ಇಷ್ಟೊಂದು ನೀರಿನ ಬಿಲ್? ಸಿಂಪ್ಲಿ ಇಂಪಾಸಿಬಲ್!

Shocking water bill by BWSSB, Bangalore
ಬೆಂಗಳೂರು, ಜು. 12 : ಬೆಂಗಳೂರಿನ ಅಪಾರ್ಟ್ಮೆಂಟ್‌ಗಳಲ್ಲಿ ವಾಸಿಸುವವರು ಬಳಸುವ ನೀರಿನ ದರವನ್ನು ಶೇ.270ರಷ್ಟು ಹೆಚ್ಚು ಮಾಡಿ ಬೆಂಗಳೂರು ಜಲಮಂಡಳಿ ಭಾರೀ ಶಾಕ್ ನೀಡಿರುವುದು ಎಲ್ಲರಿಗೂ ತಿಳಿದ ವಿಚಾರ. ಆದರೆ ನಿಜವಾದ ಶಾಕ್ ಹೊಡೆಯುವುದು ತಿಂಗಳ ಕೊನೆಯಲ್ಲಿ ಬಿಲ್ ಕೈಗೆ ಬಂದಾಗ. ಬಾಯಿ ಮುಚ್ಚಿಕೊಂಡು ಬಿಲ್ ಕಟ್ಟಲೇಬೇಕು, ಬೇರೆ ದಾರಿಯೇ ಇಲ್ಲ.

ಈಗ ಇದೇ ಜಲಮಂಡಳಿ ಡಿಫೆನ್ಸ್ ಕಾಲೋನಿಯಲ್ಲಿ ವಾಸಿಸುತ್ತಿರುವ ನಾಗರಿಕರೊಬ್ಬರಿಗೆ ಇದಕ್ಕಿಂತಲೂ ದೊಡ್ಡ ಶಾಕ್ ನೀಡಿದೆ. ಅದೂ ಮಳೆಗಾಲದಲ್ಲಿ. ಜೂನ್ ತಿಂಗಳ ನೀರಿನ ಬಿಲ್ ನೋಡಿ ಮನೆ ಮಾಲೀಕರು ಹೌಹಾರಿದ್ದಾರೆ. ಇಷ್ಟೊಂದು ನೀರಿನ ಬಳಕೆ ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಕ್ಕೆ ಮುಖಕ್ಕೆ ನೀರೆರಚುವಂಥ ಉತ್ತರ ನೀಡಿದೆ ಜಲಮಂಡಳಿ.

ನೀವು ಜೂನ್ ತಿಂಗಳಲ್ಲಿ 144,000 ಲೀಟರ್ ನೀರು ಬಳಸಿದ್ದೀರೆಂದು ಜಲಮಂಡಳಿ ನಾಗರಿಕರೊಬ್ಬರಿಗೆ ಬಿಲ್ ಕಳಿಸಿದೆ. ಅಂದರೆ, ಪ್ರತಿದಿನ 4,800 ಲೀಟರ್ ಬಳಸಿದ್ದೀರೆಂದು ಬಿಲ್ ಹೇಳುತ್ತಿದೆ. ಇದನ್ನು ಬಿಲ್ ಕುಲ್ ಒಪ್ಪಲು ಆ ನಾಗರಿಕರು ತಯಾರಿಲ್ಲ. ಇದು ಅಸಡ್ಡೆ, ಬೇಜವಾಬ್ದಾರಿಯ ಪರಮಾವಧಿ ಎಂದು ಅವರು ಆಕ್ರೋಶ ವ್ಯಕ್ತಪಡಿಸುತ್ತಾರೆ.

"ಮೇ ತಿಂಗಳಲ್ಲಿ 2,000 ಲೀಟರ್, ಏಪ್ರಿಲ್ ನಲ್ಲಿ 1,000 ಲೀಟರ್, ಮಾರ್ಚ್ ತಿಂಗಳಲ್ಲಿ 19,000 ಲೀಟರ್, ಫೆಬ್ರವರಿಯಲ್ಲಿ 8,000 ಲೀಟರ್, ಜನವರಿಯಲ್ಲಿ 4,000 ಲೀಟರ್ ಬಳಸಿರುವ ಬಿಲ್ ಬಂದಿದೆ. ಜೂನ್ ತಿಂಗಳಲ್ಲಿ ಮಾತ್ರ 144,000 ಲೀಟರ್ ಬಳಸಿರುವ ಬಿಲ್ ಬಂದಿದೆ. ಇದು ಹೇಗೆ ಸಾಧ್ಯ? ಅಲ್ಲದೆ ನಾವು ಪ್ರತಿದಿನ ಬೋರ್ ವೆಲ್ ನೀರನ್ನು ಕೂಡ ಬಳಸುತ್ತೇವೆ" ಎಂಬ ಅಂಕಿ ಅಂಶಗಳನ್ನು ಅವರು ನೀಡಿದ್ದಾರೆ.

