ಬಗೆಹರಿಯಿತು ಮಲ್ಲೇಶ್ವರಂ ಮಾರುಕಟ್ಟೆ ವಿವಾದ

ಮಲ್ಲೇಶ್ವರಂ ಮಾರುಕಟ್ಟೆಯ 49 ವ್ಯಾಪಾರಿಗಳು, ಮಾರುಕಟ್ಟೆ ಇರುವ ಸ್ಥಳದಲ್ಲಿ ನೂತನ ವಾಣಿಜ್ಯ ಕಟ್ಟಡ ನಿರ್ಮಿಸುವ ಬಿಬಿಎಂಪಿ ಕ್ರಮ ಪ್ರಶ್ನಿಸಿ ಹೈಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
ಗುರುವಾರ ಅರ್ಜಿಯ ವಿಚಾರಣೆ ಮುಂದುವರೆಸಿದ ನ್ಯಾಯಮೂರ್ತಿ ನಾಗಮೋಹನದಾಸ್ ಅವರ ಏಕ ಸದಸ್ಯ ಪೀಠ, ವ್ಯಾಪಾರಿಗಳು ಒಂದು ವಾರದೊಳಗೆ ತಾತ್ಕಾಲಿಕ ಶೆಡ್ ಗೆ ಅಂಗಡಿಗಳನ್ನು ಸ್ಥಳಾಂತರ ಮಾಡಬೇಕು ಎಂದು ನಿರ್ದೇಶನ ನೀಡಿದೆ.
ಹಿಂದಿನ ಆದೇಶದ ಪಾಲನೆ : ಮಾರುಕಟ್ಟೆ ವಿವಾದದ ಅರ್ಜಿಯ ಸಂಬಂಧ ಜೂನ್ 28ರಂದು ಆದೇಶ ನೀಡಿದ್ದ ಹೈಕೋರ್ಟ್ ವ್ಯಾಪಾರಿಗಳಿಗೆ ಅಂಗಡಿ ತೆರವು ಮಾಡುವಂತೆ ಸೂಚಿಸಿತ್ತು.
ಆದರೆ, ಬಿಬಿಎಂಪಿ ತಾತ್ಕಾಲಿಕ ಶೆಡ್ ಗಳಲ್ಲಿ ಸರಿಯಾದ ಸೌಕರ್ಯ ಒದಗಿಸಿಲ್ಲ ಎಂದು ವ್ಯಾಪಾರಿಗಳು ಅಂಗಡಿಗಳನ್ನು ಸ್ಥಳಾಂತರ ಮಾಡಿರಲಿಲ್ಲ. ಇದರಿಂದ ನೂತನ ಕಟ್ಟಡದ ಕಾಮಗಾರಿಗೆ ಅಡಚಣೆ ಉಂಟಾಗಿತ್ತು.
ಗುರುವಾರ ಹೈಕೋರ್ಟ್ ಗೆ ಹೇಳಿಕೆ ನೀಡಿರುವ ಬಿಬಿಎಂಪಿ, ತಾತ್ಕಾಲಿಕ ಶೆಡ್ ಗಳಲ್ಲಿ ಅಗತ್ಯ ಸೌಲಭ್ಯ ಕಲ್ಪಿಸಿದ್ದೇವೆ. 49 ದೂರುದಾರರಲ್ಲಿ, 39 ಜನರು ತಮ್ಮ ಅಂಗಡಿಗಳನ್ನು ತಾತ್ಕಾಲಿಕ ಶೆಡ್ ಗಳಿಗೆ ಸ್ಥಳಾಂತರ ಮಾಡಬಹುದು ಎಂದು ಹೇಳಿತು.
10 ವ್ಯಾಪಾರಿಗಳ ಅಂಗಡಿಗಳಿಗೆ ಯಾವುದೇ ಅನುಮತಿ ಪ್ರತವಿಲ್ಲ. ಆದರೂ ಅವರಿಗೆ ನಾವು ತಾತ್ಕಾಲಿಕ ಶೆಡ್ ಗಳಲ್ಲಿ ಅವಕಾಶ ಮಾಡಿಕೊಟ್ಟಿದ್ದೇವೆ. ನೂತನ ಮಾರುಕಟ್ಟೆ ನಿರ್ಮಾಣವಾದ ನಂತರ, 39 ವ್ಯಾಪಾರಿಗಳಿಗೆ ಅಲ್ಲಿ ಸ್ಥಳವಕಾಶ ಕಲ್ಪಿಸಲಾಗುವುದು ಎಂದು ಬಿಬಿಎಂಪಿ ಭರವಸೆ ನೀಡಿತು.
ಅನುಮತಿ ಪಡೆದರೆ ಮಳಿಗೆ : ಹೈಕೋರ್ಟ್ ಗೆ ದೂರು ಸಲ್ಲಿಸಿರುವ 10 ವ್ಯಾಪಾರಿಗಳ ಅಂಗಡಿಗಳಿಗೆ ಯಾವುದೇ ಅನುಮತಿ ಪತ್ರಗಳಿಲ್ಲ. ಈ ಮಳಿಗೆಗಳ ಮಾಲೀಕರು, ಅನುಮತಿ ಪತ್ರ ಪಡೆದರೆ, ಅವರಿಗೂ ನೂತನ ಮಾರುಕಟ್ಟೆಯಲ್ಲಿ ಸ್ಥಳವಕಾಶ ನೀಡುತ್ತೇವೆ ಎಂದು ಬಿಬಿಎಂಪಿ ಹೇಳಿದೆ.
ಎಷ್ಟು ವ್ಯಾಪಾರಿಗಳಿದ್ದಾರೆ : ಮಲ್ಲೇಶ್ವರಂ ಮಾರುಕಟ್ಟೆಯಲ್ಲಿ ಒಟ್ಟು 247 ಅಂಗಡಿಗಳಿವೆ. ಅವುಗಳಲ್ಲಿ 119 ಅಂಗಡಿ ಮಾಲೀಕರು ಸ್ಥಳಾಂತರಗೊಂಡಿದ್ದಾರೆ. ಉಳಿದವರು ಒಂದು ವಾರದಲ್ಲಿ ಸ್ಥಳಾಂತರಗೊಂಡರೆ, ಬಿಬಿಎಂಪಿ ನೂತನ ಮಾರುಕಟ್ಟೆ ನಿರ್ಮಾಣ ಕಾರ್ಯ ಪ್ರಾರಂಭಿಸಲಿದೆ.


Click it and Unblock the Notifications
