ಟಿಪ್ಪು :ಮೈಸೂರು ಹುಲಿಯಲ್ಲ, ನರಭಕ್ಷಕ ಹುಲಿ
ಅಲ್ಪಸಂಖ್ಯಾತರ ವಿವಿ ಸ್ವಾಗತಾರ್ಹ ಬೆಳವಣಿಗೆ. ಆದರೆ, ಅದಕ್ಕೆ ಟಿಪ್ಪು ಸುಲ್ತಾನ್ ಹೆಸರಿಡುವುದನ್ನು ಸಹಿಸಲು ಸಾಧ್ಯವಿಲ್ಲ. ಆತ ಕ್ರೂರಿ, ಅನ್ಯಧರ್ಮ ದ್ವೇಷಿ ಹಾಗೂ ಎಲ್ಲಕ್ಕಿಂತ ಹೆಚ್ಚಾಗಿ ಕನ್ನಡ ವಿರೋಧಿಯಾಗಿದ್ದ, ಬಲವಂತ ಮತಾಂತರ ಮಾಡುತ್ತಿದ್ದ ಎಂದು ಖ್ಯಾತ ಇತಿಹಾಸ ತಜ್ಞ ಚಿದಾನಂದ ಮೂರ್ತಿ ಹೇಳಿದ್ದಾರೆ.
ಅಲ್ಪಸಂಖ್ಯಾತರಿಗಾಗಿ ಶಿಕ್ಷಣ ಸಂಸ್ಥೆಗಳನ್ನ ಸ್ಥಾಪಿಸಬಹುದೇ ಹೊರತು, ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಸಂವಿಧಾನದಲ್ಲಿ ಆಸ್ಪದವಿಲ್ಲ. ಮೇಲಾಗಿ ಟಿಪ್ಪು ಸುಲ್ತಾನ್ ಹೆಸರಿಟ್ಟರೆ ಅದು ಅಕ್ಷಮ್ಯ. ಹಿಟ್ಲರ್, ಗೋಡ್ಸೆ ಹೆಸರಿನಲ್ಲಿ ವಿವಿ ನಡೆಸಲು ಮಾಡಲು ಸಾಧ್ಯವೇ?
ಯಾವುದೇ ಜಾಗದಲ್ಲಿಯಾಗಲಿ ಟಿಪ್ಪು ಸುಲ್ತಾನ್ ಹೆಸರಿನಲ್ಲಿ ವಿವಿ ಬೇಡ. ಬೇರೆ ಮುಸ್ಲಿಮರ ಹೆಸರು ಇಡಲಿ. ಶಿಶುನಾಳ ಷರೀಫರ ಹೆಸರನ್ನು ಬೇಕಾದರೆ ಇಡಲಿ ಅಡ್ಡಿಯಿಲ್ಲ ಎಂದು ಚಿದಾನಂದ ಮೂರ್ತಿ ಹೇಳಿದ್ದಾರೆ.
ಮೈಸೂರಿನ ನರಭಕ್ಷಕ: ಟಿಪ್ಪು ನರ ರೂಪದ ರಾಕ್ಷಸನಾಗಿದ್ದ. ಬಲವಂತವಾಗಿ ಹಿಂದೂ, ಕ್ರಿಶ್ಚಿಯನ್ನರನ್ನು ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿದ್ದ.ಒಪ್ಪದವರನ್ನು ಅಮಾನುಷವಾಗಿ ಕೊಂದಿದ್ದ ಎಂಬುದಕ್ಕೆ ಆತನ ಮಗ ಬರೆದಿರುವ ಪುಸ್ತಕವೇ ಸಾಕ್ಷಿ ಇದೆ. ಟಿಪ್ಪು ಸುಲ್ತಾನ್ ಹುಲಿಯನ್ನು ಕೊಂದ ಬಗ್ಗೆ ನನಗೆ ತಿಳಿದಿಲ್ಲ, ಇಷ್ಟು ಮಾತ್ರ ಹೇಳಬಲ್ಲೆ ಆತ ನರಭಕ್ಷಕ ಹುಲಿ.

