ಪಾತಾಳಕ್ಕೆ ಇಳಿಯುತ್ತಿದೆ ಬಂಗಾರದ ಬೆಲೆ
ನವದೆಹಲಿ, ಜೂ.28: ಜಾಗತಿಕ ಮಾರುಕಟ್ಟೆಯಲ್ಲಿ ಬಂಗಾರದ ಬೆಲೆ ಗಣನೀಯ ಪ್ರಮಾಣದಲ್ಲಿ ಕುಸಿತ ಕಂಡಿದೆ. ಕಳೆದ ಒಂದು ವಾರದ ಅವಧಿಯಲ್ಲಿ ಶೇ.10ರಷ್ಟು ದರ ಇಳಿಮುಖವಾಗಿದೆ. ಕಳೆದ 23 ವರ್ಷಗಳಲ್ಲಿ ಕಾಣದಿದ್ದ ಪ್ರಮಾಣದಲಿ ಚಿನ್ನದ ಬೆಲೆ ಇಳಿಮುಖವಾಗಿದೆ. ನವದೆಹಲಿ ಚಿನ್ನ ಸುಮಾರು 1,150 ರು ಕಳೆದುಕೊಂಡು ಪ್ರತಿ 10 ಗ್ರಾಮ್ ಗೆ 23,900 ರು ಬಂದು ನಿಂತಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ವ್ಯತ್ಯಯ ರುಪಾಯಿ ಅಪಮೌಲ್ಯದ ನಡುವೆ ಷೇರುದಾರರು, ಹೂಡಿಕೆದಾರರು ಚಿನ್ನ ಮಾರಾಟಕ್ಕೆ ಮುಗಿಬಿದ್ದ ಕಾರಣ ಚಿನ್ನದ ದರ ಕುಸಿಯತೊಡಗಿದೆ.ಸಾಗರೋತ್ತರ ಮಾರುಕಟ್ಟೆಗಳಲ್ಲೂ ಇದೇ ಕತೆಯಾಗಿದೆ.
30 ವರ್ಷಗಳ ಅವಧಿಯಲ್ಲಿ ಇಷ್ಟು ಕಡಿಮೆ ಪ್ರಮಾಣದಲ್ಲಿ ಚಿನ್ನದ ದರ ಇಳಿಮುಖವಾಗಿರಲಿಲ್ಲ. ಅಪರಂಜಿ ಚಿನ್ನದ ಬೆಲೆಯಲ್ಲಿ ಶೇ.1.1 ಡಾಲರ್ ನಷ್ಟು ಕಡಿಮೆಯಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನ ಕುಸಿತ ಕಂಡಿದ್ದರಿಂದ ಭಾರತದಲ್ಲೂ ಗಣನೀಯವಾಗಿ ಕುಸಿತವಾಗಿದೆ. ಒಂದು ವಾರದ ಹಿಂದೆಯಷ್ಟೆ ಪ್ರತೀ ಗ್ರಾಂ ಚಿನ್ನದ ಬೆಲೆ ಸುಮಾರು 3 ಸಾವಿರ ರೂ. ಇತ್ತು.

ಆದರೆ, ಇಂದು ಆರಂಭಗೊಂಡ ಮಾರುಕಟ್ಟೆಯಲ್ಲಿ 22 ಕ್ಯಾರೆಟ್ ನ ಚಿನ್ನದ ಬೆಲೆ ಪ್ರತೀ ಗ್ರಾಂಗೆ 2,465 ರೂ. ಇತ್ತು. ಇದೇ ರೀತಿ 24 ಕ್ಯಾರೆಟ್ ನ ಚಿನ್ನದ ಬೆಲೆ ಪ್ರತೀ ಗ್ರಾಂಗೆ 2,635 ಇತ್ತು. ಎರಡು ದಿನಗಳ ಹಿಂದೆಯಷ್ಟೆ ಪ್ರತೀ ಗ್ರಾಂಗೆ 200 ರೂ.ನಿಂದ 250ರೂ. ಕುಸಿತ ಕಂಡಿದ್ದ ಚಿನ್ನದ ಬೆಲೆ ಬರುವ ದಿನಗಳಲ್ಲಿ ಇನ್ನಷ್ಟು ಇಳಿಮುಖವಾಗುವ ಸಾಧ್ಯತೆ ಇದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಜೂ.20 ರಿಂದ 28ರವರೆಗೆ ಅಂತ್ಯಗೊಂಡ ವಹಿವಾಟಿನಲ್ಲಿ ಪ್ರತೀ 10 ಗ್ರಾಂಗೆ ಚಿನ್ನದ ಬೆಲೆ ಶೇ.10ರಷ್ಟು ಇಳಿಕೆಯಾಗಿದೆ. ದುರದೃಷ್ಟವೆಂದರೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಕುಸಿದಿದ್ದರೂ ಆಭರಣ ಅಂಗಡಿಗಳಲ್ಲಿ ಇದು ಯಥಾಸ್ಥಿತಿಯನ್ನೇ ಕಾಯ್ದುಕೊಂಡಿದೆ.
