಯಕರು ಬರುತ್ತಾರೆ : ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಪಕ್ಷ ಕೆಜೆಪಿ ಹಾಗೂ ಬಿಎಸ್‌ಆರ್ ಕಾಂಗ್ರೆಸ್ ಎಂದು ಮೂರು ಹೋಳಾಗಿರುವುದೇ ಕಾರಣ ಎಂದು ಶಶೀಲ್ ನಮೋಶಿ ವಿಶ್ಲೇಷಿಸಿದ್ದಾರೆ.
ಮುಂದಿನ ದಿನಗಳಲ್ಲಿ ಮೂರು ಪಕ್ಷಗಳ ನಾಯಕರು ಒಗ್ಗಟ್ಟಾಗುತ್ತೇವೆ. ಕಾಂಗ್ರೆಸ್ ಪಕ್ಷವನ್ನು ಎದುರಿಸುತ್ತೇವೆ. ಪಕ್ಷದ ಹಿರಿಯ ನಾಯಕರು ಈ ಕುರಿತು ಮಾತುಕತೆ ನಡೆಸಿದ್ದು, ತಾವು ಸೇರಿದಂತೆ ಹಲವು ಮುಖಂಡರು ಬಿಜೆಪಿ ಮರಳಲಿದ್ದೇವೆ ಎಂದು ನಮೋಶಿ ಹೇಳಿದರು.
ಬಿಜೆಪಿ, ಕೆಜೆಪಿ ಮತ್ತು ಬಿಎಸ್ಆರ್ ಕಾಂಗ್ರೆಸ್ ನಡುವಿನ ಮೈತ್ರಿಯ ಮಾತುಗಳು ರಾಜ್ಯದಲ್ಲಿ ಕೇಳಿ ಬರುತ್ತಿರುವಾಗಲೇ ಶಶೀಲ್ ನವೋಶಿ ಬಿಜೆಪಿಗೆ ಮರಳಲು ಸಿದ್ಧರಾಗಿದ್ದಾರೆ. ಇವರಿಂದಾಗಿ ಬಿಜೆಪಿಗೆ ಮರಳುವವರ ಅಭಿಯಾನಕ್ಕೆ ಚಾಲನೆ ದೊರಕಲಿದಯೇ ಕಾದು ನೋಡಬೇಕು.












Click it and Unblock the Notifications