ರಾಜ್ಯ ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯ್ ಸಿಂಗ್ ಹೆಗಲಿಗೆ

ಕಾಂಗ್ರೆಸ್ ನಾಯಕ ಜನಾರ್ದನ ದ್ವಿವೇದಿ ಅವರು ಭಾನುವಾರ(ಜೂ.16) ಸುದ್ದಿಗೋಷ್ಠಿ ನಡೆಸಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಬದಲಾವಣೆ ಬಗ್ಗೆ ವಿವರಿಸಿದರು. ಕೇಂದ್ರ ಸಚಿವ ಸ್ಥಾನ ತೊರೆದ ಅಜಯ್ ಮಾಕೇನ್ ಹಾಗೂ ಸಿಪಿ ಜೋಶಿ ಅವರನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೇರಿಸಲಾಗಿದೆ ಎಂದು ಹೇಳಿದರು.
ಮಾಜಿ ಕೇಂದ್ರ ಸಚಿವ ಎಸ್ಸೆಂ ಕೃಷ್ಣ, ಆಸ್ಕರ್ ಫರ್ನಾಂಡೀಸ್, ಎಂವಿ ರಾಜಶೇಖರನ್ ಅವರನ್ನು ವಿಶೇಷ ಆಹ್ವಾನಿತರನ್ನಾಗಿಸಲಾಗಿದೆ. ಆದರೆ, ಆಸ್ಕರ್ ಫರ್ನಾಂಡೀಸ್, ವಿಲಾಸ್ ಎಂ, ಗುಲಾಂ ನಬಿ ಆಜಾದ್ ಹಾಗೂ ಬೀರೇಂದ್ರ ಸಿಂಗ್ ಅವರನ್ನು ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ಕೆಳಗಿಳಿಸಲಾಗಿದೆ.
21 ಸದಸ್ಯರ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಹೊಸದಾಗಿ ರಚಿಸಲಾಗಿದ್ದು, ಅಜಯ್ ಮಾಕೇನ್ ಅವರು ಕಾಂಗ್ರೆಸ್ ಕಮ್ಯೂನಿಕೇಷನ್ ವಿಂಗ್ ಮುಖ್ಯಸ್ಥರಾಗಿದ್ದಾರೆ. ಹೊಸ ಸಮಿತಿಯಲ್ಲಿ ದಿಗ್ವಿಜಯ್ ಸಿಂಗ್, ಗುರುದಾಸ್ ಕಾಮತ್ ಅಂಬಿಕಾ ಸೋನಿ, ಶಕೀಲ್ ಅಹ್ಮದ್ ಅವರಿಗೂ ಸ್ಥಾನ ನೀಡಲಾಗಿದೆ.
ಅಹ್ಮದ್ ಪಟೇಲ್ ಅವರನ್ನು ಸೋನಿಯಾ ಗಾಂಧಿ ಅವರ ರಾಜಕೀಯ ಕಾರ್ಯದರ್ಶಿ ಸ್ಥಾನದಲ್ಲಿ ಮುಂದುವರೆಸಲಾಗಿದೆ. ಅಂಬಿಕಾ ಸೋನಿ ಅವರು ಪ್ರಧಾನ ಕಾರ್ಯದರ್ಶಿಯಾಗಿ ಸೋನಿಯಾ ಅವರ ಕಚೇರಿ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ.
ದಿಗ್ವಿಜಯ್ ಸಿಂಗ್ ಅವರಿಗೆ ಕರ್ನಾಟಕ, ಆಂಧ್ರಪ್ರದೇಶ ಹಾಗೂ ಗೋವಾ ರಾಜ್ಯಗಳ ಉಸ್ತುವಾರಿ ನೀಡಲಾಗಿದೆ. ರಾಹುಲ್-ದಿಗ್ವಿಜಯ್ ಅವರ ಜೋಡಿ ಉತ್ತರಪ್ರದೇಶದಲ್ಲಿ ಉತ್ತಮ ಸಾಧನೆ ತೋರದಿದ್ದರೂ ಮುಂಬರುವ ಚುನಾವಣೆ ದೃಷ್ಟಿಯಿಂದ ದಿಗ್ವಿಜಯ್ ಸಿಂಗ್ ಅವರನ್ನು ಆಂಧ್ರಪ್ರದೇಶ ಉಸ್ತುವಾರಿಯಾಗಿ ನೇಮಿಸಿರುವುದು ಕುತೂಹಲಕಾರಿಯಾಗಿದೆ.
