ಕರ್ನಾಟಕದಲ್ಲಿ ಎರಡು ದಿನ ಭಾರೀ ಮಳೆ ಸಂಭವ
ಬೆಂಗಳೂರು, ಜು.12 : ಈ ವಾರ ಜನರ ವೀಕೆಂಡ್ ಕನಸಿಗೆ ವರುಣ ದೇವ ಅಡ್ಡಿ ಪಡಿಸಬಹುದು. ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಕರ್ನಾಟಕದಲ್ಲಿ ಎರಡು ದಿನ ಭಾರೀ ಮಳೆ ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಬುಧವಾರದಿಂದಲೇ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಉತ್ತಮವಾಗಿ ಮಳೆಯಾಗುತ್ತಿದೆ. ಶನಿವಾರ ಮತ್ತು ಭಾನುವಾರ ಹೆಚ್ಚಿನ ಮಳೆ ಬೀಳಬಹುದು ಎಂದು ಇಲಾಖೆ ಎಚ್ಚರಿಕೆ ನೀಡಿದೆ.
ಇಲಾಖೆಯ ಮಾಹಿತಿ ಪ್ರಕಾರ ಮುಂದಿನ 48 ಗಂಟೆಗಳಲ್ಲಿ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಪ್ರದೇಶದಲ್ಲಿ ಭಾರೀ ಮಳೆ ಬೀಳುವ ಸಂಭವವಿದೆ. ರಾಜಧಾನಿ ಬೆಂಗಳೂರಿನಲ್ಲಿಯೂ ನಾಲ್ಕು ದಿನಗಳಿಂದ ಮಳೆ ಸುರಿಯುತ್ತಿದ್ದು, ಇನ್ನೆರಡು ದಿನ ಹೆಚ್ಚಿನ ಮಳೆ ಬೀಳುವ ಸಾಧ್ಯತೆ ಇದೆ. (ಬೆಂಗಳೂರಿನಲ್ಲಿ ಮತ್ತೊಂದು ಭರ್ಜರಿ ಮಳೆ)
ಎರಡು ಕಡೆ ವಾಯುಭಾರ ಕುಸಿತ : ಅರಬ್ಬೀ ಸಮುದ್ರದ ಜೊತೆಗೆ ಬಂಗಾಳಕೊಲ್ಲಿಯಲ್ಲಿಯೂ ವಾಯುಭಾರ ಕುಸಿತ ಉಂಟಾಗಿದೆ ಎಂದು ಹವಾಮಾನ ಇಲಾಖೆ ನಿರ್ದೇಶಕ ಪುಟ್ಟಣ್ಣ ಹೇಳಿದ್ದಾರೆ. ಎರಡು ಕಡೆ ವಾಯುಭಾರ ಕುಸಿತ ಉಂಟಾಗಿರುವುದರಿಂದ ರಾಜ್ಯದಲ್ಲಿ ಭಾರೀ ಮಳೆ ನಿರೀಕ್ಷಿಸಲಾಗಿದೆ.
ಗುರುವಾರವೂ ಹೆಚ್ಚು ಮಳೆ : ಕೊಡಗು, ಮಂಗಳೂರಿನಲ್ಲಿ ಗುರುವಾರ ಬೆಳಗ್ಗೆ ಸ್ವಲ್ಪ ಬಿಡುವು ನೀಡಿದ್ದ ವರುಣ ದೇವ ಸಂಜೆಯ ವೇಳೆಗೆ ಮತ್ತೆ ಮಳೆ ಸುರಿಸಿದ್ದಾನೆ. ಮಂಗಳೂರಿನಲ್ಲಿ ಗುರುವಾರ ರಾತ್ರಿಯಿಂದಲೇ ಬಿರುಗಾಳಿ ಸಹಿತ ಭಾರೀ ಮಳೆ ಸುರಿಯುತ್ತಿದೆ.
ರಾಜಧಾನಿ ಬೆಂಗಳೂರು ಶಿರಸಿ, ರಾಯಚೂರು, ಬೆಳಗಾವಿ ಸೇರಿದಂತೆ ರಾಜ್ಯದ ಹಲವೆಡೆ ಗುರುವಾರ ಉತ್ತಮ ಮಳೆಯಾಗಿದೆ. ಮುಂಗಾರು ಆರಂಭವಾದ ನಂತರ ಮೊದಲ ಬಾರಿಗೆ ಬೆಳಗಾವಿಯಲ್ಲಿ ಉತ್ತಮ ಮಳೆಯಾಗಿದೆ.

ಬಿಸಿಲ ನಾಡಿನಲ್ಲಿ ಭರ್ಜರಿ ಮಳೆ : ಬಿಸಿಲನಾಡು ರಾಯಚೂರು ಜಿಲ್ಲೆಯಲ್ಲಿ ಮುಂಗಾರು ಮಳೆ ಗುರುವಾರ ಆರ್ಭಟಿಸಿದೆ. ಮಳೆಯ ಸುಳಿವಿಲ್ಲದೆ ಕಂಗಾಲಾಗಿದ್ದ ರೈತರು ಗುರುವಾರ ಸುರಿದ ಮಳೆಯಿಂದಾಗಿ ಸಂತಸಗೊಂಡಿದ್ದಾರೆ.
ಶನಿವಾರ ಮತ್ತು ಭಾನುವಾರ ರಜೆ ಇದೆ ಎಂದು ಹೊರ ಜಿಲ್ಲೆಗಳಿಗೆ ಪ್ರವಾಸ ಹೋಗುವ ಯೋಜನೆ ತಯಾರಿಸಿದ್ದರೆ, ನೀವು ಅದನ್ನು ಕೈ ಬಿಡುವುದು ಉತ್ತಮ. ಬೆಂಗಳೂರಿನಲ್ಲೂ ಉತ್ತಮ ಮಳೆ ಯಾಗುವ ಸಾಧ್ಯತೆ ಇದ್ದು, ಇಲ್ಲೇ ಇದ್ದು, ಮಳೆಯ ಮೋಜನ್ನು ಅನುಭವಿಸಬಹುದು.


Click it and Unblock the Notifications