ಜಗತ್ತಿನಲ್ಲೇ ಅತೀ ಹೆಚ್ಚು ಚಿನ್ನ ಖರೀದಿಸುವ ರಾಷ್ಟ್ರಗಳ ಪೈಕಿ ಭಾರತ ಹಾಗೂ ಚೀನಾ ಬಿಟ್ಟರೆ ಸಿಂಗಾಪುರದಲ್ಲಿ ಚಿನ್ನದ ಬೆಲೆ ಕುಸಿತ ಕಂಡಿದ್ದರಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಇದರ ಬೆಲೆ ದಿಢೀರನೆ ಕುಸಿತವಾಗಿದೆ. ಮಾರುಕಟ್ಟೆಯಲ್ಲಿ ದರ ಇಳಿಮುಖವಾಗಿದ್ದರೂ ಆಭರಣ ಅಂಗಡಿಗಳು ಗ್ರಾಹಕರಿಗೆ ಹಳೆಯ ದರದಲ್ಲೇ ಬಂಗಾರ ನೀಡುತ್ತಿದ್ದಾರೆ.
ವಿವಿಧ ನಗರಗಳಲ್ಲಿ ಚಿನ್ನದ ಬೆಲೆ(ಪ್ರತಿ 10 ಗ್ರಾಂಗೆ) ಇಂತಿದೆ:
* ಬೆಂಗಳೂರು: 22 K: 24,000 ರು; 24K : 25,800 ರು
* ಚೆನ್ನೈ : 22 K: 23,960 ರು; 24K : 25,750 ರು
* ದೆಹಲಿ : 22 K: 23,900 ರು; 24K : 25,650 ರು
* ಮುಂಬೈ: 22 K: 23,850 ರು; 24K : 25,650 ರು
* ಕೋಲ್ಕತ್ತಾ: 22 K: 24,002 ರು; 24K : 25,820 ರು
* ಹೈದರಾಬಾದ್ : 22 K: 24,005 ರು; 24K : 25,850 ರು
ಈ ವರ್ಷದ ಅಂತ್ಯಕ್ಕೆ ಚಿನ್ನದ ಬೆಲೆ ಶೇ.30ಕ್ಕೂ ಹೆಚ್ಚು ಇಳಿಕೆಯಾಗಲಿದೆ ಎಂದು ಯುಎಸ್ ಫೆಡರಲ್ ಬ್ಯಾಂಕ್ ನ ಅಧ್ಯಕ್ಷ ಬೆನ್ ಬರ್ನಾಕಿ ಅಭಿಪ್ರಾಯಪಟ್ಟಿದ್ದಾರೆ. ಶುದ್ಧ ಮತ್ತು ಅಪರಂಜಿ ಚಿನ್ನದ ಬೆಲೆ ಇಳಿಮುಖವಾಗುತ್ತಿರುವುದರಿಂದ ಕೊಳ್ಳುತ್ತಿರುವ ಗ್ರಾಹಕರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗಿದೆ.
ವಿಶೇಷವಾಗಿ ದೇಶದ ವಾಣಿಜ್ಯ ರಾಜಧಾನಿ ಮುಂಬೈ, ದೆಹಲಿ, ಕೋಲ್ಕತ್ತಾ, ಅಹಮದಾಬಾದ್, ಬೆಂಗಳೂರು ಸೇರಿದಂತೆ ಮತ್ತಿತರ ಕಡೆ ಬಂಗಾರ ಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ.












Click it and Unblock the Notifications