ಹೊಸ ಸಮಿತಿ ವಿಶೇಷಗಳು:
* ದಿಗ್ವಿಜಯ್ ಸಿಂಗ್ ಅವರಿಗೆ ಕರ್ನಾಟಕ, ಆಂಧ್ರಪ್ರದೇಶ ಹಾಗೂ ಗೋವಾ ರಾಜ್ಯ ಉಸ್ತುವಾರಿ.
* ಸಿಪಿ ಜೋಶಿ ಅವರ ಹೆಗಲಿಗೆ ಪಶ್ಚಿಮ ಬಂಗಾಳ, ಅಸ್ಸಾಂ ಹಾಗೂ ಅಂಡಮಾನ್ ನಿಕೋಬಾರ್ ರಾಜ್ಯಗಳ ಉಸ್ತುವಾರಿ ಹೊಣೆ ನೀಡಲಾಗಿದೆ.
* ಕಾಂಗ್ರೆಸ್ ನಲ್ಲಿ ಒಟ್ಟು 42 ಕಾರ್ಯದರ್ಶಿಗಳು ಸೇರಿದಂತೆ 12 ಜನ ಪ್ರಧಾನ ಕಾರ್ಯದರ್ಶಿಗಳಿದ್ದಾರೆ.
* ಕರ್ನಾಟಕದ ಬಿ.ಕೆ ಹರಿಪ್ರಸಾದ್ ಅವರಿಗೆ ಛತ್ತೀಸ್ ಗಢ, ಜಾರ್ಖಂಡ್ ಹಾಗೂ ಒಡಿಶಾ ರಾಜ್ಯಗಳ ಉಸ್ತುವಾರಿ ನೀಡಲಾಗಿದೆ.
* ಹರಿಪ್ರಸಾದ್ ಅವರಿಗೆ ಭಕ್ತ ಚರಣ್ ದಾಸ್, ಶುಭಾಂಕರ್ ಸರ್ಕಾರ್ ಹಾಗೂ ತಾರಾ ಚಂದ್ ಭಂಗೊರಾ ಸಹಾಯಕರಾಗಿರುತ್ತಾರೆ.
* ಮೋತಿ ಲಾಲ್ ವೋರಾ ಅವರು ಎಐಸಿಸಿ ಖಜಾಂಚಿ ಹಾಗೂ ಅಹ್ಮದ್ ಪಟೇಲ್ ರಾಜಕೀಯ ಸಲಹೆಗಾರರ ಸ್ಥಾನದಲ್ಲಿ ಮುಂದುವರಿಕೆ.
* ಸಮಿತಿ ಹೀಗಿದೆ: ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮನಮೋಹನ್ ಸಿಂಗ್, ಎಕೆ ಅಂಟನಿ, ಅಹ್ಮದ್ ಪಟೇಲ್, ಅಜಯ್ ಮಾಕೇನ್, ಅಂಬಿಕಾ ಸೋನಿ, ಬಿಕೆ ಹರಿಪ್ರಸಾದ್, ಸಿಪಿ ಜೋಶಿ, ದಿಗ್ವಿಜಯ್ ಸಿಂಗ್, ಗುಲಾಂ ನಬಿ ಅಜಾದ್, ಗುರುದಾಸ್ ಕಾಮತ್, ಹೇಮಾ ಸೈಕಿಯಾ, ಜನಾರ್ದನ ದ್ವಿವೇದಿ, ಲೂಸಿನ್ಹೋ ಫಲೇರೊ, ಮಧುಸೂದನ್ ಮಿಸ್ತ್ರಿ, ಮೋಹನ್ ಪ್ರಕಾಶ್, ಮೋತಿಲಾಲ್ ವೋರಾ, ಮುಕುಲ್ ವಾಸ್ನಿಕ್, ಶಕೀಲ್ ಅಹ್ಮದ್












Click it and Unblock the Notifications