ಶಾಲಾ ಮಕ್ಕಳಿಗೆ ಶೂ ಕೊಡುತ್ತೆ ಸರ್ಕಾರ!

ಬೆಂಗಳೂರಿನಲ್ಲಿ ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಪಠ್ಯಪುಸ್ತಕ ಮತ್ತು ಸಮವಸ್ತ್ರಗಳ ಜೊತೆಗೆ 1ರಿಂದ 5ನೇ ತರಗತಿವರೆಗಿನ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತವಾಗಿ ಶೂಗಳನ್ನು ನೀಡಲಾಗುವುದು ಎಂದರು.
ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಈ ಕುರಿತು ಶೀಘ್ರವೇ ನಿರ್ಣಯ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಖಾಸಗಿ ಸಹಭಾಗಿತ್ವದಲ್ಲಿ ಆಯಾ ಜಿಲ್ಲೆಯಲ್ಲಿಯೇ ಶೂಗಳನ್ನು ಖರೀದಿಸಿ ಮಕ್ಕಳಿಗೆ ನೀಡಲು ಚಿಂತನೆ ನಡೆದಿದೆ ಎಂದು ಕಿಮ್ಮನೆ ರತ್ನಾಕರ್ ಹೇಳಿದರು.
ತಮಿಳುನಾಡು ಮಾದರಿ : ತಮಿಳುನಾಡು ಸರ್ಕಾರ 1ರಿಂದ 5ನೇ ತರಗತಿಯ ಮಕ್ಕಳಿಗೆ ಪಠ್ಯ ಪುಸ್ತಕದ ಜೊತೆ ಶೂ ನೀಡುತ್ತಿದೆ. ಅಲ್ಲಿ ಈ ಯೋಜನೆ ಯಶಸ್ವಿಯಾಗಿದೆ. ಇದೇ ಮಾದರಿಯಲ್ಲಿ ಕರ್ನಾಟಕದಲ್ಲಿಯೂ ಶೂ ನೀಡುವ ಯೋಜನೆ ಜಾರಿಗೊಳಿಸಲು ಆಲೋಚಿಸಲಾಗಿದೆ ಎಂದು ತಿಳಿಸಿದರು.
ಹಿಂದಿನ ಬಿಜೆಪಿ ಸರ್ಕಾರ ಸಹ ಶಾಲಾ ಮಕ್ಕಳಿಗೆ ಶೂ ನೀಡುವ ಪ್ರಸ್ತಾವನೆಯನ್ನು ಮಾಡಿತ್ತು. ಶಿಕ್ಷಣ ಸಚಿವರಾಗಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ, ಈ ಕುರಿತು ಪ್ರಸ್ತಾವನೆ ತಯಾರಿಸಿ ಮುಖ್ಯಮಂತ್ರಿಗಳಿಗೆ ನೀಡಿದ್ದರು.
ಆದರೆ, ಸರ್ಕಾರ ಆ ಕುರಿತು ಆಸಕ್ತಿ ವಹಿಸಲಿಲ್ಲ. ಆದ್ದರಿಂದ ಯೋಜನೆ ಜಾರಿಗೆ ಬಂದಿಲ್ಲ. ಕಾಂಗ್ರೆಸ್ ಸರ್ಕಾರ ಯೋಜನೆ ಜಾರಿಗೊಳಿಸಲು ಮುಂದಾಗಿದೆ. ಅಧಿಕಾರಿಗಳು ಯೋಜನೆಯ ಮಾರ್ಗಸೂಚಿ ತಯಾರಿಸುತ್ತಿದ್ದಾರೆ ಎಂದು ಸಚಿವರು ಹೇಳಿದರು.
ಮೇ ತಿಂಗಳಗೆ ಪೂರ್ಣ : ಶಾಲೆಗಳು ಪ್ರಾರಂಭವಾದ ನಂತರ ಸಮವಸ್ತ್ರ ಹಾಗೂ ಪಠ್ಯಪುಸ್ತಕ ಪೂರೈಕೆಗೆ ಸಂಬಂಧಿಸಿದ ಟೆಂಡರ್ ಕರೆಯಲಾಗುತ್ತಿದೆ. ಇದರಿಂದ ಇವುಗಳ ವಿತರಣೆ ವಿಳಂಬವಾಗುತ್ತಿದೆ.
ಮುಂದಿನ ವರ್ಷ ಮೇ ತಿಂಗಳವೊಳಗೆ ಪಠ್ಯ ಪುಸ್ತಕ ಮತ್ತು ಸಮವಸ್ತ್ರಗಳನ್ನು ಮಕ್ಕಳಿಗೆ ಹಂಚಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಟೆಂಡರ್ ಬೇಗ ಕರೆದರೆ, ವಿಳಂಬ ತಪ್ಪಿಸಬಹುದು ಎಂದು ವಿಶ್ಲೇಷಿಸಿದರು.
ಹಾಲು ಇನ್ನೂ ಅರ್ಧಚಂದ್ರ : 1 ರಿಂದ 10 ನೇ ತರಗತಿ ವರೆಗಿನ ಮಕ್ಕಳಿಗೆ ಪ್ರತಿದಿನ ಹಾಲು ವಿತರಿಸುವ ಯೋಜನೆ ಜಾರಿಯಾಗುವ ಬಗ್ಗೆ ಅನುಮಾನ ಉಂಟಾಗಿದೆ. ಸ್ವತಃ ಸಿಎಂ ಸಿದ್ದರಾಮಯ್ಯ ಸರ್ಕಾರಿ ಶಾಲಾ ಮಕ್ಕಳಿಗೆ ಹಾಲು ನೀಡುತ್ತೇವೆ ಎಂದು ಹೇಳಿಲ್ಲ. ಆಲೋಚನೆ ಇದೆ ಎಂದು ಮಾತ್ರ ಹೇಳಿದ್ದೆ ಎಂದು ತಿಳಿಸಿದ್ದಾರೆ.(ಮೂರುದಿನ ಮಾತ್ರ ಶಾಲಾ ಮಕ್ಕಳಿಗೆ ಹಾಲು)
ಗುರುವಾರ ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಧಿಕಾರಿಗಳಿಗೆ ಈ ಕುರಿತ ಪ್ರಸ್ತಾವನೆ ನೀಡುವಂತೆ ಕೇಳಿದ್ದೆ. ಪ್ರಸ್ತಾವನೆ ಬಂದರೆ. ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.












Click it and Unblock the Notifications