ಪೂರ್ಣ ಖಾಲಿಯಾಗಿದ್ದ ಕೆಆರ್ಎಸ್ ಭರ್ತಿಯಾಗುತ್ತಿದೆ!
ಮಂಡ್ಯ, ಜೂ.30 : ಬೆಂಗಳೂರು ಮತ್ತು ಮೈಸೂರು ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವ ಕಾವೇರಿ ನದಿ ಪಾತ್ರದ ಪ್ರಮುಖ ಜಲಾಶಯ ಕೆಆರ್ಎಸ್ ಭರ್ತಿಯಾಗುತ್ತಿದೆ. ಹದಿನೈದು ದಿನಗಳಲ್ಲಿ ಜಲಾಶಯದಲ್ಲಿ 28 ಅಡಿ ನೀರು ಸಂಗ್ರಹವಾಗಿದೆ.
ಸುಪ್ರೀಂಕೋರ್ಟ್ ಆದೇಶದಂತೆ ತಮಿಳುನಾಡಿಗೆ ನೀರು ಹರಿಸಿದ್ದರಿಂದ ಎರಡು ತಿಂಗಳ ಹಿಂದೆ ಕೆಆರ್ಎಸ್ ಜಲಾಶಯ ಸಂಪೂರ್ಣ ಬರಿದಾಗಿತ್ತು. ಇತಿಹಾಸದಲ್ಲೇ ದಾಖಲೆ ಪ್ರಮಾಣದ ನೀರಿನ ಕೊರತೆ ಜಲಾಶಯದಲ್ಲಿ ಕಂಡು ಬಂದಿತ್ತು.
ಮುಂಗಾರು ಮಳೆಯು ಕಾವೇರಿ ನದಿ ಹಾಗೂ ಉಪ ನದಿಗಳ ಪಾತ್ರಗಳ ಜಿಲ್ಲೆಗಳಲ್ಲಿ ಉತ್ತಮವಾಗಿ ಬಿಳುತ್ತಿರುವುದರಿಂದ ಕೃಷ್ಣರಾಜಸಾಗರ (ಕೆಆರ್ಎಸ್) ಜಲಾಶಯ ಭರ್ತಿಯಾಗುವತ್ತ ಸಾಗುತ್ತಿವೆ. ಶನಿವಾರ ಸಂಜೆ ಜಲಾಶಯದ ನೀರಿನ ಮಟ್ಟ 90.50 ಅಡಿಗೆ ತಲುಪಿದೆ.
ಶನಿವಾರ ಸಂಜೆ ದಾಖಲಾದಂತೆ, ಕೆಆರ್ಎಸ್ ಜಲಾಶಯಕ್ಕೆ 14,221 ಕ್ಯುಸೆಕ್ ನೀರು ಹರಿದು ಬರುತ್ತಿದೆ. ಹೊರಹರಿವು 1422 ಕ್ಯುಸೆಕ್ ಆಗಿದೆ. ಗರಿಷ್ಠ 124.80 ಅಡಿಯ ಜಲಾಶಯದಲ್ಲಿ 90.50 ಅಡಿ ನೀರು ಸಂಗ್ರಹಣೆಯಾಗಿದ್ದು, ಜುಲೈ ಅಂತ್ಯದ ವೇಳೆಗೆ ಜಲಾಶಯ ಭರ್ತಿ ಆಗಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.

ಕಳೆದ ವರ್ಷಕ್ಕಿಂತ ಹೆಚ್ಚು : ಕಳೆದ ವರ್ಷ ಈ ಸಮಯಕ್ಕೆ ಹೋಲಿಸಿದರೆ ಕೆಆರ್ಎಸ್‌ನಲ್ಲಿ ಈ ಬಾರಿ 15 ಅಡಿ ಹೆಚ್ಚು ನೀರು ಸಂಗ್ರಹವಾಗಿದೆ. ಕಳೆದ ವರ್ಷ ಜೂನ್ ಅಂತ್ಯಕ್ಕೆ ಜಲಾಶಯದಲ್ಲಿ 75 ಅಡಿ ನೀರಿನ ಸಂಗ್ರಹವಾಗಿತ್ತು.
ಆದರೆ, ಈ ಬಾರಿ 90.50 ಅಡಿಯಿದ್ದು ನೀರು ಸಂಗ್ರಹಣೆ ಗೊಂಡಿದೆ. ಒಳ ಹರಿವು 14,221 ಕ್ಯುಸೆಕ್ ಆಗಿದ್ದು, ಜಲಾಶಯದ ನೀರಿನ ಪ್ರಮಾಣ ಹೆಚ್ಚಾಗುತ್ತಲೇ ಇದೆ.
ಜಲಾಶಯ ಖಾಲಿಯಾಗಿತ್ತು: ಕೆಆರ್ಎಸ್ ಜಲಾಶಯದ ಇತಿಹಾಸದಲ್ಲೇ ಮೊದಲ ಬಾರಿಗೆ ಜೂ.13ರಂದು ಜಲಾಶಯದ ನೀರಿನ ಮಟ್ಟ 62.80 ಅಡಿಗೆ ಕುಸಿದಿತ್ತು. ಡೆಡ್ ಸ್ಟೋರೇಜ್ ಹಂತದಲ್ಲಿದ್ದ ನೀರನ್ನು ಬಗೆದು ಬೆಂಗಳೂರಿಗೆ ಕುಡಿಯುವ ನೀರು ಪೂರೈಸುವ ಸ್ಥಿತಿ ಎದುರಾಗಿತ್ತು. (ಪಾತಳ ತಲುಪಿದ ಕೆಆರ್ಎಸ್ ನೀರಿನ ಮಟ್ಟ)
ಜುಲೈ ಅಂತ್ಯಕ್ಕೆ ಭರ್ತಿ : ಜಲಾಶಯದ ಅಧಿಕಾರಿಗಳು ಜುಲೈ ಅಂತ್ಯದ ವೇಳೆಗೆ ಕೆಆರ್ಎಸ್ ಭರ್ತಿಯಾಗುವ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ. ಡ್ಯಾಂ ಭರ್ತಿಯಾಗಲು 34.80 ಅಡಿ ಬಾಕಿ ಇದೆ. ಮಳೆ ಹೀಗೆ ಮುಂದುವರೆದರೆ, ಡ್ಯಾಂ ಭರ್ತಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. (ಶುಕ್ರವಾರದ ರಾಜ್ಯದ ಜಲಾಶಯಗಳ ನೀರಿನ ಮಟ್ಟ)












Click it and Unblock the Notifications