ಐಟಿಬಿಟಿ ಯುವತಿಯರ ಮೇಲೆ ಪೊಲೀಸ್ ಹಲ್ಲೆ!

ಕಾಡುಗೋಡಿಯ ನಿವಾಸಿಗಳಾಗಿರುವ ನಾಲ್ವರು ಯುವತಿಯರು ಮತ್ತು ಅವರ ಸಹೋದ್ಯೋಗಿಗಳು ಭಾನುವಾರ ರಾತ್ರಿ ಊಟ ಮುಗಿಸಿ ಕಾರಿನಲ್ಲಿ ಹೋಗುತ್ತಿದ್ದರು. ಹೊಸಕೋಟೆ ಹೊರವಲಯದಲ್ಲಿರುವ ಕೆರೆಯ ಬಳಿ ಸಾಗುತ್ತಿದ್ದಾಗ, ವಾಯುವಿಹಾರ ಮಾಡಬೇಕೆಂದು ಓರ್ವ ಯುವತಿಗೆ ಅನ್ನಿಸಿದೆ. ಪುರುಷರು ಕಾರು ಬಳಿ ನಿಂತಿದ್ದರೆ, ಯುವತಿಯರು ಸರ್ವೀಸ್ ರಸ್ತೆಯಲ್ಲಿ ಉತ್ತಮ ಹವಾ ಸೇವನೆ ಮಾಡುತ್ತಿದ್ದರು.
ಆಗ ಅಲ್ಲಿ ಪೊಲೀಸ್ ವಾಹನ ಆಗಮಿಸಿದೆ. ಓರ್ವ ಯುವತಿ ಹೇಳುವ ಪ್ರಕಾರ, ಯಾಕೆ, ಏನು ಎಂಬುದನ್ನು ವಿಚಾರಿಸದೆ ಕಾರಿನ ಬಳಿ ನಿಂತಿದ್ದ ಪುರುಷರನ್ನು ಪೊಲೀಸರು ಥಳಿಸಲು ಆರಂಭಿಸಿದ್ದಾರೆ. ಇದನ್ನು ನೋಡಿ ಯುವತಿಯರು ಕಾರಿನ ಬಳಿ ಓಡಿದ್ದಾರೆ. ಆಗ, ಪೊಲೀಸರು ಯುವತಿಯರನ್ನು ಕೂಡ ಥಳಿಸಲು ಆರಂಭಿಸಿದ್ದಾರೆ.
ನಾವು ತಡೆಯಲು ಪ್ರಯತ್ನಿಸಿದರೂ ಕೆಟ್ಟ ಬೈಗುಳ ಬೈಯುತ್ತ ಆತ ಹೊಡೆಯಲು ಆರಂಭಿಸಿದ. ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಲು ವಿನಂತಿಸಿದರೂ ಅವರು ಕೇಳಲಿಲ್ಲ. ಪೊಲೀಸರಿಗೆ ದೂರು ನೀಡುವುದಾಗಿ ಬೆದರಿಸಿದಾಗ ಹೊಡೆಯುವುದನ್ನು ನಿಲ್ಲಿಸಿ ವಾಹನ ಹತ್ತಿ ಹೊರಟುಹೋದರು. ಅವರಿದ್ದ ವಾಹನ ಸಂಖ್ಯೆ ಕೆಎ 04 ಜಿ 420 ಇತ್ತೆಂದು ಯುವತಿಯರು ದೂರಿನಲ್ಲಿ ತಿಳಿಸಿದ್ದಾರೆ.
ಅವರು ಮೊದಲು ವೈಟ್ ಫೀಲ್ಟ್ ಪೊಲೀಸ್ ಠಾಣೆಗೆ ತೆರಳಿದ್ದಾರೆ. ಅಲ್ಲಿದ್ದ ಹೆಡ್ ಕಾನ್‌ಸ್ಟೇಬಲ್ ಶಾಂತರೀತಿಯಿಂದ ಅವರ ಕಥೆ ಕೇಳಿ ದೂರು ಬರೆಯಿಸಿಕೊಂಡಿದ್ದಾರೆ. ಆದರೆ, ಘಟನೆ ನಡೆದಿರುವುದು ಬೆಂಗಳೂರು ಗ್ರಾಮೀಣ ಜಿಲ್ಲೆಯ ಆವಲಹಳ್ಳಿಯಲ್ಲಿಯಾದ್ದರಿಂದ ದೂರನ್ನು ಆ ಠಾಣೆಯಲ್ಲಿ ದಾಖಲಿಸಿಕೊಳ್ಳಲಾಗಿದೆ. ಬೆಂಗಳೂರು ಗ್ರಾಮೀಣ ಜಿಲ್ಲೆಯ ಹೆಚ್ಚುವರಿ ಎಸ್ ಪಿ ಆಗಿರುವ ನಾಗರಾಜ್ ಅವರು ತನಿಖೆಗೆ ಆದೇಶಿಸಿದ್ದಾರೆ.
ಅಷ್ಟೊತ್ತಲ್ಲಿ ಹೋಗಿದ್ದು ಸರಿಯೆ? : ಹಗಲು ಹೊತ್ತಿನಲ್ಲಿಯೇ ಮಹಿಳೆಯರಿಗೆ ನಿರ್ಭೀತಿಯಿಂದ ಅಡ್ಡಾಡುವುದು ಕಷ್ಟವಾಗಿರುವಾಗ ಆ ನಡುರಾತ್ರಿಯಲ್ಲಿ ಯುವತಿಯರು ಯಾರೂ ಇಲ್ಲದಂಥ ಜಾಗದಲ್ಲಿ ಅಡ್ಡಾಡಲು ತೆರಳಿದ್ದು ಸರಿಯೆ? ಏನಾದರೂ ಹೆಚ್ಚುಕಮ್ಮಿ ಆಗಿದ್ದರೆ ಆಗ ಯಾರು ಜವಾಬ್ದಾರರಾಗಿರುತ್ತಿದ್ದರು? ಅಥವಾ ಏನೋ ಅನೈತಿಕ ಚಟುವಟಿಕೆ ನಡೆಯುತ್ತಿದೆ ಎಂದು ಯುವಕ, ಯುವತಿಯರ ಮೇಲೆ ಪೊಲೀಸರು ಹಲ್ಲೆ ಮಾಡಿದ್ದು ಸರಿಯೆ?











Click it and Unblock the Notifications