ರಾಷ್ಟ್ರೀಯ ಹೆದ್ದಾರಿಗಳಲ್ಲಿ ಆಂಬುಲೆನ್ಸ್ ಸೌಲಭ್ಯ

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧ್ಯಕ್ಷ ಆರ್.ಪಿ.ಸಿಂಗ್ ಶುಕ್ರವಾರ ಈ ಕುರಿತಾದ ಸುತ್ತೋಲೆ ಹೊರಡಿಸಿದ್ದಾರೆ. ಅತ್ಯಾಧುನಿಕ ಸೌಲಭ್ಯವುಳ್ಳ ಈ ಆಂಬುಲೆನ್ಸ್‌ಗಳಿಗೆ ಜಿಪಿಎಸ್ ಅಳವಡಿಸಲಾಗುತ್ತದೆ ಮತ್ತು ಒಂದು ಗಸ್ತು ವಾಹನವೂ ಆಂಬುಲೆನ್ಸ್ ಜೊತೆಗಿರಲಿದೆ.
ವಾರದ ಏಳು ದಿನವೂ 24 ಗಂಟೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಆಂಬುಲೆನ್ಸ್ ಮತ್ತು ಗಸ್ತು ವಾಹನಗಳು ಕಾರ್ಯನಿರ್ವಹಿಸಲಿವೆ. ಅಪಘಾತ ಸಂಭವಿಸಿದ ತಕ್ಷಣ ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗಳಿಗೆ ರವಾನಿಸಲು ಆಂಬುಲೆನ್ಸ್ ಸಹಾಯ ಮಾಡಲಿವೆ.
ಕಾರ್ಯ ವೈಖರಿ ಹೇಗೆ : ಸರ್ಕಾರಿ ಮತ್ತು ಖಾಸಗಿ ಪಾಲುದಾರಿಕೆ ಸಹಯೋಗದಲ್ಲಿ ಆಂಬುಲೆನ್ಸ್ ಗಳು ಕಾರ್ಯ ನಿರ್ವಹಿಸುತ್ತವೆ. ಪ್ರತಿ 50 ಕಿ.ಮೀ ಗಳಿಗೆ ಒಂದು ಆಂಬುಲೆನ್ಸ್ ಮತ್ತು ಗಸ್ತುವಾಹನಗಳು ನಿಯೋಜನೆಗೊಳ್ಳಲಿವೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮಾಹಿತಿಯಂತೆ, ಸದ್ಯ 245 ಆಂಬುಲೆನ್ಸ್ ಮತ್ತು ಗಸ್ತುವಾಹನಗಳ ಸೇವೆ ಪ್ರಾರಂಭವಾಗಲಿದೆ. ಒಟ್ಟು 10, 360 ಕಿ.ಮೀ ವ್ಯಾಪ್ತಿಯಲ್ಲಿ ಮೊದಲು ಈ ಸೇವೆ ಲಭ್ಯವಾಗಲಿದೆ. ಹಂತಹಂತವಾಗಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಈ ಯೋಜನೆ ಜಾರಿಗೆ ಬರಲಿದೆ.
ದೇಶದಲ್ಲಿ ಒಟ್ಟು 80 ಸಾವಿರ ಕಿ.ಮೀ. ರಾಷ್ಟ್ರೀಯ ಹೆದ್ದಾರಿ ಇದ್ದು, ಎಲ್ಲಾ ಹೆದ್ದಾರಿಗಳಲ್ಲೂ ಹಂತ-ಹಂತವಾಗಿ ಆಂಬುಲೆನ್ಸ್ ಮತ್ತು ಗಸ್ತು ವಾಹನಗಳು ನಿಯೋಜನೆಗೊಳ್ಳಲಿವೆ. ರಾಷ್ಟ್ರಮಟ್ಟದಲ್ಲಿ ಹೆದ್ದಾರಿ ಕಾಮಗಾರಿ ಪೂರ್ಣಗೊಂಡಲ್ಲಿ ಮಾತ್ರ ಆಂಬುಲೆನ್ಸ್ ಸೇವೆಗಳು ಪ್ರಾರಂಭವಾಗಲಿದೆ.












Click it and Unblock the Notifications