ಒಳ್ಳೆಯ ಸಮಯದಲ್ಲಿ ಪ್ರಮಾಣ ವಚನ : ಡಿಕೆಶಿ

ಕುಕ್ಕೆ ಸುಬ್ರಮಣ್ಯದಿಂದ ಸೋಮವಾರ ಬೆಳಗ್ಗೆ ನಗರಕ್ಕೆ ಆಗಮಿಸಿದ ಡಿ.ಕೆ.ಶಿವಕುಮಾರ್ ಅವರನ್ನು ಸದಾಶಿವನಗರದ ನಿವಾಸದಲ್ಲಿ ಪರಮೇಶ್ವರ್ ಭೇಟಿ ಮಾಡಿ, ಸುಮಾರು ಒಂದು ತಾಸಿಗೂ ಹೆಚ್ಚುಕಾಲ ಮಾತುಕತೆ ನಡೆಸಿದರು.
ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಪರಮೇಶ್ವರ್, ಇದೊಂದು ಸೌಜನ್ಯದ ಭೇಟಿಯಾಗಿತ್ತು. ಅವರು ನಿರಂತರ ಕಾರ್ಯಕ್ರಮಗಳಿಂದಾಗಿ ಪ್ರಮಾಣವಚನ ಸ್ವೀಕರಿಸಿರಲಿಲ್ಲ. ಶೀಘ್ರವೇ ಪ್ರಮಾಣ ವಚನ ಸ್ವೀಕರಿಸುವಂತೆ ಸಲಹೆ ನೀಡಿದ್ದೇನೆ ಎಂದು ಹೇಳಿದರು. (ಕುಕ್ಕೆ ಸುಬ್ರಮಣ್ಯದಲ್ಲಿ ಡಿ.ಕೆ.ಶಿವಕುಮಾರ್ ಪ್ರತ್ಯಕ್ಷ!)
ಅಸಮಾಧಾನವಿಲ್ಲ : ಪಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಸಚಿವ ಸ್ಥಾನ ನೀಡಲಿಲ್ಲ. ಆದ್ದರಿಂದ ಅವರು, ಪ್ರಮಾಣವಚನ ಸ್ವೀಕರಿಸಿಲ್ಲ ಎಂಬುದು ಸುಳ್ಳು. ಶಾಸಕ, ಸಚಿವರಾಗಿ ಹಾಗೂ ಪಕ್ಷದ ಕಾರ್ಯಾಧ್ಯಕ್ಷರಾಗಿ ಹಲವು ಜವಾಬ್ದಾರಿಯನ್ನು ಅವರು ನಿರ್ವಹಿಸಿದ್ದಾರೆ.
ಪ್ರತಿಪಕ್ಷಗಳು ಪ್ರಮಾಣವಚನ ಸ್ವೀಕರಿದಿರುವುದನ್ನು ಅಸಮಾಧಾನ ಎಂದು ಹೇಳುತ್ತಿವೆ. ಪಕ್ಷದ ಶಿವಕುಮಾರ್ ಅವರ ಸೇವೆಯನ್ನು ಪರಿಗಣಿಸಿದೆ. ಶೀಘ್ರದಲ್ಲೇ ಅವರಿಗೆ ಸರಿಯಾದ ಸ್ಥಾನ ಮಾನ ನೀಡಲಾಗುವುದು ಎಂದು ಹೇಳಿದರು.
ಡಿ.ಕೆ. ಶಿವಕುಮಾರ್ ಸಚಿವರಾಗಬೇಕು ಎಂಬುದು ಬಹಳಷ್ಟು ಜನರ ಆಶಯವಾಗಿದೆ. ಈ ವಿಚಾರ ಹೈಕಮಾಂಡ್ ಗಮನದಲ್ಲಿದೆ. ನಮ್ಮ ಬಲಿಷ್ಠ ಹೈಕಮಾಂಡ್ ಸೂಕ್ತ ಸಮಯದಲ್ಲಿ, ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಡಾ. ಜಿ. ಪರಮೇಶ್ವರ್ ತಿಳಿಸಿದರು.
ನಾನು ಕಂಚಿನ ಕೊಡ : ಸಚಿವ ಸ್ಥಾನ ದೊರೆಯಲಿಲ್ಲ ಎಂದು ಯಾವುದೇ ಅಸಮಾಧಾನವಿಲ್ಲ. ದೆಹಲಿಗೆ ಭೇಟಿ ಕೊಟ್ಟು ಎಲ್ಲ ನಾಯಕರನ್ನು ಭೇಟಿ ಮಾಡಿದ್ದೇನೆ. ಪಕ್ಷ ನನ್ನನ್ನು ಬೆಳೆಸಿದೆ. ಪಕ್ಷದ ನಾಯಕರ ತೀರ್ಮಾನಗಳಿಗೆ ನಾನು ಬದ್ಧವಾಗಿ ಕಾರ್ಯ ನಿರ್ವಹಿಸುತ್ತೇನೆ ಎಂದು ಹೇಳಿದರು.
ನಾನು ಕುಂಬಾರ ಮಾಡಿದ ಮಡಿಕೆಯಲ್ಲ. ಕಂಚಿನ ಕೊಡ. ಉಪ್ಪುಹಾಕಿ ಉಜ್ಜಿದಷ್ಟೂ ಹೊಳಪಾಗುತ್ತೇನೆ. ಒಳ್ಳೆಯ ಸಮಯ ನೋಡಿ ಪ್ರಮಾಣವಚನ ಸ್ವೀಕರಿಸುತ್ತೇನೆ ಎಂದು ಹಲವಾರು ದಿನಗಳ ಗೊಂದಲಗಳಿಗೆ ತೆರೆ ಎಳೆದರು.












Click it and Unblock the Notifications