ಇಲ್ಲಿ ಗಮನಿಸತಕ್ಕ ಸಂಗತಿಯೆಂದರೆ ಜನವರಿಯಿಂದ ಜೂನ್ ವರೆಗೆ ಬಂದಿರುವ ಎಲ್ಲ ಬಿಲ್ ಗಳು ಸಾವಿರದಿಂದ ಗುಣಿಸಲ್ಪಟ್ಟಿವೆ. ಅಚ್ಚರಿ ಅಂದರೆ ಇದೇ ಅಲ್ಲವೆ? ಇಷ್ಟು ಕಟ್ಟುನಿಟ್ಟಾಗಿ ನೀರು ಬಳಸಲು ಹೇಗೆ ಸಾಧ್ಯ? ಇದನ್ನು ಜಲಮಂಡಳಿ ಅಧಿಕಾರಿಗಳ ಗಮನಕ್ಕೆ ತಂದಾಗ, ಅವರು ನೀಡಿರುವ ಉತ್ತರ ಗಾಯದ ಮೇಲೆ ಉಪ್ಪು ಸುರಿದಂತಿದೆ ಅನ್ನುತ್ತಾರೆ ಅವರು.

ಜಲಮಂಡಳಿಯವರು ಹೇಳಿದ್ದೆಂದರೆ, ಸಂಪಿರುವ ಜಾಗದಲ್ಲಿ ಹಿಂದೆ ಮಾವಿನ ಮರ ನೆಟ್ಟಿದ್ದರಿಂದ, ಈಗ ನೀರು ಸಾಕಷ್ಟು ಪ್ರಮಾಣದಲ್ಲಿ ಸೋರಿಕೆಯಾಗುತ್ತಿದೆ. ಇದರಿಂದ ನೀರಿನ ಬಳಕೆ ಸಿಕ್ಕಾಪಟ್ಟೆ ಜಾಸ್ತಿಯಾಗಿ ಹೆಚ್ಚಿನ ಬಿಲ್ ಬಂದಿದೆ ಎಂದು ಅವರು ಕೈತೊಳೆದುಕೊಂಡು ಜಾರಿಕೊಂಡಿದ್ದಾರೆ. ಇಡೀ ಡಿಫೆನ್ಸ್ ಕಾಲೋನಿಗೆ ಹೆಚ್ಚಿನ ನೀರು ಸರಬರಾಜು ಆಗುತ್ತಿದೆ. ಉಳಿದವರಿಗೂ ಇದೇ ರೀತಿಯ ಬಿಲ್ ಬಂದಿದೆ ಎಂಬುದೂ ಅವರ ವಾದ.

ಈ ಪತ್ರ ಬರೆದ ನಾಗರಿಕರು ಹೇಳುವುದೇನೆಂದರೆ, ಪ್ರತಿದಿನ ಪ್ರತಿಯೊಬ್ಬರಿಂದ ಅಂದಾಜಿನಂತೆ 200 ಲೀಟರಿನಷ್ಟು ಬಳಕೆಯಾಗುತ್ತದೆ. ಈಗ ಬಂದಿರುವ ಬಿಲ್ ಪ್ರಕಾರ, ಮನೆಯಲ್ಲಿ ಕನಿಷ್ಠ 24 ಜನರು ಇರಬೇಕಾಗುತ್ತದೆ. ಆದರೆ, ಮನೆಯಲ್ಲಿರುವುದು 5 ಜನ ಮಾತ್ರ. ಜೊತೆಗೆ ನಾಲ್ಕು ನಾಯಿಗಳು. ಇದೆಲ್ಲದರ ಜೊತೆಗೆ ಚಾಲ್ತಿಯಲ್ಲಿರುವ ಬೋರ್ ವೆಲ್ ಕೂಡ ಬಳಸಲಾಗುತ್ತಿದೆ.

ಬೆಂಗಳೂರಿನಲ್ಲಿ ಜನರ ಪ್ರವಾಹ ಜಾಸ್ತಿಯಾಗುತ್ತಿದ್ದಂತೆ, ನೀರಿನ ಸದ್ಬಳಕೆ ಕಷ್ಟವಾಗುತ್ತಿರುವುದು ಸತ್ಯ ಸಂಗತಿ. ಒಂದು ಕಡೆ ದಿನದ 24 ಗಂಟೆ ನೀರು ಸುರಿಯುತ್ತಿದ್ದರೆ, ಮತ್ತೊಂದು ಕಡೆ ನಾಲ್ಕು ದಿನಕ್ಕೊಮ್ಮೆಯೂ ನೀರು ಬರುವುದಿಲ್ಲ. ಆದರೆ, ನಿರ್ಲಕ್ಷ್ಯದಿಂದ ಯಾರೋ ಒಬ್ಬರ ಮೇಲೆ ಈ ರೀತಿ ದರವನ್ನು ಹೇರುವುದು ಎಷ್ಟು ಸಮಂಜಸ? ನಿಮಗೂ ಹೀಗೇ ಆಗಿದೆಯಾ?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+