ಸದಾನಂದ ಗೌಡರಿಗೂ ಸಿಕ್ತು ಫಾರ್ಚೂನರ್ ಕಾರ್

ವಿಧಾನಸಭೆ ಮತ್ತು ವಿಧಾನ ಪರಿಷತ್ ಪ್ರತಿಪಕ್ಷ ನಾಯಕರು ಮುಖ್ಯಮಂತ್ರಿ ಸ್ಥಾನಮಾನ ಸಮಾನರು. ಹಾಗಾಗಿಯೇ ಜೆಡಿಎಸ್ ಪಕ್ಷದ ಕುಮಾರಸ್ವಾಮಿ ಮತ್ತು ಬಿಜೆಪಿಯ ಸದಾನಂದ ಗೌಡರಿಗೂ ಸದ್ಯಕ್ಕೆ ಕಾರು ಪ್ರಾಪ್ತಿಯಾಗಿದೆ. ಆದರೆ ಉಭಯ ಸದನಗಳ ಪ್ರತಿಪಕ್ಷದ ಈ ಇಬ್ಬರೂ ನಾಯಕರಿಗೆ ಸರಕಾರಿ ಬಂಗಲೆಗಳು ಇನ್ನೂ ಸಿಕ್ಕಿಲ್ಲ.
ಕ್ಯಾಬಿನೆಟ್ ದರ್ಜೆಯ ಸಚಿವ ಸ್ಥಾನಕ್ಕೆ ಅನುಗುಣವಾಗಿ 24 ಲಕ್ಷ ರೂ ಮೌಲ್ಯದ Fortuner ಇವರಿಬ್ಬರಿಗೂ ಪ್ರಾಪ್ತಿಯಾಗಿದೆ. ವಾಸ್ತವವಾಗಿ ಪ್ರತಿಪಕ್ಷದ ಈ ಇಬ್ಬರೂ ನಾಯಕರಿಗೆ ತಲಾ 16 ಲಕ್ಷ ರೂ. ಮೌಲ್ಯದ ವಾಹನ ಖರೀದಿಗೆ ಅವಕಾಶವಿದೆ. ಆದರೆ ಈ ಇಬ್ಬರೂ ನಾಯಕರು ಬೇಡಿಕೆಯಿಟ್ಟಿದ್ದು 20 ಲಕ್ಷ ರೂ ದಾಟಿದ ವಾನಹಕ್ಕೆ.
ಹಾಗಾಗಿ, ಹಣಕಾಸು ಇಲಾಖೆ ಮತ್ತು ಸಚಿವಾಲಯದ ಅಧಿಕಾರಿಗಳು ವಾಹನ ಮೌಲ್ಯ ಮಿತಿ ನೀತಿಗೆ ತಿದ್ದುಪಡಿ ತಂದು ಇಬ್ಬರಿಗೂ ತಲಾ 24 ಲಕ್ಷ ರೂ. ಮೌಲ್ಯದ ಕಾರು ಖರೀದಿಗೆ ಅಸ್ತು ಅಂದಿದ್ದಾರೆ. ಅಂದಹಾಗೆ ಈ ಎರಡೂ ವಾಹನಗಳಿಗೆ ತಗಲುವ ತೆರಿಗೆಗಳು ತಲಾ 4.80 ಲಕ್ಷ ರೂ.
ಇಡೀ ರಾಜ್ಯವನ್ನು ಸುತ್ತಾಡಲು Fortunerನಂತಹ ಬಲಾಢ್ಯ ವಾಹನದ ಅಗತ್ಯ ಬಹಳಷ್ಟಿದೆ ಎಂದು ಇಬ್ಬರೂ ನಾಯಕರು ಬೇಡಿಕೆಯಿಟ್ಟಿದ್ದರು. ಹಾಗಾಗಿ ಅನಿವಾರ್ಯವಾಗಿ ದುಬಾರಿ ವಾಹನಕ್ಕೆ ಅಸ್ತು ಅನ್ನಬೇಕಾಯ್ತು ಎಂದು ಹಣಕಾಸು ಇಲಾಖೆ ಮೂಲಗಳು ಹೇಳಿವೆ. ಈ ಹಿಂದೆ ಮಲ್ಲಿಕಾರ್ಜುನ ಖರ್ಗೆ ಮತ್ತು ಉಗ್ರಪ್ಪ ಸಹ ಇದೇ ರೀತಿ ದುಬಾರಿ ಬೇಡಿಕೆಯಿಟ್ಟು ದುಬಾರಿ ವಾಹನ ಸೌಲಭ್ಯ ಪಡೆದುಕೊಂಡಿದ್ದರು.












Click it and Unblock the Notifications