ಭ್ರಷ್ಟಾಚಾರಿ ಮಾಜಿ ರೈಲ್ವೆ ಸಚಿವನಿಗೆ ಗಲ್ಲು ಶಿಕ್ಷೆ

60 ವರ್ಷ ವಯಸ್ಸಿನ ಲಿಯು ಅವರಿಗೆ ಬೀಜಿಂಗ್ ನ ಎರಡನೇ ಮಧ್ಯಂತರ ಜನತಾ ನ್ಯಾಯಾಲಯ ಕಠಿಣ ಶಿಕ್ಷೆ ವಿಧಿಸಿದೆ ಎಂದು ಸರ್ಕಾರಿ ಸ್ವಾಮ್ಯದ ಜಿನುಹಾ ನ್ಯೂಸ್ ಏಜೆನ್ಸಿ ವರದಿ ಮಾಡಿದೆ. 25 ವರ್ಷಗಳ ಅಧಿಕಾರ ಅವಧಿಯಲ್ಲಿ ಸುಮಾರು 10.53 ಮಿಲಿಯನ್ ಯುಎಸ್ ಡಾಲರ್ ಗೂ ಅಧಿಕ ಮೊತ್ತ ಹಣ ಲಂಚ ರೂಪವಾಗಿ ಪಡೆದಿದ್ದರು ಎಂಬುದು ಸಾಬೀತಾಗಿದೆ.
ಭ್ರಷ್ಟಾಚಾರಿ ರಾಜಕಾರಣಿ ಲಿಯು ಅವರಿಗೆ ಮರಣ ದಂಡನೆ, ಜೀವಿತಾವಧಿಯಲ್ಲಿ ರಾಜಕೀಯ ಹಕ್ಕು ಹಿಂಪಡೆತ, ವೈಯಕ್ತಿಕ ಆಸ್ತಿ ಮುಟ್ಟುಗೋಲು ಮುಂತಾದ ಶಿಕ್ಷೆಗಳನ್ನು ನೀಡಲಾಗಿದೆ ಎಂದು ಆದೇಶದಲ್ಲಿ ಹೇಳಿದೆ. ಇದರ ಜೊತೆಗೆ ಅಧಿಕಾರ ದುರುಪಯೋಗ ಮಾಡಿದ ತಪ್ಪಿಗೆ 10 ವರ್ಷ ಕಠಿಣ ಶಿಕ್ಷೆ ಕೂಡಾ ವಿಧಿಸಲಾಗಿದೆ.
2003-2011ರ ಅವಧಿಯಲ್ಲಿ ಚೀನಾದ ತುಂಬಾ ಹೈ ಸ್ಪೀಡ್ ರೈಲ್ವೆ ಜಾಲ ಸಂಪರ್ಕ ಹೊಂದಿಸುವ ಯೋಜನೆ ಕೈಗೊಳ್ಳಲಾಗಿತ್ತು. ಈ ಅವಧಿಯಲ್ಲಿ ಲಿಯು ಅವರು ಅಧಿಕಾರ ದುರುಪಯೋಗ ಮಾಡಿ, ಲಂಚ ಪಡೆದಿದ್ದಾರೆ ಎಂದು ಆರೋಪಿಸಲಾಗಿತ್ತು. ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ ಕೋರ್ಟ್ ಮರಣ ದಂಡನೆ ವಿಧಿಸಿದೆ.
ಈ ಆದೇಶದ ನ್ಯಾಯಾಂಗ ಮರು ಪರೀಶಿಲನೆ ಮಾಡಲು ಇನ್ನೂ 2 ವರ್ಷ ಅವಧಿ ಬೇಕಾಗುತ್ತದೆ. ಭ್ರಷ್ಟಾಚಾರದ ವಿರುದ್ಧ ಸಮರ ಸಾರಿರುವ ಅಧ್ಯಕ್ಷ ಜಿ ಜಿಂಗ್ ಪಿಂಗ್ ಅವರು ಭ್ರಷ್ಟಾಚಾರಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆದೇಶಿಸಿದ್ದಾರೆ. 60 ವರ್ಷದ ಕಮ್ಯೂನಿಸ್ಟ್ ಆಡಳಿತ ಕಾಲದ ಕಠಿಣ ಶಿಕ್ಷೆಗಳು ಈಗ ಆರಂಭವಾಗಿದೆ. ಭ್ರಷ್ಟರು, ದುಷ್ಟರು, ಕಾಮಪಿಪಾಸುಗಳಿಗೆ ಕಡಿವಾಣ ಹಾಕಲಾಗುತ್ತದೆ ಎಂದು ಜನರು ನಿಟ್ಟುಸಿರು ಬಿಟ್ಟಿದ್ದಾರೆ.
ಲಿಯು ಅವರು ಡಿಂಗ್ ಯುಕ್ಸಿನ್ ಅವರಿಗೆ ರೈಲ್ವೆ ಕಾರ್ಗೊ ಗುತ್ತಿಗೆ ಕೊಡಿಸಿದ್ದು ಹಾಗೂ ಬುಲೆಟ್ ಟ್ರೈನ್ ವೀಲ್ ಕಂಪನಿ ಷೇರುಗಳನ್ನು ಮಾರಿದ್ದು ಮುಳುವಾಗಿದೆ. ಸ್ವಜನ ಪಕ್ಷಪಾತ, ಅಧಿಕಾರ ದುರುಪಯೋಗದಿಂದ ಸಾರ್ವಜನಿಕರಿಗೆ ಭಾರಿ ನಷ್ಟ ಉಂಟಾಗಿದೆ ಹಾಗೂ ಚೀನಾದ ಘನತೆಗೆ ಧಕ್ಕೆ ಉಂಟಾಗಿದೆ ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ಹೇಳಿದೆ.












Click it and Unblock the Notifications