ಮೈಸೂರಿನಲ್ಲಿ ಪೊಲೀಸ್ ಅಧಿಕಾರಿಯ ದರ್ಪ ದೌರ್ಜನ್ಯ

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿಂದು ಬೆಳಗ್ಗೆ ಏನಾಯಿತೆಂದರೆ ಸರಕಾರಿ ಬಸ್ಸೊಂದು ಜಲಪುರಿ ಬಳಿ ಸಂಚರಿಸುತ್ತಿದ್ದಾಗ ಡ್ರೈವರ್ ಹಾರ್ನ್ ಮಾಡಿದ್ದಾರೆ. ಆದರೆ ಅವರು ಹಾಗೆ ಹಾರ್ನ್ ಮಾಡಿರುವುದು ಹಿರಿಯ ಪೊಲೀಸ್ ಅಧಿಕಾರಿ ಮಲ್ಲಿಕಾರ್ಜುನಪ್ಪ ಅವರ ಮನೆಯೆದುರು.
ಹಾರ್ನ್ ಕರ್ಕಶ ಶಬ್ದಕ್ಕೆ ಸಿಟ್ಟಿಗೆದ್ದ ಸಾಹೇಬರು ಮೆನೆಯ ಅಂಗಳದಲ್ಲಿ ನಿಲ್ಲಿಸಿದ್ದ ಇಲಾಖೆಯ ಜೀಪನ್ನು ಹೊರತೆಗೆದವರೇ ಸದರಿ ಬಸ್ಸನ್ನು ಅಟ್ಟಿಸಿಕೊಂಡು ಹೋಗಿದ್ದಾರೆ. ಅನತಿ ದೂರ ಸಾಗಿದ ಮೇಲೆ ಬಸ್ಸನ್ನು ಅಡ್ಡಗಟ್ಟಿದವರೇ ಚಾಲಕನನ್ನು ಕೆಳಗಿಳಿಸಿ ರಪ್ಪಾ ರಪ್ಪಾ ಎಂದು ಬಾರಿಸಿದ್ದಾರೆ.
ಹಿಂದಿನ ಬಾಗಿಲಿನಿಂದ ಇಳಿದುಬಂದ ನಿರ್ವಾಹಕ 'ಏನಾಯ್ತು ಯಾಕೆ ಹೊಡೆಯುತ್ತಿದ್ದೀರಿ' ಎಂದು ಪೊಲೀಸಪ್ಪನನ್ನು ಕೇಳಿದ್ದಕ್ಕೆ ಆತನಿಗೂ ಧರ್ಮದೇಟುಗಳು ಬಿದ್ದಿವೆ.
ಆನಂತರ ಪೊಲೀಸಪ್ಪನ ದೌರ್ಜನ್ಯಕ್ಕೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಂತೆ ಮಲ್ಲಿಕಾರ್ಜುನಪ್ಪ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಅಂದಹಾಗೆ ಮಲ್ಲಿಕಾರ್ಜುನಪ್ಪ ಸಿಎಆರ್ ವಿಭಾಗದಲ್ಲಿ ಎಸಿಪಿ ಆಗಿದ್ದಾರೆ. ಬಸ್ಸಿನ ಡ್ರೈವೈರ್ ಮತ್ತು ನಿರ್ವಾಹಕ ಘಟನೆಯಿಂದ ಕಂಗಾಲಾಗಿದ್ದಾರೆ, ಆದರೆ ಇನ್ನೂ ದೂರನ್ನೇನೂ ಕೊಟ್ಟಿಲ್ಲ.












Click it and Unblock the Notifications