ಮತ್ತೆ 10 ಟಿಎಂಸಿ ನೀರು ಕೇಳಿದ ಜಯಲಲಿತಾ!

ಬುಧವಾರ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿರುವ ತಮಿಳುನಾಡು ಸರ್ಕಾರ, ಕಾವೇರಿ ಐ ತೀರ್ಪಿನ ಸುಗಮ ಪಾಲನೆಯ ದೃಷ್ಟಿಯಿಂದ ಕಾವೇರಿ ನಿರ್ವಹಣಾ ಮಂಡಳಿ ಸ್ಥಾಪಿಸಲು ಕೇಂದ್ರ ಸರ್ಕಾರಕ್ಕೆ ಸೂಚಿಸಬೇಕು ಮತ್ತು ತಕ್ಷಣಕ್ಕೆ 10 ಟಿಎಂಸಿ ನೀರು ಬಿಡುವಂತೆ ಕರ್ನಾಟಕಕ್ಕೆ ಆದೇಶಿಸಬೇಕು ಎಂದು ಕೋರಿದೆ.
ಕರ್ನಾಟಕದಲ್ಲಿ ಉತ್ತಮ ಮಳೆಯಾಗುತ್ತಿದೆ. ಜಲಾಶಯಗಳು ಭರ್ತಿಯಾಗುತ್ತಿವೆ. ನೀರಿನ ಮಟ್ಟದಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. ಆದ್ದರಿಂದ ಕೂಡಲೇ ತಮಿಳುನಾಡಿಗೆ 10 ಟಿಎಂಸಿ ನೀರು ಹರಿಸಬೇಕು. ನಂತರ ಐ ತೀರ್ಪಿನ ಅನ್ವಯ ನಿರಂತರವಾಗಿ ನೀರು ಹರಿಸುವಂತೆ ಸೂಚಿಸಬೇಕು ಎಂದು ಅರ್ಜಿಯಲ್ಲಿ ಮನವಿ ಸಲ್ಲಿಸಿದೆ. (ರಾಜ್ಯದ ಜಲಾಶಯಗಳ ನೀರಿನ ಮಟ್ಟ)
ಮೇಲುಸ್ತುವಾರಿ ಸಮಿತಿ ವಿಫಲ : ಪ್ರಸ್ತುತ ರಚನೆಗೊಂಡಿರುವ ಕಾವೇರಿ ಮೇಲುಸ್ತುವಾರಿ ಸಮಿತಿ ತಮಿಳುನಾಡಿಗೆ ನ್ಯಾಯ ಒದಗಿಸುವಲ್ಲಿ ವಿಫಲವಾಗಿದೆ. ಕಾವೇರಿ ನ್ಯಾಯಾಧೀಕರಣ ನೀಡಿರುವ ತೀರ್ಪನ್ನು ಜಾರಿಗೆ ತರಲು ಮೇಲುಸ್ತುವಾರಿ ಸಮಿತಿ ಸೋತಿದೆ ಎಂದು ತಮಿಳುನಾಡು ಆರೋಪಿಸಿದೆ.
ಆದದರಿಂದ ತಕ್ಷಣಾ ಕಾವೇರಿ ನಿರ್ವಹಣಾ ಮಂಡಳಿ ಸ್ಥಾಪಿಸಬೇಕು. ತಮಿಳುನಾಡಿಗೆ ನೀರು ಹರಿಸದೇ ಹಠಮಾರಿ ಧೋರಣೆಯನ್ನು ಮುಂದುವರೆಸಿರು ಕರ್ನಾಟಕ ಕಾನೂನನ್ನು ಸ್ಪಷ್ಟವಾಗಿ ಉಲ್ಲಂಘಿಸಿದೆ. ಆದ್ದರಿಂದ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕೆಂದು ತಮಿಳುನಾಡು ಸರ್ಕಾರ ತನ್ನ ಅರ್ಜಿಯಲ್ಲಿ ವಾದಿಸಿದೆ.
ಕಾವೇರಿ ವಿವಾದ ಆರು ತಿಂಗಳಲ್ಲಿ ಅಂತ್ಯ : ಸುಮಾರು ಎರಡು ಶತಮಾನದ ಕಾವೇರಿ ವಿವಾದ ಇನ್ನು ಆರು ತಿಂಗಳಲ್ಲಿ ಅಂತ್ಯ ಕಾಣಲಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಟಿ.ಬಿ.ಜಯಚಂದ್ರ ಹುಬ್ಬಳ್ಳಿಯಲ್ಲಿ ಹೇಳಿದ್ದಾರೆ. (ಕಾವೇರಿ ವಿವಾದ : ಜೂನ್ ತಿಂಗಳು ತಮಿಳುನಾಡಿಗೆ ನೀರಿಲ್ಲ)
ಕಾವೇರಿ ವಿವಾದ ಸುಮಾರು 205 ವರ್ಷಗಳ ಹಿಂದಿನದಾಗಿದ್ದು, ಕಾಂಗ್ರೆಸ್ ಸರ್ಕಾರಕ್ಕೆ ವಿವಾದ ಪರಿಹಾರ ಮಾಡುವ ಅವಕಾಶ ಸಿಕ್ಕಿದೆ. ಕಾವೇರಿ ವಿಚಾರವಾಗಿ ಸುಪ್ರೀಂಕೋರ್ಟ್‌ನಲ್ಲಿ ಆಗಸ್ಟ್‌ನಲ್ಲಿ ಅಂತಿಮ ಹಂತದ ವಿಚಾರಣೆ ನಡೆಯಲಿದೆ. ವಿವಾದ ಅಂತ್ಯವಾಗಲಿಗೆ ಎಂದು ಅವರು ಹೇಳಿದರು.
ಸುಪ್ರೀಂಕೋರ್ಟ್‌ನಲ್ಲಿ ರಾಜ್ಯದ ಪರವಾಗಿ ಸಮರ್ಥ ವಾದ ಮಂಡನೆಗೆ ರಾಜ್ಯ ಸರಕಾರ ಸಕಲ ರೀತಿಯಲ್ಲಿ ಸನ್ನದ್ಧವಾಗಿದೆ. ಪೂರ್ವಭಾವಿಯಾಗಿ ಅಗತ್ಯ ಎಲ್ಲ ತಯಾರಿ ಮಾಡಲಾಗುತ್ತಿದೆ. ರಾಜ್ಯದ ಜನರ ಹಿತಕ್ಕೆ ಧಕ್ಕೆ ಯಾಗದಂತೆ ಕಾವೇರಿ ವಿವಾದ ಬಗೆಹರಿಯಲಿದೆ ಎಂಬ ವಿಶ್ವಾಸವನ್ನು ಜಯಚಂದ್ರ ವ್ಯಕ್ತಪಡಿಸಿದರು.












Click it and Unblock the Notifications