ಮಾತೃಭಾಷೆ ಶಿಕ್ಷಣ ಎಂದರೇನು ವಿವರಿಸಿ: ಸುಪ್ರೀಂಕೋರ್ಟ್

19 ವರ್ಷಗಳ ಹಿಂದೆ ಜಾರಿಗೊಳಿಸಿದ್ದ ಭಾಷಾ ನೀತಿಯ ಔಚಿತ್ಯದ ಬಗ್ಗೆ ವಿಚಾರಣೆ ಸುಪ್ರೀಂ ಕೋರ್ಟ್ ನಡೆಸಿತ್ತು. ಶುಕ್ರವಾರ( ಜು.5) ಮಹತ್ವದ ತೀರ್ಪು ಪ್ರಕಟಿಸುವ ನಿರೀಕ್ಷೆಯಿತ್ತು. ಆದರೆ ತೀರ್ಪು ನೀಡುವ ಬದಲು ಸಾಂವಿಧಾನಿಕ ಪೀಠಕ್ಕೆ ವರ್ಗಾವಣೆ ಮಾಡಿದೆ. ಸುಪ್ರೀಂ ಕೋರ್ಟ್ ಪ್ರಕರಣದ ಕುರಿತು ಕೇಳಿದ ಪ್ರಶ್ನೆಗಳಿಗೆ ರಾಜ್ಯ ಸರ್ಕಾರ ತಕ್ಷಣಕ್ಕೆ ಉತ್ತರಿಸಲು ಆಗಲಿಲ್ಲ.
ಸುಪ್ರೀಂಕೋರ್ಟ್ ನ್ಯಾಯಪೀಠ ಕೇಳಿದ ಐದು ಪ್ರಶ್ನೆಗಳಿಗೆ ಸ್ಪಷ್ಟಣೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಲಾಯಿತು. ನಂತರ ಪ್ರಕರಣವನ್ನು ಸಾಂವಿಧಾನಿಕ ಪೀಠಕ್ಕೆ ವರ್ಗಾವಣೆ ಮಾಡಿ, ಸಾಂವಿಧಾನಿಕ ಪೀಠ ಈ ವಿಷಯದ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ನ್ಯಾಯಪೀಠ ಹೇಳಿದೆ.
ಭಾಷಾ ಮಾಧ್ಯಮ ನೀತಿ: ಖಾಸಗಿ ಶಾಲೆಗಳ ಪ್ರಾಥಮಿಕ ಶಿಕ್ಷಣದಲ್ಲೂ ಕನ್ನಡ ಮಾಧ್ಯಮ ಕಡ್ಡಾಯಗೊಳಿಸಿ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿತ್ತು. ಇದರ ವಿರುದ್ಧ ಖಾಸಗಿ ವಿದ್ಯಾಸಂಸ್ಥೆಗಳು ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದವು.
2008, ಜುಲೈ 2ರಂದು ಭಾಷಾ ಮಾಧ್ಯಮ ನೀತಿಯನ್ನು ಖಾಸಗಿ ಶಾಲೆಗಳ ಮೇಲೆ ಹೇರಲು ಬರುವುದಿಲ್ಲ ಎಂದು ಹೈಕೋರ್ಟ್ ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟಿನ ಹಿರಿಯ ನ್ಯಾಯಮೂರ್ತಿ ಪಿ.ಸದಾಶಿವಂ ನೇತೃತ್ವದ ಪೀಠ ಶುಕ್ರವಾರ ತೀರ್ಪು ನೀಡಬೇಕಿತ್ತು.
ಆದರೆ, ತೀರ್ಪು ಪ್ರಕಟಿಸದೆ ನ್ಯಾ. ಪಿ.ಸದಾಶಿವಂ ನೇತೃತ್ವದ ಪೀಠ ಸಾಂವಿಧಾನಿಕ ಪೀಠಕ್ಕೆ ವರ್ಗಾವಣೆ ಮಾಡಿದೆ. ಜೊತೆಗೆ ಈ ಕೆಳಗಿನ ಐದು ಪ್ರಶ್ನೆಗಳನ್ನು ಕೇಳಿದೆ:
1. ಮಾತೃ ಭಾಷೆ ಎಂದರೆ ಏನು? ಆಯಾ ರಾಜ್ಯದ ಪ್ರಾದೇಶಿಕ ಭಾಷೆಯೇ ಅಥವಾ ಮಕ್ಕಳ ಮಾತೃಬಾಷೆಯೇ?
2. ಮಾತೃ ಭಾಷೆ ನಿರ್ಧರಿಸುವುದು ಯಾರು? ಸರ್ಕಾರವೇ, ಪಾಲಕರೇ ಅಥವಾ ಮಕ್ಕಳೇ?
3. ಮಾತೃ ಭಾಷೆ ಹೇರುವುದರಿಂದ ಸಂವಿಧಾನದ ಕಲಂ 19(ಜಿ) ಉಲ್ಲಂಘನೆಯಾಗುತ್ತದೆಯೇ?
4. ಕಲಂ 350ಎ ಪ್ರಕಾರ, ರಾಜ್ಯ ಸರ್ಕಾರಕ್ಕೆ ಶಿಕ್ಷಣ ಸಂಸ್ಥೆಗಳ ಮೇಲೆ ಭಾಷೆ ಕಡ್ಡಾಯಗೊಳಿಸುವ ಹಕ್ಕು ಇದೆಯೇ?
5. 1994ರ ಸುಪ್ರೀಂ ಕೋರ್ಟ್ ತೀರ್ಪನ್ನು ಪುನರ್ ವಿಮರ್ಶೆ ಮಾಡಬೇಕೆ ಅಥವಾ ಬೇಡವೇ?
ಕರ್ನಾಟಕದಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ ನೀಡಬೇಕು ಎಂಬ ಉದ್ದೇಶದಿಂದ ರಾಜ್ಯ ಸರ್ಕಾರ 1994ರಲ್ಲಿ ಎಲ್ಲ ಖಾಸಗಿ ಶಾಲೆಗಳಲ್ಲಿ ಕನ್ನಡ ಮಾಧ್ಯಮದಲ್ಲೇ ಶಿಕ್ಷಣ ನೀಡಬೇಕು ಎಂದು ಆದೇಶಿಸಿತ್ತು. ಆದರೆ ರಾಜ್ಯ ಸರ್ಕಾರದ ಆದೇಶವನ್ನು ಪ್ರಶ್ನಿಸಿ ಖಾಸಗಿ ಶಾಲೆಗಳು ಕೋರ್ಟ್ ಮೆಟ್ಟಿಲೇರಿದ್ದವು. ಕನ್ನಡ ಮಾಧ್ಯಮ ಶಿಕ್ಷಣದ ಪರ-ವಿರೋಧ ಹೇಳಿಕೆಗಳು ಸರ್ಕಾರೇತರ ಸಂಸ್ಥೆಗಳ ಸಮೀಕ್ಷೆಗಳು ಸೇರಿ ಪ್ರಕರಣ ಕುತೂಹಲ ಕೆರಳಿಸಿತ್ತು.












Click it and Unblock the Notifications