ಸಿದ್ದರಾಮಯ್ಯ ಬಜೆಟ್ ಗೆ ಪ್ರತಿಪಕ್ಷಗಳ ಗುದ್ದು!
ಬೆಂಗಳೂರು, ಜು.12 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಚೊಚ್ಚಲ ಬಜೆಟ್ ಪ್ರತಿಕ್ಷಗಳ ಟೀಕೆಗೆ ಕಾರಣವಾಗಿದೆ. ಏಳು ಬಾರಿ ಬಜೆಟ್ ಮಂಡಿಸಿ, ಅನುಭವವಿರುವ ಸಿದ್ದರಾಮಯ್ಯ ಆರ್ಥಿಕ ಶಿಸ್ತು ಕಾಪಾಡಿಕೊಂಡಿಲ್ಲ. ಭವಿಷ್ಯದ ಯೋಜನೆಗಳ ಬಗ್ಗೆ ಸ್ಪಷ್ಟತೆ ಇಲ್ಲ ಎಂದು ಪ್ರತಿಪಕ್ಷಗಳು ಟೀಕಿಸಿವೆ.
ರಾಜ್ಯದ ಜನತೆಯ ಸಂರಕ್ಷಣೆ ನಮ್ಮ ಪ್ರಥಮ ಕರ್ತವ್ಯ. ಅವರ ಅಗತ್ಯಗಳ ಪೂರೈಕ ನಮ್ಮ ಸರಕಾರದ ಜವಾಬ್ದಾರಿ ಎಂದು ಭಾಷಣದಲ್ಲಿ ಹೇಳಿರುವ ಸಿಎಂ ಅದನ್ನು ಕಾರ್ಯರೂಪಕ್ಕೆ ತರಲು ವಿಫಲರಾಗಿದ್ದಾರೆ ಎಂದು ಪ್ರತಿಪಕ್ಷ ನಾಯಕ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.
ಬಿಜೆಪಿ ಸರ್ಕಾರದ ಹಿಂದಿನ ಬಜೆಟ್ ನ ನಕಲು ಪ್ರತಿ ಸಿದ್ದರಾಮಯ್ಯ ಬಜೆಟ್ ಎಂದು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಮತ್ತು ಮಾಜಿ ಸಿಎಂ ಡಿ.ವಿ.ಸದಾನಂಗೌಡ ಟೀಕಿಸಿದ್ದಾರೆ.
ಮಠ-ಮಾನ್ಯಗಳಿಗೆ ಸಿದ್ದರಾಮ್ಯ ಹಣ ನೀಡದಿದ್ದರೂ. ಬಜೆಟ್ ನಲ್ಲಿ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಿಲ್ಲ ಎಂದು ಪ್ರತಿಪಕ್ಷಗಳು ಒಗ್ಗಟ್ಟಿನಿಂದ ಹೇಳಿವೆ. ಬಜೆಟ್ ನಲ್ಲಿ ಹಿಂದಿನ ಸರ್ಕಾರ ಟೀಕಿಸಿರುವುದು ಪ್ರತಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದೆ. ಸಿದ್ದು ಬಜೆಟ್ ಗೆ ಪ್ರತಿಪಕ್ಷಗಳ ಗುದ್ದು ಹೇಗಿತ್ತು ನೋಡೋಣ.

ಬಜೆಟ್ ಭಾಷಣ ಓದಿದ್ದೇ ಸಾಧನೆ
ಜನತೆಯ ನಿರೀಕ್ಷೆ ಹುಸಿಗೊಳಿಸಿರುವ ಸಿಎಂ ಸಿದ್ದರಾಮಯ್ಯ ಎರಡು ಗಂಟೆ ಬಜೆಟ್ ಭಾಷಣ ಓದಿದ್ದೇ ದೊಡ್ಡ ಸಾಧನೆ ಎಂದು ಪ್ರತಿಪಕ್ಷ ನಾಯಕ ಎಚ್.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ. ಸಾಲದ ಹೊರಗೆ ಬಜೆಟ್ ಅನ್ನು ತಂದು ಇಟ್ಟಿದ್ದಾರೆ. ಅನುಭವವಿರುದ ಸಿಎಂರ ನಿರಾಶಾದಾಯಕ ಬಜೆಟ್ ಇದು. ಹಳೆಯ ಸರ್ಕಾರದ ಕಾರ್ಯಕ್ರಮವನ್ನು ಮುಂದುವರೆಸಿದ್ದಾರೆ. ಮದ್ಯ ಮೇಲಿನ ತೆರಿಗೆ ಹೆಚ್ಚಿಸಿ ಅಗ್ಗದ ಮದ್ಯ ನೀಡಲು, ಸಿಎಂ ಆಲೋಚಿಸಿದ್ದಾರೆ ಎಂದು ಕುಮಾರಸ್ವಾಮಿ ದೂರಿದ್ದಾರೆ.

