ಸಿಎಂ ಸಿದ್ದು ದೇಗುಲಕ್ಕೆ ಹೋಗಲಿಲ್ಲ: ಆದ್ರೆ ಸಂಜೆ ದಿಲ್ಲಿಗೆ
ಬೆಂಗಳೂರು, ಜುಲೈ 12: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸುಮಾರು ಮೂರು ಗಂಟೆ ಕಾಲ ನಿರರ್ಗಳವಾಗಿ 8 ಅವಧಿಗೆ ಪರಿಷ್ಕೃತ ಬಜೆಟ್ ಅನ್ನು ಮಂಡಿಸಿದ್ದಾರೆ. ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಬಹುತೇಕ ಜನಪ್ರಿಯ ಪ್ರಸ್ತಾವನೆಗಳನ್ನೇ ಮಂಡಿಸಿದ್ದಾರೆ. ಹಿಂದಿನ ಹಣಕಾಸು ಸಚಿವರುಗಳಂತೆ ಸಿಎಂ ಸಿದ್ದು ಯಾವುದೇ ದೇಗುಲಕ್ಕೆ ಹೋಗಲಿಲ್ಲ: ಆದರೆ ಸಂಜೆ ದೆಹಲಿಗೆ ತಲುಪಲಿದ್ದು ಕಾಂಗ್ರೆಸ್ ಅಧಿನಾಯಕಿಯನ್ನು ಭೇಟಿ ಮಾಡಲಿದ್ದಾರೆ.
ಹಿಂದಿನ ಬಿಜೆಪಿ ಸರಕಾರದ ಕಾರ್ಯ ನಿರ್ವಹಣೆಯನ್ನು ಕಟುವಾಗಿ ಟೀಕಿಸುತ್ತಲೇ ತಮ್ಮ ಬಜೆಟ್ ಭಾಷಣ ಆರಂಭಿಸಿದ ಸಿದ್ದರಾಮಯ್ಯ, ತಮ್ಮ ಸರಕಾರಕ್ಕೆ ಆರ್ಥಿಕ ಸಂಕಷ್ಟವೇ ಹಿಂದಿನ ಸರಕಾರದಿಂದ ಬಳುವಳಿಯಾಗಿ ಬಂದಿದೆ ಎಂದರು. 1,20,717 ಕೋಟಿ ರೂ. ಗಾತ್ರದ ಬಜೆಟ್ ಇದಾಗಿದೆ. 97,986 ಕೋಟಿ ರೂ. ರಾಜಸ್ವ ಸಂಗ್ರಹಣೆ ಗುರಿ, 22,731 ಕೋಟಿ ರೂ. ಬಂಡವಾಳ ಗುರಿ ಇದೆ.
ಹಿಂದಿನ ಸರಕಾರದ ನೀತಿಗಳಿಂದಾಗಿ ಆದಾಯ ಕಡಿಮೆಯಿತ್ತು, ಬಾಕಿ ಪಾವತಿಯ ಬಿಲ್ಲುಗಳು ಅಧಿಕವಾಗಿದ್ದವು, ಅಭಿವೃದ್ಧಿಯ ಫಲಿತಾಂಶಗಳು ನಿರಾಶಾದಾಯಕವಾಗಿದ್ದವು. ಕೇಂದ್ರ ಸರಕಾರದ ಅನುದಾನದ ಬಳಕೆಯೂ ಸಮರ್ಪಕವಾಗಿರಲಿಲ್ಲ ಎಂದ ಸಿದ್ದರಾಮಯ್ಯ, ನಮ್ಮ ಪಕ್ಷದ ಚುನಾವಣಾ ಪ್ರಣಾಳಿಕೆಯೇ ಮಾರ್ಗದರ್ಶಿಯಾಗಿದೆ. ಇದರ ಅನುಸಾರವಾಗಿ ಮುಂದುವರಿದು ರಾಜ್ಯವನ್ನು ಪ್ರಗತಿ ಪಥದಲ್ಲಿ ಮುಂದುವರಿಸುವುದಾಗಿ ತಮ್ಮ ಬಜೆಟ್ ಭಾಷಣದಲ್ಲಿ ಸಿದ್ದರಾಮಯ್ಯ ಹೇಳಿದರು.

