ವಿದ್ಯಾರ್ಥಿನಿ ರೇಪ್ : 2 ಆರೋಪಿಗಳು ಆತ್ಮಹತ್ಯೆಗೆ ಯತ್ನ

ಇದೀಗ ಬರುತ್ತಿರುವ ಮಾಹಿತಿಯ ಪ್ರಕಾರ, ಮೂರನೇ ಆರೋಪಿ ಆನಂದ್ ಎಂಬುವವನು ಮಣಿಪಾಲ ಬಳಿಯ ಬಡಗುಬೆಟ್ಟು ಎಂಬ ಗ್ರಾಮದಲ್ಲಿ ತನ್ನ ಮನೆಯ ಹಿಂದುಗಡೆ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಆದರೆ, ಅವನನ್ನು ರಕ್ಷಿಸಲಾಗಿದ್ದು, ಕಸ್ತೂರಬಾ ಆಸ್ಪತ್ರೆದೆ ದಾಖಲಿಸಲಾಗಿದೆ. ಆತ ಪ್ರಾಣಾಪಾಯದಿಂದ ಪಾರಾಗಿದ್ದರೂ ಆತನ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದಕ್ಕೂ ಮೊದಲು, ರಾಜ್ಯಾದ್ಯಂತ ಸಂಚಲನವೆಬ್ಬಿಸಿದ್ದ ಈ ಪ್ರಕರಣದ ಪ್ರಮುಖ ಆರೋಪಿ ಯೋಗೀಶ್ ಕೂಡ, ಪೊಲೀಸರಿಗೆ ತಿಳಿಸುವ ಮುನ್ನ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದ. ಸಕಾಲದಲ್ಲಿ ಪೊಲೀಸರು ಆಗಮಿಸಿದ್ದರಿಂದ ಅವನನ್ನು ಕೂಡಲೆ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದ್ದರಿಂದ ಆತ ಕೂಡ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಪ್ರಮುಖ ಆರೋಪಿಯಾಗಿರುವ ರೌಡಿ ಶೀಟರ್ ಯೋಗೀಶ್ ಆಟೋ ಚಾಲಕನಾಗಿದ್ದು, ಯುವತಿಯನ್ನು ಅಪಹರಿಸಿ ಅತ್ಯಾಚಾರ ನಡೆಸುವ ದೃಶ್ಯವನ್ನು ತನ್ನ ಮೊಬೈಲಿನಲ್ಲಿ ಚಿತ್ರೀಕರಿಸಿಕೊಂಡಿದ್ದ. ಮೂವರೂ ಅವಿವಾಹಿತರಾಗಿದ್ದು, ಒಬ್ಬರನ್ನೊಬ್ಬರು ಬಲ್ಲವರಾಗಿದ್ದಾರೆ. ಈ ಮೊದಲು, ಆನಂದ್ ಎಂಬಾತ ಗೋವಾದಲ್ಲಿ ತಲೆಮರೆಸಿಕೊಂಡಿದ್ದ ಎಂದು ವರದಿಯಾಗಿತ್ತು.
ಯೋಗೀಶ್ ಮತ್ತು ಹರೀಶ್ ಅವರನ್ನು ಬಂಧಿಸಿರುವ ಬಗ್ಗೆ ಮತ್ತು ಅವರು ಸಿಕ್ಕಿರುವ ರೀತಿಯ ಬಗ್ಗೆ ಮಂಗಳೂರು ಪಶ್ಚಿಮ ವಿಭಾಗದ ಐಜಿಪಿ ಪ್ರತಾಪ್ ರೆಡ್ಡಿ ಅವರು ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದ್ದರು. ಯೋಗೀಶ್ ತಾನೇ ಪೊಲೀಸರಿಗೆ ಕರೆ ಮಾಡಿ, ತನ್ನನ್ನು ಹಿಡಿಯಲು ನಿಮ್ಮಿಂದ ಸಾಧ್ಯವಿಲ್ಲ ಎಂದು ಹೇಳಿ ವಿಷ ಸೇವಿಸಿದ್ದ ಎಂದು ತಿಳಿಸಿದ್ದರು. ಆತ ನೀಡಿದ ಮಾಹಿತಿಯ ಮೇರೆಗೆ ಹರೀಶ್‌ನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾದರು.
ಆರೋಪಿಗಳ ಬಗ್ಗೆ ಮಾಹಿತಿ ನೀಡಿದವರ ವಿವರಗಳನ್ನು ನೀಡಲಾಗುವುದಿಲ್ಲ ಎಂದು ಐಜಿಪಿ ಪ್ರತಾಪ್ ರೆಡ್ಡಿ ಅವರು ಸ್ಪಷ್ಟಪಡಿಸಿದ್ದಾರೆ. ಆದರೆ, ಮಾಹಿತಿ ನೀಡಿದವರೇ ಮಾಧ್ಯಮದೆದಿರು ಬಂದು ತಮ್ಮ ಬಗ್ಗೆ ಹೇಳಿಕೊಂಡರೆ ಅದರ ಬಗ್ಗೆ ತಾವು ಪ್ರತಿಕ್ರಿಯಿಸುವುದಿಲ್ಲ ಎಂದಿದ್ದಾರೆ. ಈ ಮೂವರು ಆರೋಪಿಗಳ ಬಗ್ಗೆ ಮಾಹಿತಿ ನೀಡಿದವರಿಗೆ 5 ಲಕ್ಷ ರು. ಬಹುಮಾನ ನೀಡುವುದಾಗಿ ಪೊಲೀಸ್ ಇಲಾಖೆ ಘೋಷಿಸಿತ್ತು. ಒಂದು ಮೂಲದ ಪ್ರಕಾರ, ಸುಖೇಶ್ ಎಂಬುವವರು ಆರೋಪಿಗಳ ಬಗ್ಗೆ ಮಾಹಿತಿ ನೀಡಿದ್ದಾರೆ.












Click it and Unblock the Notifications