ಬಿಜೆಪಿ ಸರ್ಕಾರದ ನಕಲಿ ಬಜೆಟ್
ಬಿಜೆಪಿ ಸರ್ಕಾರದ ಬಜೆಟ್ ಯೋಜನೆಗಳನ್ನು ಮುಂದುವರೆಸಿದ್ದಾರೆ. ಸಿಎಂ ಬಜೆಟ್ ನಲ್ಲಿ ಹೊಸ ಯೋಜನೆಗಳೇ ಇಲ್ಲ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಡಿ.ವಿ.ಸದಾನಂದಗೌಡ ಆರೋಪಿಸಿದ್ದಾರೆ. ಜನರು ಬಜೆಟ್ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟಿದ್ದರು. ಅದನ್ನು ಪೂರ್ಣಗೊಳಿಸಲು ಸಿಎಂ ವಿಫಲರಾಗಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಬೆಂಗಳೂರು ಅಭಿವೃದ್ಧಿ ಆಗೋಲ್ಲ
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವದಲ್ಲಿ ಇರುವ ತನಕ ಬೆಂಗಳೂರು ನಗರ ಅಭಿವೃದ್ಧಿ ಆಗೋಲ್ಲ ಎಂದು ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಟೀಕಿಸಿದ್ದಾರೆ. ಸಿಎಂ ಜನರ ನಿರೀಕ್ಷೆ ಹುಸಿಗೊಳಿಸಿದ್ದಾರೆ. ಬೆಂಗಳೂರು ನಗರದ ಅಭಿವೃದ್ಧಿಗೆ ಹೊಸ ಯೋಜನೆಗಳನ್ನು ಪ್ರಕಟಿಸಿಲ್ಲ ಎಂದು ಅಶೋಕ್ ಹೇಳಿದ್ದಾರೆ.

ಆರ್ಥಿಕ ಶಿಸ್ತು ಕಾಪಾಡಿಕೊಂಡಿಲ್ಲ
ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿದು ಇಂದು ಆರ್ಥಿಕ ಹಿಂಜರಿತ ಉಂಟಾಗುತ್ತಿದೆ. ಇದನ್ನು ತಪ್ಪಿಸಲು ಸಿಎಂ ಕ್ರಮ ಕೈಗೊಂಡಿಲ್ಲ. ಆರ್ಥಿಕ ಶಿಸ್ತು ಕಾಪಾಡಿಕೊಳ್ಳದೆ, ಪಕ್ಷದ ಪ್ರಣಾಳಿಕೆಯಂತೆ ಬಜೆಟ್ ಪುಸ್ತಕ ಓದಿದ್ದಾರೆ ಎಂದು ಜೆಡಿಎಸ್ ನಾಯಕ ಬಸವರಾಜ್ ಹೊರಟ್ಟಿ ದೂರಿದ್ದಾರೆ.

ಹಿಂದಿನ ಯೋಜನೆಗಳ ಕಥೆ ಏನು?
ಹಿಂದಿನ ಸರ್ಕಾರ ಜಾರಿಗೆ ತಂದಿದ್ದ ಶಾಲಾ ಮಕ್ಕಳಿಗೆ ಸೈಕಲ್ ನೀಡುವ ಯೋಜನೆ, ಸಂಧ್ಯಾ ಸುರಕ್ಷಾ, ಭಾಗ್ಯಲಕ್ಷ್ಮಿ ಯೋಜನೆಗಳಿಗೆ ಬಜೆಟ್ ನಲ್ಲಿ ಅನುದಾನ ನೀಡಿಲ್ಲ ಅದನ್ನು, ಮುಂದುವರೆಸುತ್ತಾರೋ? ನಿಲ್ಲಿಸುತ್ತಾರೋ ಎಂದು ಸರ್ಕಾರ ಸ್ಪಷ್ಟಪಡಿಸಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸರ್ಕಾರವನ್ನು ಪ್ರಶ್ನಿಸಿದ್ದಾರೆ. ಪ್ರತ್ಯೇಕ ಕೃಷಿ ಬಜೆಟ್ ಮಂಡನೆ ಮಾಡದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ದೊಡ್ಡ ಗಾತ್ರದ ಬಜೆಟ್ ಒಳಗೇನಿಲ್ಲ
ಸಿಎಂ ಸಿದ್ದರಾಮಯ್ಯ ಅವರ ಬಜೆಟ್ ಗಾತ್ರ ಹೆಚ್ಚಾಗಿದೆ. ಆದರೆ, ಅದರಲ್ಲಿ ಏನು ಇಲ್ಲ. ಜನಪರವಾದ ಯಾವ ಯೋಜನೆಗಳನ್ನು ಪ್ರಕಟಿಸಿಲ್ಲ. ಸಿದ್ದರಾಮಯ್ಯ ಅವರಿಗೆ ಬಜೆಟ್ ಮಂಡಿಸಿ ಅನುಭವವಿತ್ತು. ಆದರೂ ಜನರಿಗೆ ಅನುಕೂಲವಾಗುವ ಯೋಜನೆಗಳನ್ನು ನೀಡುವಲ್ಲಿ ವಿಫಲರಾಗಿದ್ದಾರೆ ಎಂದು ಮಾಜಿ ಸಚಿವ ಸಿ.ಟಿ.ರವಿ ಹೇಳಿದ್ದಾರೆ.


Click it and Unblock the Notifications