ಯಾವುದೇ ದೇಗುಲಕ್ಕೆ ಭೇಟಿ ಇಲ್ಲ:
ಮುಖ್ಯಮಂತ್ರಿ ಆಗುವ ಕನಸು ಈಡೇರಿದ ಮೇಲೆ ತಮ್ಮ ದಾಖಲೆಯ 8ನೆ ಬಜೆಟ್ ಮಂಡಿಸಲು ಸಿದ್ದರಾಮಯ್ಯ ಅವರು ಇಂದು ಟೀಕುಟಾಕಾಗಿಯೇ ಬಂದಿದ್ದರು. ಶ್ವೇತವರ್ಣದ ನವಿರಾದ ಪಂಚೆ, ರೇಷ್ಮೆ ಶಲ್ಯ ಧರಿಸಿ ಬಂದ ಸಿದ್ದರಾಮಯ್ಯ ಅವರ ಲುಕ್ ಇಂದು ಡಿಫರೆಂಟಾಗಿತ್ತು. ಎಲ್ಲ ಮುಖ್ಯಮಂತ್ರಿ ಮತ್ತು ಹಣಕಾಸು ಸಚಿವರು ಬಜೆಟ್ ಮಂಡಿಸುವ ಮುನ್ನ ವಿಶೇಷ ಪೂಜೆ, ದೇಗುಲಗಳನ್ನು ಸುತ್ತಿ ಬಂದರೆ ಸಿದ್ದರಾಮಯ್ಯರವರು ಮಾತ್ರ ಯಾವುದೇ ದೇಗುಲಕ್ಕೆ ಭೇಟಿ ನೀಡಲಿಲ್ಲ. ಮನೆಯಲ್ಲಿ ಏಕಾಂಗಿಯಾಗಿಯೇ ಬಜೆಟ್ ಅವಲೋಕನ ಮಾಡಿ ಸೀದಾ ಸೌಧಕ್ಕೆ ಬಂದು ಸಂಪುಟ ಸಭೆ ನಡೆಸಿ ನಿಗಧಿಯಂತೆ 12.32ಕ್ಕೆ ಬಜೆಟ್ ಮಂಡಿಸಲು ಆರಂಭಿಸಿದರು.

ಸಿದ್ಧು ಸಂಜೆ ದೆಹಲಿಗೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ಮಂಡನೆ ನಂತರ ಇಂದು ಸಂಜೆ ತುರ್ತಾಗಿ ದೆಹಲಿಗೆ ತೆರಳಲಿದ್ದಾರೆ. ಆಹಾರ ಭದ್ರತಾ ಮಸೂದೆ ಬಗ್ಗೆ ಚರ್ಚೆ ಮಾಡಲು ಕಾಂಗ್ರೆಸ್ ಹೈಕಮಾಂಡ್ ಎಲ್ಲ ಮುಖ್ಯಮಂತ್ರಿಗಳಿಗೆ ಕರೆ ಕೊಟ್ಟಿರುವ ಹಿನ್ನೆಲೆಯಲ್ಲಿ ಸಿದ್ಧರಾಮಯ್ಯ ತರಾತುರಿಯಲ್ಲಿ ದೆಹಲಿಗೆ ತೆರಳಲಿದ್ದಾರೆ. ಹೈಕಮಾಂಡ್ ಆಹ್ವಾನದ ಮೇರೆಗೆ ಸಿದ್ಧರಾಮಯ್ಯ ಅವರು ದೆಹಲಿಗೆ ತೆರಳುತ್ತಿದ್ದು, ಆದಷ್ಟು ಬೇಗ ಆಹಾರ ಭದ್ರತಾ ಮಸೂದೆಯನ್ನು ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಲ್ಲಿ ಅನುಷ್ಟಾನಕ್ಕೆ ತರಬೇಕು ಎಂಬ ಕಾರಣಕ್ಕಾಗಿ ಮುಖ್ಯಮಂತ್ರಿಗಳಿಗೆ ಬುಲಾವ್ ನೀಡಲಾಗಿದೆ. ಇದೇ ಭೇಟಿ ಅವಧಿಯಲ್ಲಿ ಸಮನ್ವಯ ಸಮಿತಿ ರಚನೆ ಕುರಿತು ವರಿಷ್ಠರೊಂದಿಗೆ ಮಾತುಕತೆ ನಡೆಯಲಿದೆ ಎಂದು ಹೇಳಲಾಗುತ್ತಿದೆ.