ಮೈಸೂರು ಮಹಾರಾಜರ ಕಾಲದಲ್ಲಿದ್ದ ಆಡಳಿತ ಭಾಷೆ ಕನ್ನಡವನ್ನು ಟಿಪ್ಪು ಸುಲ್ತಾನ್ ಬದಲಾವಣೆ ಮಾಡಿ ಪರ್ಷಿಯನ್ ಭಾಷೆಯನ್ನು ಆಡಳಿತ ಭಾಷೆಯನ್ನಾಗಿಸಿದ.
ಆತನ ಕಾಲದ ಎಲ್ಲಾ ಅಧಿಕೃತ ಪತ್ರಗಳು, ಐತಿಹಾಸಿಕ ಶಾಸನಗಳಲ್ಲಿ ಕನ್ನಡ ಮಾಯವಾಗಿದೆ. ಇದು ಆತನ ಕನ್ನಡ ವಿರೋಧಿತನ ತೋರಿಸುತ್ತದೆ. ಮೈಸೂರು ಮಹಾರಾಜರ ಕೈಯಿಂದ ಕಸಿದು ಕೊಂಡ ಸಾಮ್ರಾಜ್ಯವನ್ನು ಉಳಿಸಿಕೊಳ್ಳಲು ಬ್ರಿಟಿಷರ ವಿರುದ್ಧ ಹೋರಾಡಿದ ಮಾತ್ರಕ್ಕೆ ಆತ ಸ್ವಾತಂತ್ರ್ಶ ಹೋರಾಟಗಾರ ಎನಿಸುವುದಿಲ್ಲ. ಆತನದು ಸ್ವಾರ್ಥ ಹೋರಾಟ ಎಂದು ಚಿದಾನಂದ ಮೂರ್ತಿ ಹೇಳಿದ್ದಾರೆ.
ಮೇಲುಕೋಟೆ, ಶ್ರೀರಂಗಪಟ್ಟಣ, ಶೃಂಗೇರಿ ಮಠ, ನಂಜನಗೂಡು ದೇಗುಲಗಳಿಗೆ ದಾನ ದತ್ತಿ ನೀಡಿರುವ ಹಿಂದೆ ರಾಜಕೀಯ ಉದ್ದೇಶವಿತ್ತು. ಹೀಗಾಗಿ ಆತನ ಹೆಸರು ವಿವಿಗೆ ಇಡಬಾರದು ಎಂದು ಚಿದಾನಂದ ಮೂರ್ತಿ ಆಗ್ರಹಿಸಿದ್ದಾರೆ.
ಟಿಪ್ಪು ಹೆಸರಿನ ಬದಲು ಅಬ್ದುಲ್ ಕಲಾಂ ಅಥವಾ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಹೆಸರಿಡುವುದು ಸೂಕ್ತ ಎಂದು ಚಿದಾನಂದ ಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.
ಟಿಪ್ಪು ಅವರನ್ನು ಹೊಗಳುವ ಮೂಲಕ ವೋಟ್ ಬ್ಯಾಂಕ್ ರಾಜಕಾರಣ ಮಾಡಲಾಗುತ್ತಿದೆ. ಆತ ಕನ್ನಡಿಗರ ಪರ ಇರಲಿಲ್ಲ. ವ್ಯಾಪಾರಿ ಮನೋಭಾವದಿಂದ ಸಮಾಜ ಸುಧಾರಣೆ ಮುಂದಾಗಿದ್ದ ಅಷ್ಟೇ. ಆತನ ಸಚಿವ ಸಂಪುಟದಲ್ಲಿ ಒಬ್ಬ ಬ್ರಾಹ್ಮಣ ಇದ್ದ(ದಿವಾನ್ ಪೂರ್ಣಯ್ಯ) ಎಂದ ಮಾತ್ರಕ್ಕೆ ಆತ ಹಿಂದೂ ಪರ ಎಂದು ಹೇಳಲಾಗದು ಎಂದಿದ್ದಾರೆ.











Click it and Unblock the Notifications