ಭಾರತದ ಯುವತಿ ಲಂಡನ್ನಿನಲ್ಲಿ ಹಠಾತ್ತನೆ ನಾಪತ್ತೆ

ಲಂಡನ್ನಿನ ಅತಿ ಜನದಟ್ಟಾದ ಆಕ್ಸ್ ಫರ್ಡ್ ಸ್ಟ್ರೀಟ್‌ನಲ್ಲಿ ತನ್ನ ತಾಯಿಯ ಜೊತೆ ಶಾಪಿಂಗ್ ಮಾಡುತ್ತಿದ್ದಾಗ ಇಮಾನ್ ಷಾ ಎಂಬ ಯುವತಿ ನಾಪತ್ತೆಯಾಗಿದ್ದಾಳೆ. ಹಾಲಿಡೇ ಮುಗಿಸಿ ಜೂನ್ 10ರಂದು ಅವರು ಭಾರತಕ್ಕೆ ವಾಪಸ್ ಆಗಬೇಕಾಗಿತ್ತು. ಅದೇ ದಿನ ಆಕೆ ನಾಪತ್ತೆಯಾಗಿದ್ದಾಳೆ.
5 ಅಡಿ 3 ಇಂಚು ಎತ್ತರ, ತೆಳ್ಳಗೆ ಬೆಳ್ಳಗೆ ಕಂದು ಕೂದಲಿರುವ ಇಮಾನ್ ಷಾ ನಾಪತ್ತೆಯಾದ ದಿನ ಎದೆಯ ಮೇಲೆ ಮ್ಯಾಂಚೆಸ್ಟರ್ ಯುನೈಟೆಡ್ ಲೋಗೋ ಇರುವ ಕಪ್ಪು ಬಣ್ಣದ ಜಾಕೆಟ್ ಧರಿಸಿದ್ದಳು ಮತ್ತು ಬೂದು ಬಣ್ಣದ ಪ್ಯಾಂಟ್ ಧರಿಸಿದ್ದಳು ಎಂಬ ವಿವರಗಳನ್ನು ನೀಡಲಾಗಿದೆ.
ಆಕ್ಸ್ ಫರ್ಡ್ ಸ್ಟ್ರೀಟ್ ಬಳಿಯ ಮಾರ್ಬಲ್ ಆರ್ಚ್ ನಲ್ಲಿರುವ ಫೈವ್ ಸ್ಟಾರ್ ಮರಿಯೊಟ್ ಹೋಟೆಲಿನಲ್ಲಿ ಷಾ ಕುಟುಂಬ ಠಿಕಾಣಿ ಹೂಡಿತ್ತು. ಆಕೆ ನಾಪತ್ತೆಯಾಗಿರುವುದು ತಿಳಿಯುತ್ತಿದ್ದಂತೆ ಆಕ್ಸ್ ಫರ್ಡ್ ಸ್ಟ್ರೀಟ್ ಗೆ ಧಾವಿಸಿ ಎಲ್ಲ ಕಡೆ ಹುಡುಕಿದರೂ ಆಕೆಯ ಸುಳಿವು ಸಿಕ್ಕಿಲ್ಲ. ಆಕೆಯ ಬಳಿ ಸ್ವಲ್ಪ ಹಣವಿತ್ತಂತೆ, ಆದರೆ ಮೊಬೈಲ್ ಫೋನ್ ಇರಲಿಲ್ಲ.
ಭಾರತದಲ್ಲಿ ಜಾಹೀರಾತು ಕಂಪನಿ ನಡೆಸುತ್ತಿರುವ ಆಕೆಯ ತಂದೆ ತನ್ವೀರ್ ಷಾ, "ಆಕೆ ಓದಿನಲ್ಲಿ ಚೆನ್ನಾಗಿದ್ದಳು. ಮುಂದಿನ ಓದಿಗೆ ವಿಶ್ವವಿದ್ಯಾಲಯದ ಹುಡುಕಾಟದಲ್ಲಿದ್ದಳು. ತುಂಬಾ ಖುಷಿಯಲ್ಲಿದ್ದ ಆಕೆಯ ನಾಪತ್ತೆಗೆ ಕಾರಣವೇ ಇಲ್ಲ. ನಾವೆಲ್ಲ ತುಂಬಾ ಚಿಂತಿತರಾಗಿದ್ದೇವೆ" ಎಂದು ದುಃಖ ತೋಡಿಕೊಂಡಿದ್ದಾರೆ.
ಆಕ್ಸ್ ಫರ್ಡ್ ಸ್ಟ್ರೀಟ್ ನಲ್ಲಿದ್ದ ಎಲ್ಲ ಸಿಸಿಟಿವಿಗಳ ರೆಕಾರ್ಡಿಂಗನ್ನು ಮೆಟ್ರೋಪಾಲಿಟನ್ ಪೊಲೀಸರು ನೋಡುತ್ತಿದ್ದು, ಸುಳಿವು ಸಿಕ್ಕ ಕೂಡಲೆ 101 ನಂಬರಿಗೆ ತಿಳಿಸಬೇಕೆಂದು ಕೋರಿದ್ದಾರೆ. ಕೆಲ ತಿಂಗಳ ಹಿಂದೆ ಲಂಡನ್ನಿನಲ್ಲಿ ಅಧ್ಯಯನ ಮಾಡುತ್ತಿದ್ದ ವಿದ್ಯಾರ್ಥಿ ಬೆಂಗಳೂರಿನ ಸೌವಿಕ್ ಪಾಲ್ ಇದೇ ರೀತಿ ದಿಢೀರನೆ ನಾಪತ್ತೆಯಾಗಿದ್ದರು. ಕೆಲ ದಿನಗಳ ನಂತರ ಅವರ ಶವ ಕಾಲುವೆಯೊಂದರಲ್ಲಿ ನಾಪತ್ತೆಯಾಗಿತ್ತು. (ಪಿಟಿಐ)












Click it and Unblock the Notifications