ಬಜೆಟ್‌ನ ಪ್ರಮುಖ ಅಂಶಗಳು:
ನೊಂದವರ ನೋವ ನೋಯದವರೆತ್ತ ಬಲ್ಲರೋ ಎಂಬ ಅಕ್ಕಮಹಾದೇವಿ ವಚನದೊಂದಿಗೆ ಪರಿಶಿಷ್ಟ ಜಾತಿ ಮತ್ತು ವರ್ಗದ ಕಲ್ಯಾಣ ಕಾರ್ಯಕ್ರಮಗಳಿಗೆ ಭರಪೂರ ಯೋಜನೆಗಳನ್ನು ಪ್ರಕಟಿಸಿದ ಸಿದ್ದರಾಮಯ್ಯ, ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿ-ವರ್ಗದವರು, ಹಿಂದುಳಿದವರ ಶಿಕ್ಷಣ, ಆರೋಗ್ಯ, ವಸತಿ ಕ್ಷೇತ್ರಗಳಿಗಾಗಿ ಸಾಕಷ್ಟು ಕೊಡುಗೆಗಳನ್ನು ಮೀಸಲಿರಿಸಿದ್ದಾರೆ.

ವ್ಯಾಟ್ ದರ ಯಥಾಸ್ಥಿತಿ:
ಈ ಹಿಂದೆ ರಾಜ್ಯದಲ್ಲಿ ಉದ್ಯಮ ವಲಯದ ವಿರೋಧದ ನಡುವೆಯೂ ಮೌಲ್ಯವರ್ಧಿತ ತೆರಿಗೆಯನ್ನು ಯಶಸ್ವಿಯಾಗಿ ಜಾರಿಗೆ ತಂದಿದ್ದ ಸಿದ್ದರಾಮಯ್ಯನವರು ಈ ಬಾರಿ ಯಾಕೋ ಅದರ ತಂಟೆಗೆ ಹೋಗಿಲ್ಲ. ಸಂಪನ್ಮೂಲ ಕ್ರೋಢೀಕರಣಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದ್ದು ಮೌಲ್ಯವರ್ಧಿತ ತೆರಿಗೆಯನ್ನು ಪ್ರಸ್ತುತ ಇರುವ 14.5 ರ ದರದಲ್ಲೇ ಜು.31ರ ನಂತರವೂ ಮುಂದುವರಿಯಲಿದೆ.

ಆರ್ಥಿಕ ಸ್ವಾತಂತ್ರ್ಯ: ಜಿಎಸ್‌ಟಿಗೆ ಬೆಂಬಲ
ಆರ್ಥಿಕ ಸ್ವಾತಂತ್ರ್ಯಕ್ಕೆ ಯಾವುದೇ ಧಕ್ಕೆಯಾಗದಂತೆ ರಾಷ್ಟ್ರಮಟ್ಟದಲ್ಲಿ ನಡೆಯುತ್ತಿರುವ ಜಿಎಸ್‌ಟಿ ರಚನೆ ಕುರಿತ ಚರ್ಚೆಯಲ್ಲಿ ಸಕ್ರಿಯವಾಗಿ ಭಾಗವಹಿಸಲು ನಿರ್ಧರಿಸಲಾಗಿದ್ದು, ಹೊಸ ತೆರಿಗೆ ವ್ಯವಸ್ಥೆಗೆ ಒಳಪಡಲು ವಾಣಿಜ್ಯೋದ್ಯಮಗಳನ್ನು ಸಿದ್ದಪಡಿಸಿಕೊಳ್ಳಲಾಗುವುದು ಮತ್ತು ಜಿಎಸ್ ಟಿ ಸಮಾಲೋಚನಾ ಸಮಿತಿಯೊಂದನ್ನು ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಆರಂಭಿಸಲಾಗುವುದು ಎಂದು ಸಿಎಂ ಸಿದ್ದು ತಿಳಿಸಿದ್ದಾರೆ.


Click it and Unblock the Notifications
